ಬಾಗಲಕೋಟೆ: ಜಿಟಿ ಜಿಟಿ ಮಳೆ ಬಿಟ್ರ, ಭೂಮಿಗೆ ಹದವಾದ ಮಳೆ ಬಿದ್ದಿಲ್ಲ. ಇಂಥಾ ಬರದಾಗೂ ಕೊಳವೆ ಬಾವಿ, ತೆರೆದ ಬಾವಿ ನೀರಿನಿಂದ ಬೆಳೆದ ಬೆಳೆಯಲ್ಲ ನೆಲಸಮವಾಗೈತಿ. ಎದಿಮಟ ಬೆಳೆದ ಕಬ್ಬು, ಮೆಕ್ಕೆಜೋಳ, ಸೂರ್ಯಕಾಂತಿ ಬೆಳಿ ಭೂಮ್ಯಾಗ ಅಂಗಾತ ಬಿದ್ದೈತಿ. ಭೂಮಿಯ ಸೀಮೀ ಕಾಣವಲ್ವು. ನಾವ್ ಮಾಡಿದ ಪಾಪ ಆದ್ರೂ ಏನ್. ಈ ವಿಕೋಪ ನಮ್ಮನ್ಯಾಕ ಕಾಡಕತೈತಿ.
Advertisement
ಹೀಗೆ ಹೇಳಿದ್ದು ಕಣ್ಣೀರು ಸುರಿಸುತ್ತ ಬಾದಾಮಿ ತಾಲೂಕು ಮಂಗಳಗುಡ್ಡ ಗ್ರಾಮದ ರೈತ ದ್ಯಾವಪ್ಪ ಪೂಜಾರಿ. ದ್ಯಾವಪ್ಪಗ ಏಳು ಎಕರೆ ಭೂಮಿ ಇದೆ. ಪಕ್ಕದಲ್ಲೇ ಮಲಪ್ರಭಾ ನದಿ ಇದೆ. ಕೊಳವೆ ಬಾವಿಗೆ ಉತ್ತಮ ನೀರೂ ಇದೆ. ಆಗಸ್ಟ್ 6ರವರೆಗೂ ಬರಿದಾಗಿದ್ದ ಮಲಪ್ರಭಾ ನದಿಯಲ್ಲಿ ಬಸಿ ನೀರಿಗೂ ಕುಡುಕುವಂಗಾಗಿತ್ತು. ನದಿ ಪಕ್ಕದಲ್ಲೇ ಬೋರ್ ಹಾಕಿ, ಹೊಲಕ್ಕೆ ನೀರು ಬಿಡುತ್ತಿದ್ದೆವು. ಆದರೀಗ ನದಿಯೇ ತನ್ನ ಹೊಲ, ಮನೀಗೆ ಬಂದಿದೆ. ನದಿ ನೀರ ಮನೆಯೊಳಗೆ ಹೊಕ್ಕು ಬದುಕು ಬರ್ಬಾದ ಮಾಡಿದೆ. ಅಷ್ಟೇ ಅಲ್ಲ, ಹೊಲದಲ್ಲಿ ಬೆಳೆದ ಬೆಳೆ ನೆಲಹಾಸಿಗೆ ಮಾಡಿ ಹೋಗಿದೆ. ಈಗ ರೈತನಿಗೆ ದಿಕ್ಕು ತೋಚದಂಗಾಗೈತಿ ಎನ್ನುತ್ತಾನೆ ರೈತ ದ್ಯಾವಪ್ಪ.
Related Articles
Advertisement
ನಮ್ಮಲ್ಲಿ ಮಳೀ ಬರದಿದ್ರೂ ನದಿಯನ್ನೇ ನಂಬಿ ಬೆಳಿ ಬೆಳೀತಿದ್ವಿ. ಆಗಾಗ ನದಿಗೆ ಹರಿದು ಬರುತ್ತಿದ್ದ ನೀರನ್ನ ಬೆಳೀಗೆ ಬಿಡುತ್ತಿದ್ದೆವು. ಆದ್ರ ಈ ಸಲಾ ನಮ್ಮ ಹೊಲ, ಮನೀಗೆ ನದಿ ನೀರ್ ಬಂದೈತಿ. ಎಲ್ಲಾ ಕೊಚ್ಚಕೊಂಡ ಹೋಗೈತಿ. ಕಷ್ಟಪಟ್ಟು ಬೆಳೆದ ಬೆಳೀ ನೆಲಕ್ಕೆ ಮಲಗ್ಯಾವ. ನಮ್ಮ ಹೊಲದ ಸೀಮೀ ಗುರುತು ಸಿಗದಷ್ಟು ಒಡ್ಡು, ಮಣ್ಣು ಕೊಚ್ಚಕೊಂಡು ಹೋಗೈತಿ. ಏನು ಮಾಡುದೂ ತಿಳಿತೀಲ್ಲ. ಬೆಳೀ ಬೆಳ್ದ ಅನ್ನಾ ಕೊಡುವ ನಾವ ಈಗ, ತುತ್ತು ಅನ್ನಕ್ಕ ಪರಿಹಾರ ಕೇಂದ್ರದೊಳ್ಗ ಪಾಳೀಗಿ ನಿಂತೀವಿ.• ದ್ಯಾವಪ್ಪ ಪೂಜಾರಿ,
ಮಂಗಳಗುಡ್ಡ ರೈತ. ತರ್ಕಕ್ಕೂ ಸಿಗ್ತಿಲ್ಲ ಹಾನಿ ಮಾಹಿತಿ
ಮೂರೂ ನದಿಗಳ ಪ್ರವಾಹಕ್ಕೆ ಹಾನಿಯಾದ ಮಾಹಿತಿ ತರ್ಕಕ್ಕೂ ಸಿಗುತ್ತಿಲ್ಲ. ಘಟಪ್ರಭಾ ಮತ್ತು ಮಲಪ್ರಭಾ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿದ್ದು, ಕೃಷ್ಣೆಯ ಹರಿವು ಇನ್ನೂ ಯಥಾಸ್ಥಿತಿ ಇದೆ. ಭೂಮಿ, ಊರೊಳಗೆ ಹೊಕ್ಕ ನೀರು ಇಳಿದ ಮೇಲೆಯೇ ಹಾನಿಯ ಸರ್ವೇ ಮಾಡಲು ಸಾಧ್ಯ. ಮನೆಗಳು, ರಸ್ತೆ, ಬೆಳೆ ಹಾನಿ ಸಮಗ್ರ ಸಮೀಕ್ಷೆ ನಡೆಸಿ, ಪೂರ್ಣ ಹಾನಿಯ ಚಿತ್ರಣ ಸಿಗಲು ಇನ್ನೂ ಒಂದು ವಾರ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.