ಬಾಗಲಕೋಟೆ: ಜಿಲ್ಲಾಡಳಿತವನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹಾಗೂ ಜಿಪಂ ಸಿಇಒ ಗಂಗೂಬಾಯಿ ಮಾನಕರ ಗುರುವಾರ, ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದರು.
ಗುರುವಾರ ರಾತ್ರಿ 7ರ ಹೊತ್ತಿಗೆ ಕಂದಾಯ ಇಲಾಖೆ ಮತ್ತು ಜಿ.ಪಂ. ಅಧೀನದ ವಿವಿಧ 28 ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಬಾಗಲಕೋಟೆಯಿಂದ ಜಮಖಂಡಿ ತಾಲೂಕು
ಆಲಬಾಳ ಗ್ರಾಮಕ್ಕೆ ತೆರಳಿದರು.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರೇ ಸ್ವತಃ ಬಸ್‌ನಲ್ಲಿ ಕುಳಿತ ಎಲ್ಲ ಅಧಿಕಾರಿಗಳ ಹಾಜರಾತಿ ಪಡೆದರು. ಬಳಿಕ ರಾತ್ರಿ ಆಲಬಾಳ ಗ್ರಾಮದಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಕುಂದು-ಕೊರತೆ ಆಲಿಸಿದರು. ರಾತ್ರಿ ಇಡೀ ಗ್ರಾಮದಲ್ಲೇ ವಾಸ್ತವ್ಯ ಇದ್ದು, ರಾಜ್ಯ, ಕೇಂದ್ರ ಸರ್ಕಾರದ ಸೌಲಭ್ಯಗಳು ಜನರಿಗೆ ತಿಳಿಸುವ ಜತೆಗೆ, ಗ್ರಾಮದ ಸಮಸ್ಯೆ ಆಲಿಸಿದರು.
ಶ್ರಮ-ಇಂಧನ ಉಳಿತಾಯ: ಡಿಸಿ ಮತ್ತು ಜಿಪಂ ಸಿಇಒ ಕೈಗೊಂಡ ಈ ಗ್ರಾಮ ವಾಸ್ತವ್ಯ ವಿಶೇಷತೆಯಿಂದ ಕೂಡಿತ್ತು. 28 ಜನ ಜಿಲ್ಲಾ ಮಟ್ಟದ ಅಧಿಕಾರಿಗಳು, ಅವರ ವಾಹನ, ಚಾಲಕರನ್ನು ಕರೆದುಕೊಂಡು ಹೋಗಿ, ಎಲ್ಲಾ ವಾಹನಗಳ ಇಂಧನ, ಚಾಲಕರ ಶ್ರಮ ವ್ಯಯಿಸುವ ಬದಲು, ಸಾರಿಗೆ ಸಂಸ್ಥೆಯ ಬಸ್ ಬಳಸಲಾಯಿತು. ಎಲ್ಲಾ ಅಧಿಕಾರಿಗಳೂ ಒಟ್ಟಿಗೆ ತೆರಳಿ, ಗ್ರಾಮ ವಾಸ್ತವ್ಯದ ಬಳಿಕ ಶುಕ್ರವಾರ ಒಟ್ಟಿಗೆ ಬಾಗಲಕೋಟೆಗೆ ಮರಳಲು ನಿರ್ಧರಿಸಿ, ಬಸ್‌ನಲ್ಲೇ ಸಂಚರಿಸಿ, ಬಸ್‌ನಲ್ಲೇ ಆಗಮಿಸಿದರು.
ಜಿಲ್ಲಾಡಳಿತದ ಸೇವೆಯನ್ನು ಗ್ರಾಮ ಮಟ್ಟದಲ್ಲಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಗ್ರಾಮ ವಾಸ್ತವ್ಯ ನಡೆಸಲಾಗುತ್ತಿದೆ. ಜನರ ಕುಂದು-ಕೊರತೆ ಆಲಿಸಿ, ಸ್ಥಳೀಯವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು. ಜಿಪಂ ಸಿಇಒ ವಿಶೇಷ
ಮುತುವರ್ಜಿ ವಹಿಸಿದ್ದು, ಜಿ.ಪಂ. ಮತ್ತು ಕಂದಾಯ ಇಲಾಖೆಯ ಸೌಲಭ್ಯ ಜನತೆಗೆ ಕಲ್ಪಿಸಲಾಗುವುದು.
ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ