Advertisement

Bagalakote: ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಿ: ಸಚಿವ ಆರ್. ಬಿ. ತಿಮ್ಮಾಪೂರ

09:43 PM Aug 06, 2024 | Team Udayavani |

ರಬಕವಿ-ಬನಹಟ್ಟಿ (ಬಾಗಲಕೋಟೆ ಜಿಲ್ಲೆ) : ರಾಜ್ಯದ ಕಾಂಗ್ರೆಸ್ ಸರಕಾರ ಕಟ್ಟಕಡೆಯ ವ್ಯಕ್ತಿಗಳ ಪರವಾಗಿದ್ದು, ಮಕ್ಕಳ ವಿಷಯದಲ್ಲಿ ಎಲ್ಲ ಅಧಿಕಾರಿಗಳು  ಜಾಗರೂಕತೆಯಿಂದ ಕಾಳಜಿ ವಹಿಸಿ ಕೆಲಸ ಮಾಡಿ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಹೇಳಿದರು.

Advertisement

ಮಂಗಳವಾರ ಸಂಜೆ ರಬಕವಿ ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ರಬಕವಿ ಬನಹಟ್ಟಿ ಹಾಗ ತೇರದಾಳ ತಾಲೂಕಿನ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರಿಗಳು ಸಾರ್ವಜನಿಕರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡಿ. ಅಭಿವೃದ್ಧಿ ಕೆಲಸಕ್ಕೆ ನನ್ನ ಸದಾ ಬೆಂಬಲವಿರುತ್ತದೆ. ಜನರು ಬದುಕು ನೆಮ್ಮದಿಯಿಂದ ಇರಲು ತಾವೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ತಿಮ್ಮಾಪುರ ತಿಳಿಸಿದರು.

ಮಹಾಲಿಂಗಪುರ ಆಸ್ಪತ್ರೆಯಲ್ಲಿ ರಾಜಕೀಯ ನಡೆಯುತ್ತಿದೆ ವೈದ್ಯಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ಇದಕ್ಕೆ ಉತ್ತರಿಸಿದ ಮುಧೋಳ ತಾಲೂಕು ಆರೋಗ್ಯಾಧಿಕಾರಿ ಮಾಲಘಾಣ ಮಾತನಾಡಿ ಈಗಾಗಲೇ ಮಿಟಿಂಗ್ ತೆಗೆದುಕೊಂಡಿದ್ದೇನೆ. ಅಲ್ಲಿ ವೈದ್ಯಾಧಿಕಾರಿಗಳು ಪರಸ್ಪರ ಜಗಳವಾಡುತ್ತಾರೆ ಎಂದು ಹೇಳಿದಾಗ ಸಚಿವರಾದ ತಿಮ್ಮಾಪುರ ಮಾತನಾಡಿ, ಸರಿಯಾಗಿ ಕರ್ತವ್ಯ ನಿರ್ವಹಿಸದ ವೈದ್ಯರನ್ನು ಸೇವೆಯಿಂದ ಬಿಡುಗಡೆಗೊಳಿಸಿ, ಖಾಸಗಿ ಆಸ್ಪತ್ರೆಗೆ ಬರೆದು ಕೊಡುವ ವೈದ್ಯರ ಮೇಲೆ ಶೀಘ್ರವೇ ಕ್ರಮ ತೆಗೆದುಕೊಳ್ಳಿ ಎಂದು ಸಚಿವರು ಜಿ. ಪಂ. ಸಿಇಓ ಶಶಿಧರ ಕುರೇರರಿಗೆ ಸೂಚಿಸಿದರು.

ಪ್ರವಾಹ ಸ್ವಲ್ಪ ಇಳಿಮುಖವಾಗುತ್ತಿದ್ದು, ನೆರೆ ಇಳಿದಾಗ ಇನ್ನೂ ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆರೋಗ್ಯದ ದೃಷ್ಟಿ ಯಿಂದ ನೆರೆ ಪೀಡಿತ ಗ್ರಾಮಗಳಲ್ಲಿ ಪ್ರತಿದಿನ ಫಾಗಿಂಗ್ ಮಾಡಿ, ಡೆಂಗ್ಯೂ ಬರದಂತೆ ಎಚ್ಚರ ವಹಿಸಿ, ಎಚ್ಚರ ತಪ್ಪದ್ದಲ್ಲಿ ನೀವೆ ಹೊಣೆಗಾರರು ಎಂದು ಅಧಿಕಾರಿಗಳಿಗೆ ಸಚಿವರು ಎಚ್ಚರಿಸಿದರು. ಅಲ್ಲದೇ ಪ್ರತಿ ತಿಂಗಳು ಒಂದು ಆರೋಗ್ಯ ತಪಾಸಣೆ ಶಿಭಿರ ಏರ್ಪಡಿಸಿ ಎಂದರು.

ತಾ.ಪಂ. ಇಒಗೆ ಸಚಿವ ತರಾಟೆ:
ಕೆಡಿಪಿ ಸಭೆಯಲ್ಲಿ ಪ್ರವಾಹ ಪರಿಸ್ಥಿತಿ ವಿಷಯದ ಕುರಿತು ಮಾಹಿತಿ ಕೇಳುವ ಸಂದರ್ಭದಲ್ಲಿ ಜಮಖಂಡಿ ತಾ. ಪಂ. ಇಓ ಸಂಜಯ ಜಿನ್ನೂರ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರಿಂದ ಸಚಿವ ತಿಮ್ಮಾಪೂರ ಅವರನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಈ ತರಹ ನಿರ್ಲಕ್ಷ್ಯ ತೋರಿದರೆ ನಾನು ಸಹಿಸುವುದಿಲ್ಲ ಎಂದರು.

Advertisement

ಕೌಜಲಗಿ ನಿಂಗಮ್ಮ ಸಮುದಾಯ ಭವನ ಸರಿಯಾಗಿ ಉಪಯೋಗವಾಗುತ್ತಿಲ್ಲ. ಇದು ಕಲಾವಿದೆಯಾಗಿ ನನಗೆ ತುಂಬಾ ನೋವಾಗಿದೆ. ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು. ಕನ್ನಡ ಕೆಲಸಗಳು ನಡೆಯುವಂತಾಗಬೇಕು. ಅಲ್ಲದೇ ಬನಹಟ್ಟಿ ನೇಕಾರ ಭವನ ಮಾಡಿದ್ದು, ಅದು ಅನ್ಯರ ಪಾಲಾಗಿದ್ದು, ಹಾಗೂ ರಬಕವಿ ಕನ್ನಡ ಭವನದ ಕುರಿತು ಗಮನ ಹರಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಎಂದು ವಿಧಾನಪರಿಷತ್ ಸದಸ್ಯರಾದ ಉಮಾಶ್ರೀ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ತಿಮ್ಮಾಪುರ ಮಹಾಲಿಂಗಪುರದ ಕೌಜಲಗಿ ನಿಂಗಮ್ಮ, ಬನಹಟ್ಟಿಯ ನೇಕಾರಭವನ, ರಬಕವಿಯ ಕನ್ನಡ ಭವನದ ಕುರಿತು ಅಗತ್ಯ ಮಾಹಿತಿ ತರಿಸಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರಿಯಾದ ಮಾಹಿತಿ ತರದೇ ಬೇಜವಾಬ್ದಾರಿ ರೀತಿ ಸಭೆಗೆ ಬರುವುದು ಯಾಕಪ್ಪಾ. ಸರಿಯಾದ ಮಾಹಿತಿ ತೆಗೆದುಕೊಂಡು ಬರಬೇಕು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸಚಿವರು ತಾಕೀತು ಮಾಡಿದರು. ಅಂಗನಾಡಿಗಳ ಮೇಲೆ ನಿಗಾ ಇಡಿ, ಸರಿಯಾಗಿ ಕೆಲಸ ಮಾಡದವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದರು.

ಶಾಸಕ ಸಿದ್ದು ಸವದಿ, ಸಚಿವ ಆರ್. ಬಿ. ತಿಮ್ಮಾಪುರ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ, ಜಿಲ್ಲಾಧಿಕಾರಿ ಜಾನಕಿ ಕೆ. ಎಂ., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ವೇದಿಕೆ ಮೇಲಿದ್ದರು.

ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ, ರಬಕವಿ ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಜಮಖಂಡಿ ತಹಶೀಲ್ದಾರ ಸಂತೋಷ ಮಕ್ಕೋಜಿ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ, ಡಿವಾಯ್ ಎಸ್ಪಿ ಈ. ಶಾಂತವೀರ, ಜಮಖಂಡಿ ತಾಲೂಕು ವೈದ್ಯಾಧಿಕಾರಿ ಜಿ. ಎಸ್. ಗಲಗಲಿ, ಮುಧೋಳ ತಾಲೂಕು ವೈದ್ಯಾಧಿಕಾರಿ ಮಾಲಘಾಣ, ಪಶು ವೈದ್ಯಾಧಿಕಾರಿ ಬಸವರಾಜ ಗೌಡರ, ಮುಧೋಳ ತಾ. ಪಂ. ಇ. ಓ ಸಂಜಯ ಹಿಪ್ಪರಗಿ, ಜಮಖಂಡಿ ಶಿಕ್ಷಣಾಧಿಕಾರಿ ಎ ಕೆ ಬಸನ್ನವರ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next