Advertisement
ಹೌದು, ರಾಜ್ಯ ಸರ್ಕಾರದಲ್ಲಿ ಪ್ರಭಲ ಎನಿಸಿರುವ ಪಿಡಬ್ಲುಡಿ ಖಾತೆಯೊಂದಿಗೆ ಉಪ ಮುಖ್ಯಮಂತ್ರಿ ಸ್ಥಾನ, ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು ಇದೇ ಜಿಲ್ಲೆಯವರು. ಬುಧವಾರ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೀಳಗಿ ಕ್ಷೇತ್ರದ ಮುರುಗೇಶ ನಿರಾಣಿ, ಬೆಂಗಳೂರಿನ ಮಹದೇವಪುರ ವಿಧಾನಸಭೆ ಪ್ರತಿನಿಧಿಸುವ ಅರವಿಂದ ಲಿಂಬಾವಳಿ ಕೂಡ ಬಾಗಲಕೋಟೆ ಜಿಲ್ಲೆಯವರು ಎಂಬುದು ವಿಶೇಷ.
Related Articles
Advertisement
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲೂ ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆತಿದ್ದವು. ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಎಸ್.ಆರ್. ಪಾಟೀಲ, ಐಟಿ-ಬಿಟಿ ಸಚಿವರಾಗಿದ್ದರೆ, ತೇರದಾಳ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಉಮಾಶ್ರೀ ಕೂಡ ಎರೆಡೆರಡು ಖಾತೆ ನಿರ್ವಹಿಸಿದ್ದರು. ಪಾಟೀಲ ಬಳಿಕ ಎಚ್.ವೈ. ಮೇಟಿ, ಅವರ ಬಳಿಕ ಆರ್.ಬಿ. ತಿಮ್ಮಾಪುರ ಕೂಡ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ವಿರೋಧ ಪಕ್ಷದ ಸ್ಥಾನಗಳೂ ಜಿಲ್ಲೆಗೆ: ಸರ್ಕಾರದಷ್ಟೇ ಪ್ರಮುಖ ಸ್ಥಾನಮಾನ ಹೊಂದಿರುವ ವಿಧಾನಸಭೆ ಹಾಗೂ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಸ್ಥಾನಗಳೂ ಜಿಲ್ಲೆಗೆ ಒಲಿದಿವೆ. ಬಾದಾಮಿ ಕ್ಷೇತ್ರ ಪ್ರತಿನಿಧಿಸುವ ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇನ್ನು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಎಸ್.ಆರ್. ಪಾಟೀಲರು, ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೀಗಾಗಿ ಜಿಲ್ಲೆಗೆ ಎರಡು ವಿರೋಧ ಪಕ್ಷದ ನಾಯಕ ಸ್ಥಾನಗಳು, ಓರ್ವ ಡಿಸಿಎಂ, ಲಿಂಬಾವಳಿ ಸಹಿತ ಇಬ್ಬರು ಸಚಿವರು ಲಭಿಸಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಕೋಟೆ ನಾಡು ಶಕ್ತಿ ಕೇಂದ್ರವಾಗಿ ಹೊರ ಹೊಮ್ಮಿದೆ.
ಅಭಿವೃದ್ಧಿಗೆ ಬಳಕೆಯಾಗಲಿ: ಸರ್ಕಾರ, ವಿರೋಧ ಪಕ್ಷ ಸಹಿತ ಎರಡಲ್ಲೂ ಪ್ರಮುಖ ಹುದ್ದೆಗಳು ಜಿಲ್ಲೆಗೆ ಲಭಿಸಿದ್ದು, ಅವುಗಳ ಸದ್ಭಳಕೆಯಾಗಬೇಕಿದೆ. ರಾಜಕೀಯ ಪ್ರತಿಷ್ಟೆಗಳೇನೇ ಇದ್ದರೂ, ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲರೂ ಒಂದಾಗಿ ಚಿಂತಿಸಿ, ಮುಂದಡಿ ಇಡಬೇಕು ಎಂಬುದು ಪ್ರಜ್ಞಾವಂತರ ಒತ್ತಾಸೆ.
ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಬೇಕು. ಜಿಲ್ಲೆಗೆ ಬಿ ಸ್ಕೀಂನಡಿ ಹಂಚಿಕೆಯಾದ ನೀರು ಬಳಸಿಕೊಳ್ಳಬೇಕು. ಜಿಲ್ಲೆಯ ಸಮಗ್ರ ನೀರಾವರಿ, ಕೆರೆಗಳಿಗೆ ನೀರು ತುಂಬಿಸಿ, ಅಂತರ್‌ಜಲ ಹೆಚ್ಚಿಸಬೇಕು. ಹೆಸರಿಗೆ ಮಾತ್ರ ಸಿಮೀತವಾದ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ದೊಡ್ಡ ಮಟ್ಟದ ಅನುದಾನದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ವಿಸ್ತರಿಸಬೇಕು, ಪ್ರತಿ ಹಳ್ಳಿಯೂ ಮಾದರಿಯಾಗಬೇಕು. ಅಂತಹ ವಿಫುಲ ಅವಕಾಶ-ಸಾಮರ್ಥ್ಯ ಎಲ್ಲವೂ ಜಿಲ್ಲೆಯ ರಾಜಕೀಯ ನಾಯಕರ ಕೈಗೆ ಸಿಕ್ಕಿವೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಪ್ರಯತ್ನವಾಗಲಿ ಎಂಬುದು ಜಿಲ್ಲೆಯ ಜನರ ಅಭಿಲಾಸೆ.
ಸಮಗ್ರ ಅಭಿವೃದ್ಧಿಗೆ ಮುಂದಾಗಲಿ
ಬಾಗಲಕೋಟೆ ಜಿಲ್ಲೆ ಈಗ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾಗಿದೆ. ಡಿಎಂಸಿ, ಸಚಿವರು, ವಿರೋಧ ಪಕ್ಷದ ನಾಯಕರು ನಮ್ಮ ಜಿಲ್ಲೆಯವರೇ ಇದ್ದಾರೆ. ಆಲಮಟ್ಟಿ ಜಲಾಶಯ ಎತ್ತರಿಸಬೇಕು, ಮುಳುಗಡೆಯಾಗುವ 1.36 ಲಕ್ಷ ಎಕರೆ ಭೂಮಿಗೆ ಮಾರುಕಟ್ಟೆ ದರದ ಬೆಲೆ ನೀಡಬೇಕು. ಈ ಅವಧಿಯಲ್ಲಾದರೂ ಈ ಪ್ರಮುಖ ಕೆಲಸ ನಮ್ಮ ಜಿಲ್ಲೆಯ ನಾಯಕರಿಂದ ಆಗಲಿ.
-ಪ್ರಕಾಶ ಅಂತರಗೊಂಡ, ಮುಖಂಡ, ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ
ಶ್ರೀಶೈಲ ಕೆ. ಬಿರಾದಾರ