ಬಾಗಲಕೋಟೆ: ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಂದು ಇಲಾಖೆಯ ಜವಾಬ್ದಾರಿ ಮತ್ತು ಕರ್ತವ್ಯ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರಕರ್ನಾಟಕದ ಹಲವು ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಇಂದಿಗೂ ಜೀವಂತವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಮಕ್ಕಳಿಂದಲೇ ಹಕ್ಕು ರಕ್ಷಣೆಗೆ ಸಿನಿಮಾ ಪ್ರದರ್ಶನ: ಸಮಾಜಕ್ಕೆ ಬಾಲ್ಯ ವಿವಾಹ ಒಂದು ಪಿಡುಗು ಆಗಿದೆ. ಇದನ್ನು ಮಕ್ಕಳಿಂದಲೇ ತಡೆಗಟ್ಟಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಾಲ್ಯ ವಿವಾಹದ ದುಷ್ಪರಿಣಾಮ ಬೀರುವ ಸಂದಿಗ್ಧ ಎಂಬ ಸಿನೆಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜ. 4ಮತ್ತು 6ರಂದು ಜಿಲ್ಲೆಯ 14 ಚಿತ್ರ ಮಂದಿರಗಳಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೆ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ವಿಜಯಪುರ ಜಿಲ್ಲೆಯಲ್ಲಿ 56 ಸಾವಿರ ಮಕ್ಕಳಿಗೆ ಈ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲೂ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 8ರಿಂದ 10ನೇ ತರಗತಿ ಮಕ್ಕಳಿಗೆ ಈ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಐದು ಅಂಶಗಳ ತರಬೇತಿ: ಹುಟ್ಟಿದ ಪ್ರತಿಯೊಂದು ಮಗುವಿಗೂ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕು, ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಬೇಕು. ಆಯಾ ಗ್ರಾ.ಪಂ.ಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಬೇಕು, ಮಕ್ಕಳ ಮಾರಾಟ-ಸಾಗಣೆ ತಡೆಗೆ ಗ್ರಾಮಗಳಲ್ಲಿ ಸಮಿತಿ ರಚನೆ, ಕಿಶೋರಿ ಸಂಘಗಳನ್ನು ಶಾಲೆಗಳಲ್ಲಿ ರಚನೆ ಮಾಡುವುದು ಸೇರಿದಂತೆ ಐದು ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ಇಲಾಖೆಯಗಳ ಅಧಿಕಾರಿಗಳಿಗೆ ಆಯೋಗದಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಬಳಿಕ ಯಾವ ಗ್ರಾ.ಪಂ, ಅಧಿಕಾರಿಗಳು ಪಾಲನೆ ಮಾಡಿದ್ದಾರೆ ಎಂಬುದನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದರು. ಬಾಲ್ಯ ವಿವಾಹ ತಡೆಗೆ ಕ್ರಮ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ನಿತ್ಯ ಕಂಡು ಬರುತ್ತಿವೆ. ಶುಕ್ರವಾರವೇ ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ಬಾಲ್ಯ ವಿವಾಹ ನಡೆದ ಕುರಿತು ಗಮನಕ್ಕೆ ಬಂದಿದೆ. ಇದನ್ನು ತಡೆಯುವುದು ಒಂದು ಇಲಾಖೆಯ ಕೆಲಸವಲ್ಲ. ಹಲವು ಇಲಾಖೆಗಳ ಜವಾಬ್ದಾರಿ ಇದೆ. ಮಕ್ಕಳ ರಕ್ಷಣಾ ಸಮಿತಿಯಿಂದ ಪೊಲೀಸ್ ಇಲಾಖೆಗೆ ಶಿಫಾರಸ್ಸು ಮಾಡುವ ಪ್ರಕರಣಗಳಿಗೆ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು. ಬಾಲ್ಯ ವಿವಾಹಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದೆರಡು ಪ್ರಕರಣಗಳಲ್ಲಿ ಕ್ರಮ ಕೈಗೊಂಡರೆ ಜನರು ಜಾಗೃತರಾಗುತ್ತಾರೆ. ಈ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂಬ ದೂರುಗಳಿವೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವೈ. ಮರಿಸ್ವಾಮಿ, ಆನಂದ ಲೋಬೋ, ರೂಪಾ ನಾಯಕ, ರಾಘವೇಂದ್ರ ಭಟ್, ಆನಂದ ಗೌಡರ ಮುಂತಾದವರು ಉಪಸ್ಥಿತರಿದ್ದರು.