Advertisement

ವೇತನ ನೀಡಲು ಆಗ್ರಹಿಸಿ ಪ್ರತಿಭಟನೆ

01:05 PM Jul 11, 2019 | Naveen |

ಬಾಗಲಕೋಟೆ: ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯಾದ್ಯಂತ ಇರುವ ಅಂಗನವಾಡಿ ಕೇಂದ್ರ ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಸಹಸ್ರಾರು ಜನರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಸರ್ಕಾರ ತಕ್ಷಣ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಹನಮಕ್ಕ ದಾಸರ ಮಾತನಾಡಿ, ಕಳೆದ ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ವೇತನ ಕೊಟ್ಟಿಲ್ಲ. ಇದರಿಂದ ನಾವೆಲ್ಲ ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಕೂಡಲೇ ಮೂರು ತಿಂಗಳ ವೇತನ ಬಿಡುಗಡೆ ಮಾಡುವ ಜತೆಗೆ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿಯಲ್ಲೇ ಎಲ್ಕೆಜಿ-ಯುಕೆಜಿ ಆರಂಭಿಸಿ: ಸರ್ಕಾರ, ಪ್ರಾಥಮಿಕ ಶಾಲೆಯಗಳಲ್ಲಿ ಪೂರ್ವ ಪ್ರಾಥಮಿಕ (ಆಂಗ್ಲ) ಶಾಲೆಗಳ ತರಗತಿ ಆರಂಭಿಸಿದೆ. ಎಲ್ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸುವ ಜತೆಗೆ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. ನಾವು ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡಲು ಸಿದ್ಧರಿದ್ದೇವೆ ಎಂದರು.

ಬಾಡಿಗೆ ಕಟ್ಟಡದಲ್ಲಿ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಕಳೆದ 10 ತಿಂಗಳಿಂದ ಬಾಡಿಗೆ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಬಾಡಿಗೆ ಹಣ ಬಿಡುಗಡೆ ಮಾಡಬೇಕು. ಅಂಗನವಾಡಿ ಕೇಂದ್ರ ಹಾಗೂ ಮಾತೃಪೂರ್ಣ ಯೋಜನೆಯಡಿ ನೀಡುವ ಆಹಾರಧಾನ್ಯ ಕಳಪೆ ಮಟ್ಟದ್ದಾಗಿದ್ದು, ನಿಗದಿತ ಸಮಯಕ್ಕೆ ವಿತರಣೆ ಮಾಡುತ್ತಿಲ್ಲ. ಇದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಊಟ ನೀಡಲು ತೊಂದರೆಯಾಗುತ್ತಿದೆ. ಸಧ್ಯ ಎರಡು ತಿಂಗಳಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರಧಾನ್ಯಗಳೇ ನೀಡಿಲ್ಲ. ಕೇಂದ್ರಗಳಲ್ಲಿ ಅಡುಗೆ ತಯಾರಿಸಲು ವರ್ಷಕ್ಕೆ ನಾಲ್ಕು ಅಡುಗೆ ಅನಿಲ ನೀಡುತ್ತಿದ್ದು, ಇವು ಸಾಕಾಗುತ್ತಿಲ್ಲ. ವರ್ಷಕ್ಕೆ ಕನಿಷ್ಠ 8 ಗ್ಯಾಸ್‌ ನೀಡಬೇಕು. ಸಿಡಿಪಿಒ ಕಚೇರಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ತಕ್ಷಣ ಮಾಡಬೇಕು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ನೀಡಬೇಕು. ಯಾವ ಕೇಂದ್ರಗಳಲ್ಲಿ 10 ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿದ್ದಾರೋ ಅವರನ್ನು ಬೇರೆಡೆ ವರ್ಗ ಮಾಡಬೇಕು. ಹೆಚ್ಚು ವರ್ಷ ಒಂದೇ ಕಡೆ ಸೇವೆ ಸಲ್ಲಿಸುವ ಕಾರ್ಯಕರ್ತೆಯರ ಮೇಲೆ ದಬ್ಟಾಳಿಕೆ ನಡೆದಿದೆ ಎಂದು ಆರೋಪಿಸಿದರು.

Advertisement

ಸಂಘಟನಾ ಕಾರ್ಯದರ್ಶಿ ರೇಣುಕಾ ಪೂಜಾರಿ, ಪ್ರಮುಖರಾದ ಮಂಗಳಾ ಗಾಳಪೂಜಿಮಠ, ಮಂಜುಳಾ ಪಾಟೀಲ, ಶಾಂತಾ ಬಡಿಗೇರ, ಎಸ್‌. ಮೇಟಿ, ಕಾಮರಡ್ಡಿ, ರುಕ್ಷ್ಮಿಣಿ ಬಡಿಗೇರ, ಕಡಪಟ್ಟಿ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next