Advertisement

ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ

11:08 AM Jan 28, 2019 | |

ಬಾಗಲಕೋಟೆ: ಸಮುದಾಯದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯಿಂದ ಇಂದು ಸಾಮಾಜಿಕ ಗುಲಾಮಗಿರಿ ಹೆಚ್ಚಿದೆ. ಸಾಮಾಜಿಕ ಗುಲಾಮಗಿರಿ ಹೋದಾಗ ಮಾತ್ರ, ರಾಜಕೀಯ ಗುಲಾಮಗಿರಿ ಹೋಗುತ್ತದೆ ಎಂದು ಸತ್ಯ ಶೋಧಕ ಸಂಸ್ಥೆ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.

Advertisement

ನವನಗರದಲ್ಲಿ ರವಿವಾರ ಸಾವಿತ್ರಿಬಾಯಿ ಫುಲೆ 188ನೇ ಜಯಂತಿ ನಿಮಿತ್ತ ಸತ್ಯಶೋಧಕ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಳ ಜಾತಿ ಜನರಿಗೆ ಪ್ರತಿಯೊಂದು ವಸ್ತು-ಆಹಾರ ಉತ್ಪಾದನೆ ಮಾಡುವ ಶಕ್ತಿ ಇದ್ದರೂ ಬ್ರಾಹ್ಮಣತ್ವದ ಜಾತಿ ವ್ಯವಸ್ಥೆಯಿಂದ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ. ಕೆಳ ಜಾತಿಯವರು ಉತ್ತಮ ಬಟ್ಟೆ ಹಾಕಲು, ಬದುಕು ಕೊಟ್ಟಿಕೊಳ್ಳುವ ಸಾಮರ್ಥ್ಯವಿದ್ದರೂ ಜಾತಿ ವ್ಯವಸ್ಥೆ ಅವರನ್ನು ಬಿಡುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಮಾಜಿಕ ಗುಲಾಮಗಿರಿ ಹೋದಾಗ ಮಾತ್ರ ರಾಜಕೀಯ ಗುಲಾಮಗಿರಿ ಕಳೆದು ಹೋಗಲು ಸಾಧ್ಯ. ಸಂವಿಧಾನ ಉದ್ದೇಶಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಾಗ ಮಾತ್ರ ವರ್ಗರಹಿತ ಸಮಾಜ ನಿರ್ಮಾಣ ಸಾಧ್ಯ ಎಂದರು.

ನೂರಾರು ವರ್ಷಗಳ ಹಿಂದೆ ಈ ದೇಶದಲ್ಲಿ ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಮಾಡಿದ ಸಾಮಾಜಿಕ ಕ್ರಾಂತಿಯಿಂದ ಇಂದು ಹಿಂದುಳಿದವರು, ಮಹಿಳೆಯರು ಪ್ರಗತಿ ಕಾಣಲು ಸಾಧ್ಯವಾಗಿದೆ. ದೇಶದಲ್ಲಿ ಒಟ್ಟು 3743 ಜಾತಿಗಳಿವೆ. ಕರ್ನಾಟಕದಲ್ಲಿ 103 ಅತಿ ಶೂದ್ರ ಜಾತಿಗಳಿವೆ. ಎಸ್‌ಟಿ ವರ್ಗದಲ್ಲಿ ದೇಶದಲ್ಲಿ 1 ಸಾವಿರ ಜಾತಿಗಳಿವೆ. ರಾಜ್ಯದಲ್ಲಿ 54 ಜಾತಿಗಳನ್ನು ಎಸ್‌ಟಿಗೆ ಸೇರಿಸಲಾಗಿದೆ. ಈ ಎಲ್ಲ ಜಾತಿಯವರು ಇಂದು ಸ್ವಾಭಿಮಾನದಿಂದ ಬದುಕಲು, ಒಳ್ಳೆಯ ಬಟ್ಟೆ ಹಾಕಲು ಸಾಧ್ಯವಾಗಲು ಈ ದೇಶದ ಸಂವಿಧಾನ, ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರೇ ಕಾರಣ ಎಂದು ಹೇಳಿದರು.

Advertisement

ದೇಶದಲ್ಲಿ ಕೆಳ ವರ್ಗದ ಜನರಿಗೆ ಸ್ವಾತಂತ್ರ್ಯ, ಸಮಾನತೆ ಕೊಡಿಸಲು ಸತ್ಯ ಶೋಧಕ ಸಾಮಾಜಿಕ ಚಳವಳಿ ಆರಂಭಿಸಿದ್ದರು. ಮುಂಬೈ ಪ್ರಾಂತದಲ್ಲಿ ಈ ಸಾಮಾಜಿಕ ಕ್ರಾಂತಿ ನಡೆದಿದ್ದು, ಜ್ಯೋತಿಬಾ ಮತ್ತು ಸಾವಿತ್ರಬಾಯಿ ಫುಲೆ ಮಾಡಿದ ಕಾರ್ಯದಿಂದ ಎಂದರು.

ವಿಜಯಪುರದ ಪ್ರಾಧ್ಯಾಪಕಿ ಸುಜಾತಾ ಚಲವಾದಿ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ, ಸಂಘಟನೆ ಮಹತ್ವ ತಿಳಿಸಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಸಾಮಾಜಿಕ ಪಿಡುಗುಗಳ ವಿರುದ್ಧ ಅವರ ಹೋರಾಟ, ಇಂದಿಗೂ ಮಾದರಿಯಾಗಿದೆ ಎಂದು ಹೇಳಿದರು.

ಈ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಕೀಳುಮಟ್ಟದಲ್ಲಿ ಕಾಣುವ ಕಾಲದಲ್ಲಿ ಅವರಿಗಾಗಿ ಸಾವಿತ್ರಿಬಾಯಿ ಫುಲೆ ಶಾಲೆ ಆರಂಭಿಸಿದ್ದರು. ಹೆಣ್ಣು ಮಕ್ಕಳ ಶಿಕ್ಷಣ, ಸಂಘಟನೆಗೆ ಒತ್ತು ನೀಡಿದ್ದರು. ಸಾಮಾಜಿಕವಾಗಿ ಮಹಿಳೆಯರು ಗಟ್ಟಿಯಾಗಿ ನಿಲ್ಲುವಂತೆ ಮಾಡಿದ್ದರು. ವಿಧವೆಯರಿಗೆ ಆಶ್ರಮ ಸ್ಥಾಪಿಸಿ ಪಾಲನೆ-ಪೋಷಣೆ ಮಾಡುತ್ತಿದ್ದರು. ಅವರ ಇಂತಹ ಸಾಮಾಜಿಕ ಕಾರ್ಯ ನಾವೆಲ್ಲ ಅರಿತುಕೊಳ್ಳಬೇಕಿದೆ ಎಂದರು.

ಎಸ್ಸಿ, ಎಸ್ಟಿ ಎಲ್‌ಐಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕ್ಯಾತನ್‌, ಪ್ರಮುಖರಾದ ಸದಾಶಿವ ಕೊಡಬಾಗಿ, ವಿವೇಕಾನಂದ ಚಂದರಗಿ ಮುಂತಾದವರು ಉಪಸ್ಥಿತರಿದ್ದರು.

ದೇಶದ ಮಹಿಳಾ ಕುಲದ ಶಿಕ್ಷಣ- ಅವರ ಅಭ್ಯುದಯಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರ. ಸಂವಿಧಾನದ ಉದ್ದೇಶ ಸಾಕಾರಗೊಳಿಸಲು ಚಳವಳಿ ರೂಪದಲ್ಲಿ ಸತ್ಯ ಶೋಧಕ ಸಂಘ ಕೆಲಸ ಮಾಡಲಿದೆ. ಪ್ರಜಾ ಪರಿವರ್ತನಾ ವೇದಿಕೆ ಒಂದು ಭಾಗವಾಗಿ ಈ ಸಂಘ ಸಾಮಾಜಿಕ ಸೇವೆ ಮಾಡಲಿದೆ.
ಪರಶುರಾಮ ಮಹಾರಾಜನವರ,
 ಸತ್ಯಶೋಧಕ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next