Advertisement

ಕಾಂಗ್ರೆಸ್‌ ಮುಸ್ಲಿಮರಿಗೆ ಸೀಮಿತಗೊಳಿಸಬೇಡಿ

12:46 PM Jul 18, 2019 | Naveen |

ಬಾಗಲಕೋಟೆ: ಕಳೆದ 2018ರ ವಿಧಾನಸಭೆ ಚುನಾವಣೆ ಹಾಗೂ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ನಿಖರ ಕಾರಣ ಹುಡುಕಲು ಆಗಮಿಸಿದ್ದ ಕೆಪಿಸಿಸಿಯ ಸತ್ಯ ಶೋಧನಾ ಸಮಿತಿ ಎದುರು ಹಲವು ಕಾರ್ಯಕರ್ತರು, ಪ್ರಮುಖರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಪಕ್ಷವನ್ನು ಕೇವಲ ಮುಸ್ಲಿಂರಿಗೆ ಸೀಮಿತಗೊಳಿಸಬೇಡಿ ಎಂದು ಹೇಳಿಕೊಂಡಿದ್ದಾರೆ.

Advertisement

ನಗರದ ಬಗನಿ ಸಮಾಜ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಕೆಪಿಸಿಸಿಯಿಂದ ಆಗಮಿಸಿದ್ದ ಸತ್ಯ ಶೋಧನಾ ಸಮಿತಿಯ ವಿ.ಆರ್‌. ಸುದರ್ಶನ, ಬಸವರಾಜ ರಾಯರಡ್ಡಿ, ವೀರಣ್ಣ ಮತ್ತಿಕಟ್ಟಿ, ಆರ್‌. ದೃವನಾರಾಯಣ ಹಾಗೂ ವೀರಕುಮಾರ ಪಾಟೀಲ ಎದುರು, ಜಿಲ್ಲೆಯ ಪಕ್ಷ ಹಳೆಯ ಕಾರ್ಯಕರ್ತರು, ಇಂತಹ ಹಲವು ವಿಷಯ ಗಮನಕ್ಕೆ ತಂದರು.

ಮುಸ್ಲಿಂ ಲೀಗ್‌ ಮಾಡ್ಬೇಡಿ: ಈಚಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಂರ ಓಲೈಕೆ ಹೆಚ್ಚು ಮಾಡಲಾಗುತ್ತಿದೆ. ಇದರಿಂದ ಪಕ್ಷದ ಪಾರಂಪರಿಕ ಇತರೆ ಸಮಾಜಗಳು ದೂರಾಗುತ್ತಿವೆ. ಒಂದು ರಾಜಕೀಯ ಪಕ್ಷವೆಂದಾಗ ಎಲ್ಲ ಸಮಾಜದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಆದರೆ, ಪಕ್ಷವನ್ನು ಮುಸ್ಲಿಂ ಲೀಗ್‌ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಕೆಲ ಮುಖಂಡರು, ಕೆಲವೇ ಕೆಲ ಸಮಾಜದ ಪ್ರಮುಖರನ್ನು ಅಕ್ಕ-ಪಕ್ಕ ಕರೆದುಕೊಂಡು ತಿರುಗುತ್ತಾರೆ. ಜವಾಬ್ದಾರಿಗಳನ್ನೂ ಅವರಿಗೇ ಕೊಡುತ್ತಾರೆ. ಅವರು ಕೇವಲ ವಿಜಿಟಿಂಗ್‌ ಕಾರ್ಡ್‌ ಮಾಡಿಕೊಂಡು ಸ್ವಯಂ ಪ್ರಚಾರ ಪಡೆಯುತ್ತಾರೆ ಹೊರತು, ಪಕ್ಷ ಸಂಘಟನೆ ಮಾಡುತ್ತಿಲ್ಲ. ಹೀಗಾದರೆ ಪಕ್ಷ ಬೆಳೆಯುವುದು ಹೇಗೆ ಎಂದು ಸಮಿತಿಯ ಸದಸ್ಯರ ಎದುರು ಕೆಲ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಪಕ್ಷ ಜವಾಬ್ದಾರಿ ಹೊತ್ತ ಮುಖಂಡರೊಬ್ಬರು ಉದಯವಾಣಿಗೆ ಖಚಿತಪಡಿಸಿದರು.

ಕಾಟಾಚಾರಕ್ಕೆ ಬಂದು ಹೋಯ್ತಾ ಸಮಿತಿ?: ಸೋಲಿನ ಪರಾಮರ್ಶೆ ಮಾಡುವ ಜತೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕುರಿತು ತಳ ಮಟ್ಟದ ಅಭಿಪ್ರಾಯ ಪಡೆಯಬೇಕಾದ ಸತ್ಯ ಶೋಧನಾ ಸಮಿತಿ, ಕೇವಲ ಕಾಟಾಚಾರಕ್ಕೆ ಬಂದು ಹೋಗಿದೆ. ತಪ್ಪು ಮಾಡಿದವರಿಂದಲೇ ಮಾಹಿತಿ ಪಡೆಯುವ ಪ್ರಯತ್ನಗಳೂ ನಡೆದವು. ವಾಸ್ತವ ಸಮಸ್ಯೆ ಅರಿಯಲು, ತಳಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಿತ್ತು. ಅಲ್ಲದೇ ಇಂತಹ ಪ್ರಮುಖ ಸಮಿತಿ ಹಿರಿಯ ಸದಸ್ಯರು ಜಿಲ್ಲೆಗೆ ಬಂದಾಗ, ಜವಾಬ್ದಾರಿಯುತ ನಾಯಕರು, ಕೆಲವು ಬ್ಲಾಕ್‌ಗಳ ಅಧ್ಯಕ್ಷರೇ ಬಂದಿರಲಿಲ್ಲ. ಅಲ್ಲದೇ ಬೆಳಗ್ಗೆ 10:30ರಿಂದ ಸಂಜೆ 5ರವರೆಗೂ ಜಿಲ್ಲೆಯ ಎಲ್ಲಾ ಎಂಟೂ ವಿಧಾನಸಭೆ ಕ್ಷೇತ್ರಗಳು, ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆ, ಸೋಲಿನ ವಿವರಣೆ ಪಡೆಯುವುದಾಗಿ ಹೇಳಿ, ಕೇವಲ ಮೂರು ಗಂಟೆ ಇದ್ದು, ಮರಳಿ ಹೋಗಿದ್ದಾರೆ. ಹೀಗಾಗಿ ಕೆಪಿಸಿಸಿಗೆ ಸತ್ಯ ಮಾಹಿತಿ ಹೋಗುವುದು ಅನುಮಾನ ಎಂದು ಹಿರಿಯ ಮುಖಂಡರೊಬ್ಬರು ಅನುಮಾನ ವ್ಯಕ್ತಪಡಿಸಿದರು.

ಗರಂ ಆಗಿದ್ದ ಸಮಿತಿ ಸದಸ್ಯರು: ಬೆಳಗ್ಗೆ 11ರ ಬಳಿಕ ವಿಧಾನಸಭೆ ಮತಕ್ಷೇತ್ರವಾರು ಬ್ಲಾಕ್‌ ಅಧ್ಯಕ್ಷರು, ಸೋತ ಅಭ್ಯರ್ಥಿಗಳು, ಕೆಪಿಸಿಸಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಂದ ಸಮಿತಿ ಸದಸ್ಯರು ಅಭಿಪ್ರಾಯ ಪಡೆದರು. ಅಲ್ಲದೇ ಕೆಪಿಸಿಸಿಯಿಂದ ನಿರ್ದಿಷ್ಟಪಡಿಸಿದ್ದ ಪ್ರಶ್ನಾವಳಿಗಳ ಪ್ರತಿಯನ್ನು ಸಂಬಂಧಿಸಿದವರಿಗೆ ನೀಡಿ, ಆ ಪ್ರಶ್ನಾವಳಿಗೆ ಲಿಖೀತ ರೂಪದ ಉತ್ತರ ಬರೆದುಕೊಡಲು ತಿಳಿಸಿದರು. ಕೆಲವರು ಸ್ಥಳದಲ್ಲೇ ಪ್ರಶ್ನಾವಳಿಗೆ ಉತ್ತರಿಸಿದರೆ, ಇನ್ನೂ ಕೆಲವರು, ಕೆಪಿಸಿಸಿಗೆ ಆ ಮೇಲೆ ತಲುಪಿಸುತ್ತೇವೆ ಎಂದು ಹೇಳಿಕೊಂಡು, ಪ್ರಶ್ನಾವಳಿಯ ಪ್ರತಿಯನ್ನು ತಮ್ಮ ಕಾರಿನಲ್ಲಿ ಇಟ್ಟುಕೊಂಡರು.

Advertisement

ವಿವರ ಪಡೆಯುವ ವೇಳೆ ಜಮಖಂಡಿ ಮತ್ತು ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಸತ್ಯ ಶೋಧನಾ ಸಮಿತಿ ಎದುರು ಬರಲಿಲ್ಲ. ತಮ್ಮ ಅಭಿಪ್ರಾಯ, ಪಕ್ಷ ಸಂಘಟನೆ ಬಗ್ಗೆ ಸಮಿತಿಗೆ ವಿವರಿಸಬೇಕಾದ ಈ ಎರಡು ಬ್ಲಾಕ್‌ಗಳ ಅಧ್ಯಕ್ಷರು ಬಾರದೇ ಇದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ ಸದಸ್ಯರು, ಎರಡೂ ಬ್ಲಾಕ್‌ ಅಧ್ಯಕ್ಷರನ್ನು ಅಮಾನತುಗೊಳಿಸಿ ಎಂದು ಜಿಲ್ಲಾ ಅಧ್ಯಕ್ಷರಿಗೆ ಸೂಚಿಸಿದರು ಎಂದು ಪದಾಧಿಕಾರಿಯೊಬ್ಬರು ತಿಳಿಸಿದರು.

ಒಟ್ಟಾರೆ, 14 ತಿಂಗಳ ಬಳಿಕ ಎಚ್ಚೆತ್ತ ಕೆಪಿಸಿಸಿ, ವಿಧಾನಸಭೆ ಚುನಾವಣೆಯ ಸೋಲಿನ ಅವಲೋಕನಕ್ಕಾಗಿ ಬಂದರೂ ಅದು ಸಮರ್ಪಕವಾಗಿ ನಡೆಯಲಿಲ್ಲ ಎಂಬ ಮಾತು ಕಾಂಗ್ರೆಸ್ಸಿಗರಿಂದಲೇ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next