Advertisement

ಭೂಮಿ ಒತ್ತುವರಿಯಾಗಿದ್ರೆ ತೆರವುಗೊಳಿಸಿ

12:50 PM Jun 27, 2019 | Team Udayavani |

ಬಾಗಲಕೋಟೆ: ಮುಧೋಳ ನಗರ ಅಥವಾ ಗ್ರಾಮೀಣ ಭಾಗದ ಯಾವುದೇ ಕೆರೆ ಹಾಗೂ ಅರ್ಧ ಇಂಚು ಭೂಮಿಯನ್ನು ನಮ್ಮ ಬೆಂಬಲಿಗರು ಅಥವಾ ನಮ್ಮ ಪಕ್ಷದವರು ಒತ್ತುವರಿ ಮಾಡಿದ್ದರೆ ತಕ್ಷಣ ತೆರವುಗೊಳಿಸಬೇಕು ಎಂದು ಬಿಜೆಪಿಯ ಶಾಸಕ ಗೋವಿಂದ ಕಾರಜೋಳ, ಹಾಲಿ ಸಚಿವ ಆರ್‌.ಬಿ. ತಿಮ್ಮಾಪುರಗೆ ಸವಾಲು ಹಾಕಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಯಾರೋಬ್ಬರು ಕೆರೆ ಅಥವಾ ಭೂಮಿ ಒತ್ತುವರಿ ಮಾಡಿಲ್ಲ. ಒಂದು ವೇಳೆ ಮಾಡಿದ್ದರೆ, ಅವರೇ ಸಚಿವರಿದ್ದಾರೆ.ಅವರದೇ ಸರ್ಕಾರವಿದೆ. ಕೂಡಲೇ ತೆರವುಗೊಳಿಸಲಿ ಎಂದು ಒತ್ತಾಯಿಸಿದರು.

ಹಳ್ಳಿಗಳಲ್ಲಿ ಬಹಿರಂಗ ಚರ್ಚೆಗೆ ಬರಲಿ: ಮುಧೋಳ ಕ್ಷೇತ್ರಕ್ಕೆ ಯಾರ ಕೊಡುಗೆ ಏನು ಎಂಬುದು ಚರ್ಚೆಯಾಗಲಿ. ಅವರು ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಕ್ಷೇತ್ರದ ಜನರ ಎದುರೇ ಹೇಳಲಿ. ಕ್ಷೇತ್ರದ ನಾಲ್ಕು ದಿಕ್ಕಿನ ಹಳ್ಳಿಗಳಲ್ಲೂ ಇಡೀ ಗ್ರಾಮಸ್ಥರ ಎದುರು ಇಬ್ಬರೂ ಬಹಿರಂಗ ಚರ್ಚೆ ಮಾಡೋಣ, ನನ್ನ ಅವಧಿಯಲ್ಲಿ ಏನು ಮಾಡಿದ್ದೇನೆ ನಾನು ಹೇಳುತ್ತೇನೆ. ಅವರು ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ ಹೇಳಲಿ ಎಂದರು.

ಬೈಪಾಸ್‌ ರಸ್ತೆ; ಮುಂದುವರಿದ ಕಾಮಗಾರಿ: ಮುಧೋಳ ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣ ಯೋಜನೆ 2010ರಲ್ಲೇ ಮಂಜೂರಾಗಿದೆ. ಆಗ ಲೋಕೋಪಯೋಗಿ ಇಲಾಖೆಯಿಂದ ಭೂ ಸ್ವಾಧೀನಕ್ಕೆ ಹಣವೂ ಮಂಜೂರಾಗಿದೆ. ಅದರ ದಾಖಲೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆದು ನೋಡಲಿ. ಆಗ ಕೇವಲ 42 ಕೋಟಿಯಷ್ಟಿದ್ದ ಬೈಪಾಸ್‌ ರಸ್ತೆ ನಿರ್ಮಾಣ ಯೋಜನೆಗೆ, ತಿಮ್ಮಾಪುರ ಅವರ ಕಾಳಜಿಯಿಂದಲೇ ವಿಳಂಬಗೊಂಡು, ಇಂದು 55 ಕೋಟಿಗೆ ಬಂದಿದೆ ಎಂದು ಆರೋಪಿಸಿದರು.

ಮುಧೋಳಕ್ಕೆ ತಿಮ್ಮಾಪುರ ಯಾರು: ಐದು ಸೋತ ತಿಮ್ಮಾಪುರ ಅವರನ್ನು ಎಂಎಲ್ಸಿ ಮಾಡಿದ್ದಾರೆ. ಈಗ ಸಕ್ಕರೆ ಸಚಿವರೂ ಆಗಿದ್ದಾರೆ. ಸಚಿವರಾಗಿದ್ದುಕೊಂಡು ಕ್ಷೇತ್ರದ ಏನೇ ಸಮಸ್ಯೆ ಅಥವಾ ಹೊಸ ಯೋಜನೆಗಳಿದ್ದರೆ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಕೆಲಸ ಮಾಡಬೇಕು. ಅದಕ್ಕೆ ಒಂದು ಘನತೆ- ಗೌರವ ಇರುತ್ತದೆ. ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ತಿಮ್ಮಾಪುರ ಅವರು ಮುಧೋಳ ಕ್ಷೇತ್ರಕ್ಕೆ ಯಾರು. ಕೇವಲ ಎಂಎಲ್ಸಿ ಎಂಬುದು ಮರೆಯಬಾರದು ಎಂದರು.

Advertisement

ತಿಮ್ಮಾಪುರ ಒಬ್ಬ ಪ್ರಬುದ್ಧ ರಾಜಕಾರಣಿ ಅಂದುಕೊಂಡಿದ್ದೆ. ಶಾಸಕಾಂಗ ವ್ಯವಸ್ಥೆ ಗೊತ್ತಿದೆ ಎಂದು ಭಾವಿಸಿದ್ದೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಕೆಲಸ ಆದರೂ, ಅದಕ್ಕೆ ಆ ಕ್ಷೇತ್ರದ ಶಾಸಕರ ಪ್ರಯತ್ನ ಇರುತ್ತದೆ ಎಂಬುದು ಮರೆಯಬಾರದು ಎಂದು ಹೇಳಿದರು.

ಶುಗರ್‌ ಟೆಕ್ನಾಲಜಿ ಕಾಲೇಜ್‌ ಮಾಡಲಿ: ಂದೆ ಮುಧೋಳಕ್ಕೆ ಶುಗರ್‌ ಟೆಕ್ನಾಲಜಿ ಕಾಲೇಜು ಘೋಷಣೆಯಾಗಿತ್ತು. ಅದು ಈ ವರೆಗೂ ಆರಂಭಗೊಂಡಿಲ್ಲ. ಮುಧೋಳದ ಜನರು ಹಾಗೂ ಮತದಾರರ ಬಗ್ಗೆ ಕಾಳಜಿ ಇದ್ದರೆ, ಶುಗರ್ ಟೆಕ್ನಾಲಜಿ ಕಾಲೇಜು ತಕ್ಷಣ ಆರಂಭಿಸಲು ಕ್ರಮ ಕೈಗೊಳ್ಳಲಿ. ಅದೂ ತಿಮ್ಮಾಪುರ ಅವರ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದೆ ಎಂದರು.

ಮುಧೋಳಕ್ಕೆ ಕೃಷ್ಣಾ ನೀರು; ವಾರದಲ್ಲಿ ಹಣ: ಮುಧೋಳ ನಗರಕ್ಕೆ ಸಧ್ಯ ಘಟಪ್ರಬಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಜನಸಂಖ್ಯೆ ಹೆಚ್ಚಿದ್ದು, 10ರಿಂದ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ನಗರೋತ್ಥಾನ ಹಂತ-3ರಡಿ ಮುಧೋಳ ನಗರಸಭೆಗೆ 21 ಕೋಟಿ ಅನುದಾನ ಬಂದಿದ್ದು, ಈ ಅನುದಾನದ ಜತೆಗೆ ಇನ್ನೂ 9 ಕೋಟಿ ಹೆಚ್ಚುವರಿ ಅನುದಾನ ನೀಡಿ, ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳಲು ನಾನು ಕ್ಷೇತ್ರದ ಶಾಸಕನಾಗಿ ಕಳೆದ 2018ರ ಡಿಸೆಂಬರ್‌ 17ರಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಒಂದು ವಾರದಲ್ಲಿ ಹಣ ಬಿಡುಗಡೆಯಾಗಲಿದೆ. ತಿಮ್ಮಾಪುರರು ಸಚಿವರಾಗಿದ್ದ ಈ ವಿಷಯ ತಿಳಿದುಕೊಂಡು, ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆಗೆ ತಾವು ಯೋಜನೆ ರೂಪಿಸುತ್ತಿರುವುದಾಗಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಬಂಡಿವಡ್ಡರ ಗೊತ್ತಿಲ್ಲ: ನನ್ನ ಬಗ್ಗೆ ಸತೀಶ ಬಂಡಿವಡ್ಡರ ಟೀಕೆ ಮಾಡಿದ್ದು, ಅಂತಹ ವ್ಯಕ್ತಿಗಳ ಟೀಕೆಗೆ ನಾನು ಉತ್ತರ ಕೊಡಲ್ಲ. ಬಂಡವಡ್ಡರ ಯಾರೆಂದು ನನಗೆ ಗೊತ್ತಿಲ್ಲ. ಅವರು ಮುಧೋಳದ ರಸ್ತೆ ದುರಸ್ತಿ ಮಾಡಿದ್ದಾಗಿ ಹೇಳಿಕೊಂಡಿದ್ದು, ಅವರಷ್ಟು ಶ್ರೀಮಂತ ನಾನಲ್ಲ. ಸರ್ಕಾರ ಮಾಡುವ ಕೆಲಸ ಅವರು ಮಾಡಿದ್ದರೆ, ಅವರದೇ ಸರ್ಕಾರಕ್ಕಿಂತ ದೊಡ್ಡ ವ್ಯಕ್ತಿಯಾಗುತ್ತಾರೆ ಎಂದರು.

ಬಿಜೆಪಿ ಮುಧೋಳ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಗ್ರಾಮೀಣ ಘಟಕದ ಅಧ್ಯಕ್ಷ ಎಚ್.ಆರ್‌. ಮಾಚಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಯುವ ಮುಖಂಡ ರಾಘವೇಂದ್ರ ನಾಗೂರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next