Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1913ರ ಫೆಬ್ರವರಿ 5ರಂದು ಲಿಂ| ವಿರುಪಾಕ್ಷಪ್ಪ ಭಾವಿ ಅವರ ನೇತೃತ್ವದಲ್ಲಿ ಆರಂಭಗೊಂಡ ಲಕ್ಷ್ಮೀ ಪತ್ತಿನ ಸಹಕಾರಿ ಸಂಘ, ಮುಂದೆ ಹಲವಾರು ಏಳು-ಬೀಳುಗಳ ಮಧ್ಯೆ ವ್ಯಾಪಾರಸ್ಥರು, ನೇಕಾರರು, ಕೃಷಿಕರಿಗೆ ಆರ್ಥಿಕ ಬಲ ನೀಡುತ್ತ ಸಾಗಿದೆ. ಮುಂದೆ 1996ರ ಸೆಪ್ಟಂಬರ್ 28ರಂದು ಭಾರತೀಯ ರಿಜರ್ವ್ ಬ್ಯಾಂಕ್‌ನಿಂದ ಬ್ಯಾಂಕಿಂಗ್ ಲೈಸನ್ಸ್ ಹೊಂದಿತು ಎಂದು ವಿವರಿಸಿದರು.
Related Articles
Advertisement
ಶತಮಾನೋತ್ಸವ ಸಂಭ್ರಮ: 1913ರಲ್ಲಿ ಸಣ್ಣ ಆರ್ಥಿಕ ಸಂಸ್ಥೆಯಾಗಿ ಆರಂಭಗೊಂಡ ಲಕ್ಷ್ಮೀ ಸಹಕಾರಿ ಬ್ಯಾಂಕ್ ಅನೇಕ ಕಷ್ಟ-ನಷ್ಟ ಎದುರಿಸಿ ಜನರಿಗೆ ಸಮರ್ಪಣಾ ಭಾವನೆಯಿಂದ ಕೆಲಸ ಮಾಡುತ್ತಿದೆ. ಜ.13ಮತ್ತು 14ರಂದು ಎರಡು ದಿನಗಳ ಕಾಲ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಜ.13ರಂದು ಬೆಳಗ್ಗೆ 10ಕ್ಕೆ ಗುಳೇದಗುಡ್ಡದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶತಮಾನೋತ್ಸವ ಕಟ್ಟಡವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಉದ್ಘಾಟಿಸುವರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶತಮಾನೋತ್ಸವ ನಾಮಫಲಕ, ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಪ್ರಧಾನ ಕಚೇರಿ ಶಾಖೆ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೇಫ್ ಲಾಕರ್, ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಆಡಳಿತ ಕಚೇರಿ ಉದ್ಘಾಟಿಸುವರು. ಇದೇ ವೇಳೆ ಬ್ಯಾಂಕ್‌ನ ಸಭಾಂಗಣಕ್ಕೆ ಮಾಜಿ ಪ್ರಧಾನಿ-ಭಾರತರತ್ನ ಅಟಲ್‌ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದು, ಅದನ್ನು ಮಾಜಿ ಸಿಎಂ ಜಗದೀಶ ಶೆಟ್ಟರ ಉದ್ಘಾಟಿಸುವರು ಎಂದರು.
ಸೈನಿಕರಿಗೆ ಸನ್ಮಾನ: ಜ.13ರಂದು ಸಂಜೆ 5ಕ್ಕೆ ಸ್ಥಳೀಯ ಕಲಾವಿದರಿಂದ ಕಲಾ ಪ್ರದರ್ಶನ, ಖ್ಯಾತ ಗಾಯಕರಾದ ಡಾ| ಶಮಿತಾ ಮಲ್ನಾಡ ಮತ್ತು ರಾಜೇಶ ಕೃಷ್ಣನ್ ಅವರಿಂದ ದೇಶಭಕ್ತಿ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೇನಾಧಿಕಾರಿಗಳಿಗೆ, ವೀರಯೋಧರ ಕುಟುಂಬದವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸಾಧಕರ ಸನ್ಮಾನ: ಜ.14ರಂದು ಬೆಳಗ್ಗೆ 11ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಿಎಂ-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡುವರು. ಶಿವಯೋಗ ಮಂದಿರ ಅಧ್ಯಕ್ಷ ಡಾ| ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಜಿಲ್ಲೆಯ ಹಾಗೂ ನಾಡಿನ ವಿವಿಧ ಭಾಗದ ಗಣ್ಯರು ಭಾಗವಹಿಸುವರು. ಅಂದು ಕೃಷಿ, ನೇಕಾರಿಕೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಅದೇ ದಿನ ಸಂಜೆ 7ಕ್ಕೆ ಡಾ| ಶಮಿತಾ ಮಲ್ನಾಡ ಮತ್ತು ರಾಜೇಶ ಕೃಷ್ಣನ್ ತಂಡದಿಂದ ಚಲನಚಿತ್ರ ವೈಭವ ಕಾರ್ಯಕ್ರಮ ನಡೆಯಲಿದೆ ಎಂದರು.
ಬಸವೇಶ್ವರ-ರಕ್ತರಾತ್ರಿ ಪ್ರದರ್ಶನ: ಬ್ಯಾಂಕಿನ ಶತಮಾನೋತ್ಸವ ಅಂಗವಾಗಿ ಜ.9ರಂದು ರಾತ್ರಿ ಭಂಡಾರಿ ಕಾಲೇಜು ಮೈದಾನದಲ್ಲಿ ಲಿಂ| ಮಹಾದೇವ ಬಣಕಾರ ವಿರಚಿತ ಕುಂದಗೋಳದ ವಿಶ್ವಭಾರತಿ ರಮ್ಯ ನಾಟಕ ಸಂಘದಿಂದ ಜಗಜ್ಯೋತಿ ಬಸವೇಶ್ವರ ನಾಟಕ (ಬಸವರಾಜ ಬೆಂಗೇರಿ ಅವರು ಬಸವಣ್ಣನ ಪಾತ್ರದಲ್ಲಿ) ಪ್ರದರ್ಶನಗೊಳ್ಳಲಿದೆ. ಜ.10ರಂದು ರಾತ್ರಿ ದಿ.ಕಂದಗಲ್ಲ ಹನಮಂತರಾಯ ವಿರಚಿತ ಗುಳೇದಗುಡ್ಡದ ಆದಿಶಕ್ತಿ ಅರವಿಂದ ಕೃಪಾಪೋಷಿತ ನಾಟಕ ಸಂಘದಿಂದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಶತಮಾನೋತ್ಸವ ಆಚರಣೆಯ ಸ್ವಾಗತ ಸಮಿತಿ ಅಧ್ಯಕ್ಷ ಸಂಪತಕುಮಾರ ರಾಠಿ, ಕುಮಾರ ಜಿಗಜಿನ್ನಿ, ವಿಷ್ಣು ಬಡಗೇರ, ಸುಭಾಸ ಕೊಠಾರಿ, ಎಸ್.ಕೆ. ಕುಲಕರ್ಣಿ ಉಪಸ್ಥಿತರಿದ್ದರು.