ಬಾಗಲಕೋಟೆ: ಬಿಜೆಪಿ ಭದ್ರ ಕೋಟೆಯಂತಿರುವ ಬಾಗಲಕೋಟೆ ಲೋಕಸಭೆ ಕ್ಷೇತ್ರವನ್ನು ಪುನಃ ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ, ಸಿದ್ದರಾಮಯ್ಯ ಅವರ ನಿರ್ದೇಶನ-ಮಾರ್ಗದರ್ಶನದಲ್ಲಿ ಚಾಣಾಕ್ಷ್ಯ ಹೆಜ್ಜೆ ಇಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹೌದು, ಕಳೆದ ವಿಧಾನಸಭೆ ಚುನಾವಣೆ ಬಳಿಕ, ಕಾಂಗ್ರೆಸ್‌ನಲ್ಲೇ ಒಬ್ಬಂಟಿಯಾಗಿದ್ದ ಕಾಶಪ್ಪನವರ ಕುಟುಂಬ, ಲೋಕಸಭೆ ಟಿಕೆಟ್ ಪಡೆಯುವಲ್ಲಿ ಸಫಲವಾದ ಬಳಿಕ, ನಾಯಕರ ಮನವೊಲಿಕೆಗೂ ಮುಂದಾಗಿದೆ. ಜಿಲ್ಲೆಯ ಕಾಂಗ್ರೆಸ್ ಪಾಲಿಗೆ ಪಂಚರು (ಹಿರಿಯರು) ಎಂದೇ ಕರೆಸಿಕೊಳ್ಳುವ ಹಲವು ನಾಯಕರನ್ನು ಭೇಟಿ ಮಾಡಿ, ಹಿಂದಿನ ಕಹಿ ಘಟನೆ ಮರೆಯೋಣ, ಲೋಕಸಭೆ ಚುನಾವಣೆ ಗೆಲ್ಲೋಣ, ನಮ್ಮದು ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದೆ.
ಪಂಚರ ಭೇಟಿ: ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ-ಎಂಎಲ್‌ಸಿ ಎಸ್. ಆರ್. ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಸಚಿವ-ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ, ಬೀಳಗಿಯ ಮಾಜಿ ಶಾಸಕ ಜೆ.ಟಿ. ಪಾಟೀಲ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಅವರು ಜಿಲ್ಲೆಯ ಕಾಂಗ್ರೆಸ್ ಪಾಲಿನ ಪಂಚರು (ಹಿರಿಯರು). ಆದರೆ, ಕಳೆದ ವಿಧಾನಸಭೆ ಚುನಾವಣೆ ಬಳಿಕ ಈ ಪಂಚ ಹಿರಿಯರು ಹಾಗೂ ಕಾಶಪ್ಪನವರ ಮಧ್ಯೆ ದೊಡ್ಡ ಸಂಘರ್ಷವೇ ನಡೆದಿತ್ತು. ಬಹಿರಂಗವಾಗಿ ಆಕ್ರೋಶ- ಅಸಮಾಧಾನ-ಆರೋಪ ಮಾಡಿಕೊಂಡಿದ್ದರು. ಹೀಗಾಗಿ ಈಗ ಲೋಕಸಭೆ ಟಿಕೆಟ್ ಪಡೆದಿರುವ ವಿಜಯಾನಂದ ಪತ್ನಿ ವೀಣಾ ಪರವಾಗಿ, ಈ ಹಿರಿಯರೆಲ್ಲ ಚುನಾವಣೆ ಮಾಡುತ್ತಾರಾ ? ಎಂಬ ಪ್ರಶ್ನೆ- ತೀವ್ರ ಗೊಂದಲ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿತ್ತು.
ತಾವು ಮಾಡಿದ ತಪ್ಪನ್ನು, ತಾವೇ ತಿದ್ದಿಕೊಳ್ಳುವ ಪ್ರಯತ್ನ ವಿಜಯಾನಂದ ಮಾಡಿದ್ದಾರೆ. ಮಾಧ್ಯಮಗಳ ಮೂಲಕ ಯಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೋ, ಅದೇ ಮಾಧ್ಯಮಗಳ ಮೂಲಕ ಹಿರಿಯರ, ಅವರ ಬೆಂಬಲಿಗರ, ಕಾರ್ಯಕರ್ತರ ಕ್ಷಮೆ ಕೋರುವ ಮೂಲಕ ರಾಜಕೀಯ ಚಾಣಾಕ್ಷ್ಯ ನಡೆ ಇಟ್ಟಿದ್ದಾರೆ ಎನ್ನಲಾಗಿದೆ.
ಮೇಲ್ನೋಟದ ಒಗ್ಗಟ್ಟು: ತಮ್ಮದೇ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರ ಬಹಿರಂಗ ಕ್ಷಮೆ ಕೋರಿದ ಬಳಿಕ, ಕಾಂಗ್ರೆಸ್‌ನ ಎಲ್ಲಾ ನಾಯಕರು, ಸಂಜೆಯ ಹೊತ್ತಿಗೆ ಒಗ್ಗಟ್ಟಾಗಿದ್ದಾರೆ. ಟಿಕೆಟ್ ಘೋಷಣೆಯಾಗಿ ನಾಲ್ಕೈದು ದಿನ ಕಳೆದರೂ ಒಬ್ಬರೊಬ್ಬರು ಭೇಟಿ ಮಾಡಿರಲಿಲ್ಲ. ವಿಜಯಾನಂದರು, ತಮ್ಮ ತಪ್ಪಿನ ಅರಿವಾಗಿದೆ. ತಪ್ಪು ತಿಳಿವಳಿಕೆಯಿಂದ ನಾನು ಆಕ್ರೋಶ ವ್ಯಕ್ತಪಡಿಸಿದ್ದೆ. ಈಗ ನಾವೆಲ್ಲ ಕೂಡಿ ಒಗ್ಗಟ್ಟಿನಿಂದ ಚುನಾವಣೆ ಮಾಡುತ್ತೇವೆ ಎಂದು ಹೇಳಿದ ಬಳಿಕ, ಸಂಜೆ 5ರ ಹೊತ್ತಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಲ್ಲರೂ ಒಟ್ಟಿಗೇ ಕೂಡಿ, ಚುನಾವಣೆ ಎದುರಿಸುವ ತಂತ್ರ-ತಯಾರಿ ಕುರಿತು ಚರ್ಚೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಸಧ್ಯಕ್ಕೆ ಎಲ್ಲರೂ ಮೇಲ್ನೋಟಕ್ಕೆ ಒಗ್ಗಟ್ಟಾಗಿರುವ ಮಾತು ಕೇಳಿ ಬರುತ್ತಿದೆ. ಮೇಲ್ನೋಟದ ಒಗ್ಗಟ್ಟು, ಅಂತರಂಗದಲ್ಲೂ ಇದ್ದರೆ, 4ನೇ ಬಾರಿ ಗೆಲುವಿನ ಅಲೆಯಲ್ಲಿ ತೇಲಬಯಸುವ ಬಿಜೆಪಿಗೆ ದೊಡ್ಡ ಪೈಪೋಟಿ ನೀಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಲಾಗುತ್ತಿದೆ.
ವೀಣಾಗೆ ಅತ್ತೆಯ ಸಾಥ್: ಹುನಗುಂದದ ಮಾಜಿ ಶಾಸಕ ವಿಜಯಾನಂದ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಷ್ಟೇ ಅಲ್ಲ, ತಾಯಿ ಗೌರಮ್ಮ ಕೂಡ ಸಂಯಮದ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಗೌರಮ್ಮ ಕಾಶಪ್ಪನವರ ಅವರೇ, ಅಭ್ಯರ್ಥಿಯಾಗಿರುವ ಸೊಸೆ ವೀಣಾ, ಪುತ್ರ ವಿಜಯಾನಂದ ಹಾಗೂ ತಮ್ಮ ತಾಲೂಕಿನ (ವಿಜಯಾನಂದ ಬೆಂಬಲಿಸಿ ಅವರೂ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು) ಹಲವು ಸಮಾಜಗಳ ಪ್ರಮುಖ ಯುವ ಮುಖಂಡರನ್ನು ಕರೆದುಕೊಂಡು, ಪಕ್ಷದ ಹಿರಿಯರನ್ನು ಭೇಟಿ ಮಾಡಿದ್ದಾರೆ. ನೀವೆಲ್ಲ ಹಿರಿಯರು, ಈ ಹುಡುಗ ಮಾಡಿದ ತಪ್ಪು ಮನ್ನಿಸಿ, ನನ್ನ ಸೊಸೆಯ ಗೆಲುವಿಗೆ ಸಹಕಾರ ಕೊಡಿ. ಮುಂದೆ ವಿಜಪ್ಪ (ವಿಜಯಾನಂದ) ಹಿಂದಿನಂತೆ ಮಾತಾಡಲ್ಲ. ಎಲ್ಲರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಾನೆ ಎಂದು ಗೌರಮ್ಮ ಕಾಶಪ್ಪನವರ, ಹಿರಿಯರ ಎದುರು ಅಭಯ ನೀಡಿದ್ದಾರೆ ಎನ್ನಲಾಗಿದೆ. ವೀಣಾ ಕಾಶಪ್ಪನವರ ಪರವಾಗಿ ಅತ್ತೆ-ಮಾಜಿ ಶಾಸಕ ಗೌರಮ್ಮ ಕಾಶಪ್ಪನವರ ಕೂಡ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲೆಡೆ ಓಡಾಡುತ್ತಿದ್ದಾರೆ. ಒಟ್ಟಾರೆ, ಲೋಕಸಭೆ ಚುನಾವಣೆ ವೇಳೆ ಕಾಶಪ್ಪನವರ, ಚಾಣಾಕ್ಷ್ಯ ನಡೆ ಪ್ರದರ್ಶಿಸಿದೆ ಎಂಬ ಮಾತು ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಿಂದ ಕೇಳಿ ಬರುತ್ತಿದೆ.
ವಿಧಾನಸಭೆ ಚುನಾವಣೆ ಬಳಿಕ ನಾನು ಸೋಲಿನ ನೋವಿನಲ್ಲಿದ್ದೆ. ಕೆಲವು ತಪ್ಪು ತಿಳಿವಳಿಕೆಯಿಂದ ನಮ್ಮ ಪಕ್ಷದ ಕೆಲವರ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದೆ. ಈಗ ತಪ್ಪು ತಿಳಿವಳಿಕೆಯ ಅರಿವಾಗಿದೆ. ಹೀಗಾಗಿ ಕ್ಷಮೆ ಕೋರಿದ್ದೇನೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ.
. ವಿಜಯಾನಂದ ಕಾಶಪ್ಪನವರ,
ಹುನಗುಂದದ ಮಾಜಿ ಶಾಸಕ
ಜಿಲ್ಲೆಯ ನಮ್ಮ ಪಕ್ಷದ ಎಲ್ಲ ಹಿರಿಯರ ಒಟ್ಟಾಭಿಪ್ರಾಯದಿಂದಲೇ ನನಗೆ ಟಿಕೆಟ್ ನೀಡಲಾಗಿದೆ. ವಾಜಪೇಯಿ, ಯಡಿಯೂರಪ್ಪ ಹಾಗೂ ಮೋದಿ ಅಲೆಯಲ್ಲಿ ಮೂರು ಬಾರಿ ಗೆದ್ದ ಬಿಜೆಪಿ ಅಭ್ಯರ್ಥಿ ಗದ್ದಿಗೌಡರು ಜಿಲ್ಲೆಗಾಗಿ ಏನೂ ಮಾಡಿಲ್ಲ. ಹೀಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಆಶಯ ಹೊಂದಿರುವ ನನಗೆ ಎಲ್ಲ ಆರ್ಶೀವಾದ ಹೊರಯಲಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ನ ಏಕೈಕ ಮಹಿಳಾ ಅಭ್ಯರ್ಥಿ ಕೂಡ ನಾನಾಗಿದ್ದೇನೆ. ಮನೆ ಮಗಳಂತೆ ನೋಡುವ ಜಿಲ್ಲೆಯ ಜನರು, ಅದರಲ್ಲೂ ಮಹಿಳೆಯರು ನನಗೆ ಬೆಂಬಲಿಸಬೇಕು.
. ವೀಣಾ ಕಾಶಪ್ಪನವರ,
ಕಾಂಗ್ರೆಸ್ ಅಭ್ಯರ್ಥಿ
ಶ್ರೀಶೈಲ ಕೆ. ಬಿರಾದಾರ