•ಶ್ರೀಶೈಲ ಬಿರಾದಾರ
ಬಾಗಲಕೋಟೆ: ಕಳೆದೊಂದು ವಾರದಿಂದ ಕೃಷ್ಣಾ ನದಿಯಲ್ಲಿ ಮಾತ್ರ ಉಂಟಾಗಿದ್ದ ಪ್ರವಾಹ ಬುಧವಾರದಿಂದ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೂ ವಿಸ್ತರಿಸಿದೆ. ಜಿಲ್ಲೆಯ ಮೂರು ನದಿಗಳಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಆರು ತಾಲೂಕಿನ 131 ಗ್ರಾಮಗಳ ಜನರು ಅತಂತ್ರ ಬದುಕು ಸಾಗಿಸುತ್ತಿದ್ದಾರೆ.
ಕೃಷ್ಣಾ ನದಿಗೆ ಬುಧವಾರ 3,46,567 ಕ್ಯೂಸೆಕ್, ಘಟಪ್ರಭಾ ನದಿಗೆ 1.72 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಎರಡೂ ನದಿಗಳ ನೀರು ಆಲಮಟ್ಟಿ ಜಲಾಶಯ ಸೇರುತ್ತಿದ್ದು, ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದ ಹಿನ್ನೀರು ಬಾಗಲಕೋಟೆ, ಬೀಳಗಿ, ಜಮಖಂಡಿ ತಾಲೂಕಿನ ಹಲವು ಹಳ್ಳಿಗಳು ಬಾಧಿತಗೊಂಡಿವೆ.
13 ಸೇತುವೆ ಜಲಾವೃತ: ಮಲಪ್ರಭಾ ನದಿಗೆ 45 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಬಾದಾಮಿ ತಾಲೂಕಿನ 27 ಹಳ್ಳಿಗಳು ಪ್ರವಾಹಕ್ಕೆ ಒಳಗಾಗುವ ತೀವ್ರ ಭೀತಿಯಲ್ಲಿವೆ. ಬುಧವಾರ ಘಟಪ್ರಭಾ ನದಿ ಪಾತ್ರದ ಯಾದವಾಡ-ಮುಧೋಳ ರಾಜ್ಯ ಹೆದ್ದಾರಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ. ಈ ಸೇತುವೆ ಸಹಿತ ಈವರೆಗೆ ಜಿಲ್ಲೆಯಲ್ಲಿ 13 ಸೇತುವೆಗಳ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಧೋಳ ತಾಲೂಕಿನ ಮಳಲಿ, ಮಾಚಕನೂರ, ಇಂಗಳಗಿ, ಜಾಲಿಬೇರಿ, ಉತ್ತೂರ, ಬುದ್ನಿ ಬಿಕೆ, ಮಿರ್ಜಿ, ಚೆನಾಳ, ಒಂಟಗೋಡಿ, ರಂಜಣಗಿ ಗ್ರಾಮಗಳಿಗೆ ಮುಂಭಾಗ ನೀರು ನುಗ್ಗಿದೆ. ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಇಲ್ಲಿನ ನದಿ ಪಾತ್ರದ 250 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
131 ಹಳ್ಳಿಗೆ ಆತಂಕ: ಮೂರು ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಜಮಖಂಡಿ 26, ಬೀಳಗಿ 12, ಮುಧೋಳ 21, ಬಾಗಲಕೋಟೆ 12, ಬಾದಾಮಿ 27 ಹಾಗೂ ಹುನಗುಂದ ತಾಲೂಕಿನ 33 ಹಳ್ಳಿಗಳು ಸೇರಿ ಒಟ್ಟು 131 ಹಳ್ಳಿಗಳಿಗೆ ಯಾವುದೇ ಕ್ಷಣದಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ. ಈಗಾಗಲೇ ಮುಧೋಳ ಪಟ್ಟಣದ ಎರಡು ಗಲ್ಲಿಗಳು, ಮಿರ್ಜಿ ಸಹಿತ ಏಳು ಗ್ರಾಮ, ಜಮಖಂಡಿ ತಾಲೂಕಿನ 13 ಗ್ರಾಮಗಳ ಸುತ್ತ ನೀರು ಆವರಿಸಿಕೊಂಡಿದೆ. ಘಟಪ್ರಭಾ ನದಿ ಪಾತ್ರದಲ್ಲಿ 23 ಹಾಗೂ ಮಲಪ್ರಭಾ ನದಿ ಪಾತ್ರದಲ್ಲಿ 18 ಬ್ಯಾರೇಜ್‌ಗಳಿದ್ದು, ಎಲ್ಲಾ ಬ್ಯಾರೇಜ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ.
ಇಬ್ಬರು ಯುವಕರ ರಕ್ಷಣೆ: ಘಟಪ್ರಭಾ ನದಿ ಪ್ರವಾಹ ಉಂಟಾಗಿದ್ದು, ಮುಧೋಳ ತಾಲೂಕಿನ ನಾಗರಾಳದಲ್ಲಿ ನದಿ ದಟದಲ್ಲಿದ್ದ ವಿದ್ಯುತ್ ಪಂಪಸೆಟ್ ತರಲು ಹೋಗಿದ್ದ ಇಬ್ಬರು ಯುವಕರು ಪ್ರವಾಹದಲ್ಲಿ ಸಿಲುಕಿದ್ದರು. ಅವರನ್ನು ಮಹಾಲಿಂಗಪುರ ಪೊಲೀಸರು ರಕ್ಷಣೆ ಮಾಡಿದ್ದಾರೆ. ಆ.8 ಮತ್ತು 9ರಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.