Advertisement

ಜಿಪಂ ಅಧ್ಯಕ್ಷ ಸ್ಥಾನಕ್ಕೆ  ಕರಿನೆರಳು

10:02 AM Mar 11, 2019 | Team Udayavani |

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಈಗಾಗಲೇ ಘೋಷಣೆಯಾಗಿದ್ದ ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತದೆಯೋ, ಇಲ್ಲವೋ ಎಂಬ ಚರ್ಚೆ ಶುರುವಾಗಿದೆ.

Advertisement

ಜಿಪಂ ಅಧ್ಯಕ್ಷ ಸ್ಥಾನಕ್ಕೆ ವೀಣಾ ಕಾಶಪ್ಪನವರ ರಾಜೀನಾಮೆ ನೀಡಿದ ಬಳಿಕ, ತೆರವಾದ ಸ್ಥಾನಕ್ಕೆ ಮಾ. 14ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಅಧಿಸೂಚನೆ ಹೊರಡಿಸಿದ್ದರು. ಆದರೆ, ರವಿವಾರ ಲೋಕಸಭೆ ಚುನಾವಣೆಗೆ ದಿನ ನಿಗದಿಗೊಳಿಸಿದ ಕೇಂದ್ರ ಚುನಾವಣೆ ಆಯೋಗ, ತಕ್ಷಣದಿಂದ ನೀತಿ ಸಂಹಿತೆ ಜಾರಿಗೊಳಿಸಿದೆ. ಹೀಗಾಗಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುವ ಕುರಿತು ಅನುಮಾನ ಶುರುವಾಗಿವೆ.

ಒಟ್ಟು 36 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್‌ 17, ಬಿಜೆಪಿ 18 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದು, ಉಪಾಧ್ಯಕ್ಷರಾಗಿದ್ದ ಪಕ್ಷೇತರ ಸದಸ್ಯ ಮುತ್ತಪ್ಪ ಕೋಮಾರ, ಈಗ ಹಂಗಾಮಿ ಅಧ್ಯಕ್ಷರಾಗಿದ್ದಾರೆ.

ಕಳೆದ 2016ರಲ್ಲಿ ಜಿಪಂ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ಅ ವರ್ಗಕ್ಕೆ ಮೀಸಲಿರಿಸಿ, ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದು ಐದು ವರ್ಷಗಳ ಅವಧಿಗೆ ಮೀಸಲಾತಿ ನಿಗದಿಯಾಗಿದ್ದು, 33 ತಿಂಗಳ ಕಾಲ ಅಧ್ಯಕ್ಷರಾಗಿದ್ದ ವೀಣಾ ಕಾಶಪ್ಪನವರ, ರಾಜೀನಾಮೆ ನೀಡಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್‌ನ ಒಂದು ಬಣ, ತೀವ್ರ ಒತ್ತಡ ಹಾಗೂ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿತ್ತು.

ಹಲವು ರಾಜಕೀಯ ಚಟುವಟಿಕೆಗಳ ಬಳಿಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾಶಪ್ಪನವರ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜಿಪಂ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತ ಇಲ್ಲದಿದ್ದರೂ, ಕಾಂಗ್ರೆಸ್‌ ರಾಜಕೀಯ ತಂತ್ರಗಾರಿಕೆಯಿಂದ ಅಧ್ಯಕ್ಷ ಸ್ಥಾನ ಪಡೆದಿತ್ತು. ಇದೀಗ ಅದೇ ತಂತ್ರಗಾರಿಕೆ ನಡೆಸಿ, ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿದೆ.

Advertisement

ಅಧ್ಯಕ್ಷ ಸ್ಥಾನಕ್ಕೆ ಕಸರತ್ತು: ಮಾಜಿ ಸಚಿವ, ಬಿಟಿಡಿಎ ಅಧ್ಯಕ್ಷ ಎಚ್‌.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ, ಉಳಿದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಬಾದಾಮಿ ತಾಲೂಕು ಅನವಾಲ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಶಶಿಕಲಾ ರಾಮಚಂದ್ರ ಯಡಹಳ್ಳಿ ಅವರೂ, ಬಾದಾಮಿ ತಾಲೂಕಿಗೆ ಈ ವರೆಗೆ ಜಿಪಂ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಅದರಲ್ಲೂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಸಾಮಾನ್ಯ ವರ್ಗಕ್ಕೆ ಸೇರಿದ ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಪಕ್ಷದ ಹಿರಿಯರ ಮೂಲಕ ಒತ್ತಡ ಹಾಕಿದ್ದಾರೆ.

ಕಾಂಗ್ರೆಸ್‌ನಲ್ಲಿ ಪೈಪೋಟಿ: ಎಲ್ಲರೂ ಕೂಡಿ ಚರ್ಚೆ ಮಾಡಿ ಅಧ್ಯಕ್ಷರು ಯಾರು ಆಗಬೇಕು ಎಂಬುದು ನೀವೇ ನಿರ್ಧಾರ ಮಾಡಿ ಎಂಬ ಸಲಹೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಹಿರಿಯರಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಾಯಕ್ಕ ಮೇಟಿ ಮತ್ತು ಶಶಿಕಲಾ ಯಡಹಳ್ಳಿ ಅವರು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಸಿದ್ದಾರೆ.

ಬಿಜೆಪಿಯಲ್ಲಿ ಮೂಡದ ಒಮ್ಮತ: ಜಿಪಂನಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ, ಮನಸ್ಸು ಮಾಡಿದರೆ, ಅಧ್ಯಕ್ಷ ಸ್ಥಾನ ಪಡೆಯಲು ಸಾಧ್ಯವಿದೆ. ಪಕ್ಷದ ಸದಸ್ಯರು ಹಾಗೂ ಹಿರಿಯರು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿಯೇ ನಾವು ಕಳೆದ ಬಾರಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದೇವೆ ಎಂದು ಅಸಮಾಧಾನ ಬಿಜೆಪಿಯ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಶನಿವಾರ ಜಿಲ್ಲೆಗೆ ಬಂದಿದ್ದ ಬಂದಿದ್ದ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಉಸ್ತುವಾರಿ ಹಾಗೂ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಪಂನಲ್ಲಿ ಸೆಡ್ಡು ಹೊಡೆಯುವ ಉದ್ದೇಶದಿಂದ ಪಕ್ಷದ ಜಿಪಂ ಸದಸ್ಯರ ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಬಿಜೆಪಿಯ ಒಟ್ಟು 18 ಸದಸ್ಯರಲ್ಲಿ 15 ಜನ ಮಾತ್ರ ಆಗಮಿಸಿದ್ದರು. ಉಳಿದ ಮೂವರು ಸದಸ್ಯರು ಬಿಜೆಪಿ ನಾಯಕರೇ ಕರೆದ ಸಭೆಗೆ ಹಾಜರಾಗಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ, ಬಿಜೆಪಿಗೆ ಒಲಿಯುವುದು ಕಷ್ಟಸಾಧ್ಯ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.

ಒಟ್ಟಾರೆ, ಮಾರ್ಚ್‌ 14ರಂದು ನಿಗದಿಯಾಗಿದ್ದ ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆಗೂ ಎರಡೂ ಪಕ್ಷದಲ್ಲಿ ತೀವ್ರ ರಾಜಕೀಯ ಚಟುವಟಿಕೆ ನಡೆದಿದ್ದವು. ಈಗ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆಯೋ, ಇಲ್ಲವೋ ಎಂಬ ಗೊಂದಲ ಶುರುವಾಗಿದೆ.

ಆಯೋಗದ ನಿರ್ದೇಶನ ಪಡೆಯುವೆ
ಬಾಗಲಕೋಟೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಗೊಳಿಸಿ, ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಲೋಕಸಭೆ ಚುನಾವಣೆ ಭಾರತ ಚುನಾವಣೆ ಆಯೋಗ ಘೋಷಣೆ ಮಾಡಿದೆ. ಹೀಗಾಗಿ ನೀತಿ ಸಂಹಿತೆ ಜಾರಿಗೊಂಡಿದೆ. ಆದರೂ, ಕರ್ನಾಟಕ ಚುನಾವಣೆ ಆಯೋಗಕ್ಕೆ ಈ ಕುರಿತು ಸ್ಪಷ್ಟನೆ ನೀಡಲು ಕೋರಲಾಗುವುದು. ಆಯೋಗದ ನಿರ್ದೇಶನ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
-ಪಿ.ಎ. ಮೇಘಣ್ಣವರ,
ಪ್ರಾದೇಶಿಕ ಆಯುಕ್ತರು, ಬೆಳಗಾವಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next