ಬಾಗಲಕೋಟೆ: ಭಾರತದಲ್ಲಿ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನ ಆರಂಭಿಸಿದ್ದ ಚಾಲುಕ್ಯರ
ರಾಜರ ಸಮಾಧಿಗಳು ಬಾದಾಮಿ ತಾಲೂಕು ವಿಶ್ವ ಪರಂಪರೆ ಪ್ರವಾಸಿ ತಾಣ ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ.
Advertisement
ಚಾಲುಕ್ಯರು ತಾವು ಬಾಳಿದ ಅರಮನೆಗಳ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಅರಮನೆಗಳ ಯಾವುದೇ ಕುರುಹುಗಳು ಇಲ್ಲ. ತಮ್ಮ ಸಾವಿನ ನಂತರ ಆಡಂಬರದ ಸಮಾಧಿಗಳನ್ನು ಸಹ ಕೆತ್ತಿಸಲಿಲ್ಲ. ಇವರ ಸಮಾಧಿಗಳು ಎಲ್ಲಿವೆ ಎಂಬುದರ ಬಗ್ಗೆ ನೂರಾರು ಸಂಶೋಧಕರಿಗೆ ಸವಾಲಾಗಿಯೇ ಉಳಿದಿತ್ತು. ಶಿವ, ವಿಷ್ಣುವನ್ನು ನಂಬಿದ ಈ ಮಹಾನ್ ರಾಜರು ತಮ್ಮ ಸಾವನ್ನು ಸಹರಹಸ್ಯಮಯಗೊಳಿಸಿದ್ದು ಆಶ್ಚರ್ಯ. ಚಾಲುಕ್ಯರ ನಾಡಿನಲ್ಲಿ 2005ರಿಂದ ಸತತ 14 ವರ್ಷಗಳ ಕಾಲ ನಡೆದ ಸಂಶೋಧನೆ ಹಾಗೂ ಛಾಯಾಗ್ರಹಣದ ಹಾದಿಯಲ್ಲಿ ಅನೇಕ ರೋಚಕ ವಿಷಯಗಳು ಕಂಡು ಬಂದಿದ್ದು, ಚಾಲುಕ್ಯರ ನಾಡಿನಲ್ಲಿ ಬೆಳಕಿಗೆ ಬಾರದ ಶಕ್ತಿ ಆರಾಧನೆ, ತಂತ್ರಸಾಧನೆಗಳು ಅನೇಕ ಅಚ್ಚರಿಯನ್ನುಂಟು ಮಾಡಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಹೇಳಿದ್ದಾರೆ.
Related Articles
Advertisement
ಹುಲಿಗೆಮ್ಮನ ಕೊಳ್ಳದ ಸಮಾಧಿ ರೂಪದ ದೇವಾಲಯಗಳು, ಪಟ್ಟದಕಲ್ಲು ಹತ್ತಿರದ ಭದ್ರನಾಯಕನ ಜಾಲಿಹಾಳ ಹತ್ತಿರದಲ್ಲಿವೆ. ಹುಲಗೆಮ್ಮನ ಕೊಳ್ಳದ ಗುಡ್ಡದಲ್ಲಿ 2ನೇ ಪುಲಕೇಶಿ ಕೆಲ ಕಾಲ ವಾಸಿಸಿರುವುದರ ಬಗ್ಗೆ ಕೆಲ ಸಂಶೋಧಕರು ಉಲ್ಲೇಖೀಸಿದ್ದಾರೆ.
ಇಲ್ಲಿರುವ 11 ಚಿಕ್ಕ ಚಿಕ್ಕ ದೇವಾಲಯಗಳು, 11 ರಾಜರ ಸಮಾಧಿಗಳು, ದೇಶದ ಪ್ರಮುಖ 12 ಜ್ಯೋತೀರ್ಲಿಂಗಗಳ ರೂಪವೆಂದು ಸ್ಥಳೀಯರು ತಪ್ಪಾಗಿ ಅರ್ಥೈಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಒಂದೇ ವಂಶಸ್ಥರ ಅಂತ್ಯಕ್ರಿಯೆಗಳನ್ನು ಒಂದೆಡೆ ಮಾಡುವುದು ಪರಂಪರಾಗತ ರೂಢಿ. ಅಲ್ಲದೆ ಚಾಲುಕ್ಯ ರಾಜರುಗಳ ಅಸ್ತಿಗಳ ಅಂತ್ಯಕ್ರಿಯೆಗಳನ್ನು ಹುಲಿಗೆಮ್ಮನ ಕೊಳ್ಳದ ಬೆಟ್ಟದಲ್ಲಿ ಮಾಡಿ ಅದರ ಮೇಲೆ ಲಿಂಗಗಳನ್ನು ಸ್ಥಾಪಿಸಿ ಚಿಕ್ಕ ಚಿಕ್ಕ ದೇವಸ್ಥಾನ ನಿರ್ಮಿಸಲಾಗಿದೆ.
ಈ ರಾಜವಂಶಸ್ಥರ ರುದ್ರಭೂಮಿ ಇಲ್ಲಿರುವುದರ ಬಗ್ಗೆ ಅನೇಕ ಐತಿಹ್ಯಗಳಿವೆ. ಇದಕ್ಕೆ ಪುಷ್ಟೀಕರಿಸುವಂತೆ ಶಿಖರವಲ್ಲದ ಒಂದು ದೇವಾಲಯದ ಮಂಟಪದಲ್ಲಿ 2ನೇ ವಿಕ್ರಮಾದಿತ್ಯನ ಅಸ್ತಿಗಳನ್ನು ಸಮಾಧಿ ಮಾಡಲಾಗಿರುವ ಬಗ್ಗೆ ಅಲ್ಲಿರುವ ಶಾಸನದಲ್ಲಿ ಉಲ್ಲೇಖೀಸಲಾಗಿದೆಯೆಂದು ಡಾ| ಜಾರ್ಜ್ ಮಿಶೆಲ್ ಸಂಶೋಧಿಸಿದ್ದಾರೆ.
ಉಳಿದ ಯಾವ ರಾಜರುಗಳ ಸಮಾಧಿಗಳ ಬಗ್ಗೆ ಉಲ್ಲೇಖವಿಲ್ಲವಾದರೂ ಹಿಂದೂ ಸಂಪ್ರದಾಯದಂತೆ ರಾಜವಂಶಸ್ಥರ ಸಮಾಧಿಗಳನ್ನು ಒಂದೆಡೆ ನಿರ್ಮಿಸುವುದು, ಸಮಾಧಿಗಳ ಮೇಲೆ ಲಿಂಗಗಳನ್ನು ಇಡುವುದು ಧಾರ್ಮಿಕ ಪರಂಪರೆಯಾಗಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿದ್ದು, ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಗಳು ಇಲ್ಲಿರುವ ಸಮಾಧಿಗಳ ಉತ್ಖನನ ನಡೆಸಿದಲ್ಲಿ ಸತ್ಯಾಸತ್ಯತೆ ತಿಳಿಯಲಿದೆಎಂದು ಅಭಿಪ್ರಾಯ ಪಡಲಾಗಿದೆ.