Advertisement

ವೈದ್ಯರ ಮುಷ್ಕರ: ರೋಗಿಗಳ ಪರದಾಟ

12:28 PM Aug 01, 2019 | Naveen |

ಬಾಗಲಕೋಟೆ: ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲೆಯ ಖಾಸಗಿ ವೈದ್ಯರು ಬುಧವಾರ 24 ಗಂಟೆಗಳ ಮುಷ್ಕರ ನಡೆಸಿದರು. ಇದರಿಂದ ಖಾಸಗಿ ಆಸ್ಪತ್ರೆಗಳತ್ತ ಬಂದಿದ್ದ ರೋಗಿಗಳು, ಚಿಕಿತ್ಸೆ ದೊರೆಯದೇ ಪರದಾಡುವಂತಾಯಿತು.

Advertisement

ವೈದ್ಯರ ಮುಷ್ಕರದ ಅರಿವಿಲ್ಲದೇ ಬಹುತೇಕ ಗ್ರಾಮೀಣ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಬಂದಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಚಿಕಿತ್ಸೆ ವಿಭಾಗ ಬಂದ್‌ ಮಾಡಿದ್ದನ್ನು ಕಂಡು, ಜಿಲ್ಲಾ ಆಸ್ಪತ್ರೆಯತ್ತ ತೆರಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ವಿಭಾಗ ಹಾಗೂ ತುರ್ತು ಚಿಕಿತ್ಸಾ ವಿಭಾಗ ಮಾತ್ರ ಚಾಲ್ತಿಯಲ್ಲಿತ್ತು. ಹೊರ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿತ್ತು.

ಬಾಗಲಕೋಟೆಯಲ್ಲೂ ಪ್ರತಿಭಟನೆ: ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ವಿರೋಧಿಸಿ ಜಿಲ್ಲೆಯ ಖಾಸಗಿ ವೈದ್ಯರು ಬುಧವಾರ ಬೆಳಗ್ಗೆಯಿಂದ 24 ಗಂಟೆಗಳ ಕಾಲ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.

ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪ್ರತಿಭಟನೆಯಲ್ಲಿ ಡಾ| ಬಾಬು ರಾಜೇಂದ್ರ ನಾಯಕ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ್ಕೆ ವೈದ್ಯರಿಂದ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಆದರೂ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರ ನೀಡಿದ್ದರಿಂದ ವೈದ್ಯರಿಗೆ ಅನ್ಯಾಯವಾಗಿದೆ. ಈ ವಿಧೇಯಕ ಜಾರಿಗೊಳಿಸುವ ಮುನ್ನ ಚರ್ಚೆ ನಡೆಸಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಈ ಕ್ರಮ, ವೈದ್ಯರನ್ನು ಹತ್ತಿಕ್ಕುವ ತಂತ್ರವಾಗಿದೆ. ಈ ಮಸೂದೆಯಿಂದ ವೈದ್ಯರು, ನಿರ್ಭಯವಾಗಿ ಸೇವೆ ಸಲ್ಲಿಸುವುದೇ ಸ್ಥಗಿತಗೊಳ್ಳಲಿದೆ. ಅಲ್ಲದೇ ಶೇ.50 ವೈದ್ಯಕೀಯ ಸೀಟುಗಳು ವ್ಯಾಪಾರೀಕರಣಕ್ಕೆ ಪುಷ್ಟಿ ನೀಡುವಂತೆ ಮಾಡಲಾಗಿದೆ. ವೈದ್ಯಕೀಯ ಸೇವೆಗೆ ಮಾರಕವಾಗುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಜಾರಿ ಕುರಿತು ಕೇಂದ್ರ ಸರ್ಕಾರ, ಪುನರ್‌ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷೆ ಡಾ| ಜಯಶ್ರೀ ತೇಲಸಂಗ, ವೈದ್ಯರಾದ ಡಾ| ಎಂ.ಎಸ್‌. ದಡ್ಡೇನವರ, ಡಾ| ಬಿ.ಎಸ್‌. ಪಾಟೀಲ, ಡಾ| ಗಿರೀಶ ಮಾಸೂರಕರ, ಡಾ|ಪ್ರಭಯ್ಯ ಪ್ರಭುಸ್ವಾಮಿಮಠ, ಡಾ| ಸುಜಯ ಹೆರಂಜಲ, ಡಾ| ಜ್ಯೋತಿ ಪಾಟೀಲ, ಡಾ| ಕವಿತಾ ಕಟ್ಟಿ, ಡಾ| ಶಂಕರ ಪಾಟೀಲ, ಡಾ|ಎಚ್.ಆರ್‌. ಕಟ್ಟಿ, ಡಾ| ಎಚ್.ಎಫ್‌. ಯೋಗಪ್ಪನವರ, ಡಾ| ಎಸ್‌.ಎಚ್. ಹುಲಗುಂದ ಸೇರಿದಂತೆ ಜಿಲ್ಲೆಯ ವೈದ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next