Advertisement

ಮತದಾನದ ಹಕ್ಕಿದೆ; ಬದುಕುವ ಹಕ್ಕಿಲ್ಲವೇ?

11:48 AM Aug 08, 2019 | Naveen |

ಆಲಗೂರ (ಬಾಗಲಕೋಟೆ): ಇವರು ಪ್ರತಿ ಚುನಾವಣೆಗೆ ಮತದಾನ ಮಾಡುತ್ತಾರೆ. ಆಧಾರ್‌ ಕಾರ್ಡ್‌, ಬಿಪಿಎಲ್ ಕಾರ್ಡ್‌, ಮತದಾರರ ಚೀಟಿ ಎಲ್ಲವೂ ಇವೆ. ಆದರೆ, ಬದುಕಲು ಸ್ವಂತಕ್ಕೊಂದು ಸೂರಿಲ್ಲ. ಮಳೆಯಬ್ಬರಕ್ಕೊಮ್ಮೆ ಅಲೆದಾಟ ತಪ್ಪಿಲ್ಲ. ನಮಗೆ ಶಾಶ್ವತ ಸೂರು ಕೊಡಿಸಿ ಎಂಬ 40 ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಕ್ಕಲ್ಲ. ಹೀಗಾಗಿ ನಮಗೆ ಮತದಾನದ ಹಕ್ಕಿದೆ, ಬದುಕುವ ಹಕ್ಕಿಲ್ಲವೇ ಎಂದು ಮುಗ್ಧತೆಯಿಂದ ಪ್ರಶ್ನಿಸುತ್ತಾರೆ ಇಲ್ಲಿಯ ಜನ.

Advertisement

ಹೌದು, ಇದು ಜಮಖಂಡಿ ತಾಲೂಕು ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಹೊಂದಿಕೊಂಡಿರುವ ಆಲಗೂರ ಗೌಡರ ಗಡ್ಡಿಯ ನಿವಾಸಿಗಳ ಪ್ರಶ್ನೆ. ಇವರೆಲ್ಲ ನಿತ್ಯ ದುಡಿದು ತಿನ್ನುವ ಜನ. ಅವರಿವರ ಹೊಲದ ಕೆಲಸಕ್ಕೆ ಹೋಗುತ್ತಾರೆ. ಕೆಲವರು ಲಾವಣಿಗೆ ಕೃಷಿ ಭೂಮಿ ಮಾಡಿದ್ದಾರೆ. ಇನ್ನೂ ಕೆಲವರು ಜಮಖಂಡಿಯ ಬಟ್ಟೆ ಅಂಗಡಿ, ಎಪಿಎಂಸಿ ಯಾರ್ಡಗೆ ಕೆಲಸಕ್ಕೆ ಹೋಗುತ್ತಾರೆ. ನಿತ್ಯ ದುಡಿದರೆ ಇವರ ಬದುಕಿನ ಬಂಡಿ ಸಾಗುತ್ತದೆ. ಇಲ್ಲದಿದ್ದರೆ ತಿಂಗಳಿಗೊಮ್ಮೆ ಪಡಿತರ ತರಲೂ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ.

40 ವರ್ಷಗಳಿಂದ ಇಲ್ಲೇ ವಾಸ: ಆಲಗೂರಿನ ಗೌಡರ ಗಡ್ಡಿಯ ಜನರಿಗೆ ತಗಡಿನ ಶೆಡ್‌ಗಳ ಬಂಗಲೆಗಳು. 40 ವರ್ಷಗಳಿಂದ ಈ ಶೆಡ್‌ನ‌ಲ್ಲೇ ವಾಸಿಸುತ್ತಿದ್ದಾರೆ. ಶೆಡ್‌ಗಳು ಶಿಥಿಲಗೊಂಡಾಗೊಮ್ಮೆ, ಕಟ್ಟಿಗೆ, ತಗಡು ಬದಲಿಸಿ, ಹೊಸದಾಗಿ ಹಾಕುತ್ತಾರೆ. ಹೀಗೆ 40 ವರ್ಷಗಳಿಂದ ಅದೇ ಶೆಡ್‌ನ‌ಲ್ಲಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಗುಡಿಸಲು ಮುಕ್ತ ಕರ್ನಾಟಕ ಘೋಷಣೆ, ಇವರಿಂದ ಅಕ್ಷರಶಃ ಬಹುದೂರವಿದೆ. ನಮಗೊಂದು ಸ್ವಂತ ಮನೆ ಕಲ್ಪಿಸಿ ಎಂಬ ಕೂಗು ಇಲ್ಲಿನ ಜನಪ್ರತಿನಿಧಿಗಳಿಗೆ ಕೇಳಿಸಿಲ್ಲ. ಕೇಳಿಸಿದರೂ, ಆ ಪ್ರಯತ್ನ ಮಾಡಿಲ್ಲ ಎಂಬ ಅಸಮಾಧಾನದ ಮಾತು ಕೇಳಿ ಬರುತ್ತಿದೆ.

ಗೌಡರ ಗಡ್ಡಿಯಲ್ಲಿ ಸುಮಾರು 78 ಕುಟುಂಬಗಳ, 234 ಜನ ವಾಸಿಸುತ್ತಿದ್ದಾರೆ. ಅವರೊಂದಿಗೆ 216 ಜಾನುವಾರುಗಳೂ ಇವೆ. ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ನಂ.34ರ ಚಿಕ್ಕಪಡಸಲಗಿ ಬಳಿಯ ಬ್ಯಾರೇಜ್‌ ಪಕ್ಕದಲ್ಲೇ ಇವರೆಲ್ಲ ವಾಸವಾಗಿದ್ದು, ಗೌಡರ ತೋಟದಲ್ಲಿ ಇವರೆಲ್ಲ ಶೆಡ್‌ ಹಾಕಿಕೊಂಡಿದ್ದರಿಂದ ಇದಕ್ಕೆ ಗೌಡರ ಗಡ್ಡಿ ಎಂದೇ ಕರೆಯಲಾಗುತ್ತಿದೆ. ಶೆಡ್‌ಹಾಕಿಕೊಂಡು, ವಾಸಿಸಲು ಗೌಡರು ಆಶ್ರಯ ಕೊಟ್ಟಿದ್ದಾರೆ. ಇಲ್ಲಿನ ಜನರು ಸಾಕಿರುವ ಜಾನುವಾರುಗಳ ತಿಪ್ಪೆ ಗೊಬ್ಬರ ಮಾತ್ರ ಪಡೆಯುತ್ತಾರೆ. ಅದೇ ಇಲ್ಲಿ ವಾಸಿಸುವ ನಿರಾಶ್ರಿತರು ಮತ್ತು ಗೌಡರ ಮಧ್ಯೆ ಇರುವ ಬಾಡಿಗೆ ಒಪ್ಪಂದ ಕೂಡ. ಅದು ಕಳೆದ 40 ವರ್ಷಗಳಿಂದಲೂ ನಡೆದಿದೆ. ಸದ್ಯ ವಾಸಿಸುವವರ ತಂದೆ-ತಾಯಿ ಇಲ್ಲಿಗೆ ಬಂದು ವಾಸಿಸುತ್ತಿದ್ದಾರೆ. ತಂದೆ-ತಾಯಿ ಬಹುತೇಕರು ನಿಧನರಾಗಿದ್ದು, ಮಕ್ಕಳು ಈಗ ಮದುವೆಯಾಗಿ, ಮೊಮ್ಮಕ್ಕಳು ಕಂಡಿದ್ದಾರೆ. ಇಲ್ಲೇ ಹುಟ್ಟಿ, ಬೆಳೆದರೂ ಅವರಿಗೆ ಸ್ವಂತ ಸೂರಿಲ್ಲ ಎಂದರೆ ನಂಬಲೇಬೇಕು.

ಮುಳುಗಿದ ಶೆಡ್‌ ಕಂಡು ಮರುಗಿದರು: ಗೌಡರ ಗಡ್ಡಿಯ 78 ಕುಟುಂಬಗಳ ಶೆಡ್‌ಗಳು ಕಳೆದ ನಾಲ್ಕು ದಿನಗಳಿಂದ ನೀರಿನಲ್ಲಿ ಮುಳುಗಿವೆ. ಸದ್ಯ ಅವರೆಲ್ಲ ಪಕ್ಕದ ಚಂದ್ರು ನರಸಗೊಂಡ ಎಂಬ ರೈತರ ಹೊಲದಲ್ಲಿ ಹಾಕಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಪ್ರತಿದಿನ ಈ ಶೆಡ್‌ಗಳತ್ತ ಬಂದು ನೋಡಿ, ನೀರು ಕಡಿಮೆ ಆಯ್ತಾ ಎಂದು ನೋಡುತ್ತಿದ್ದಾರೆ. ಆದರೆ, ನೀರು ಕಡಿಮೆಯಾಗುವ ಬದಲು, ಉಕ್ಕೇರುತ್ತಲೇ ಇದೆ. ಅರ್ಥ ನೀರಲ್ಲಿ ನಿಂತ ತಮ್ಮ ಶೆಡ್‌ಗಳನ್ನು ಕಂಡು ಮರಗುತ್ತಿದ್ದಾರೆ. ಮಳೆ ಇಲ್ಲದಿದ್ದರೂ, ನದಿಗೆ ಬರಿದು ಬರುತ್ತಿರುವ ನೀರಿನ ಒತ್ತು (ಸೆಳೆವು) ಬಂದು ಇವರ ಶೆಡ್‌ ಮುಳುಗಿವೆ. ಹೀಗಾಗಿ ನೀರು ಬೇಗ ಇಳಿಯಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next