Advertisement
ಹೌದು, ಕೇಂದ್ರ ಸರ್ಕಾರ ಕಳೆದ 2014ರ ಜನವರಿಯಿಂದ ಇಡೀ ದೇಶಕ್ಕೆ ಅನ್ವಯವಾಗುವಂತೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದೆ. ಇಡೀ ದೇಶದಲ್ಲೇ ಈ ಹೊಸ ತಿದ್ದುಪಡಿ ಕಾನೂನು ಪ್ರಥಮ ಬಾರಿಗೆ ಅನ್ವಯವಾಗಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಗೆ. ಹೊಸ ಕಾಯ್ದೆಯಡಿಯೇ ಭೂಮಿ ಮತ್ತು ಮುಳುಗಡೆ ವ್ಯಾಪ್ತಿಯ ಕಟ್ಟಡಗಳ ಸ್ವಾಧೀನ ಪಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಹೊಸ ಕಾನೂನಿನ ಅಂಶಗಳಡಿ ಪುನರ್‌ವಸತಿ, ಪುನರ್ ನಿರ್ಮಾಣದ ಸೌಲಭ್ಯ ಸಂತ್ರಸ್ತರಿಗೆ ದೊರೆಯುತ್ತಿಲ್ಲ. ಈ ವಿಷಯದಲ್ಲಿ ಬಿಟಿಡಿಎ ಹೊಸ ಭೂಸ್ವಾಧೀನ ಕಾಯ್ದೆಯ ಅಂಶಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಎಕರೆ ಭೂಮಿ ನೀಡಿದ ರೈತರಿಗೆ ಹಾಗೂ ಸ್ವಾಧೀನಗೊಂಡ ಕಟ್ಟಡ ಮಾಲೀಕರಿಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲಾಗಿದೆ. ಕಟ್ಟಡ ಮಾಲೀಕರಿಗೆ ಕೇವಲ ಪರಿಹಾರ ನೀಡಲಾಗಿದೆ ಹೊರತು, ಇನ್ನುಳಿದ ಪುನರ್‌ವಸತಿ, ಪುನರ್‌ನಿರ್ಮಾಣ ಸೌಲಭ್ಯ ಈ ವರೆಗೆ ಕಲ್ಪಿಸಿಲ್ಲ. ಹೊಸ ಕಾಯ್ದೆ ಸೌಲಭ್ಯಗಳೇನು?: ಹಳೆಯ ಕಾನೂನಿನಡಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರೂ ಹೊಸ ಕಾಯ್ದೆಯ ಸೆಕ್ಟನ್ 24ರಡಿ ಹೊಸ ಕಾನೂನಿಗೆ ಅದನ್ನು ಅನ್ವಯಿಸಬೇಕು. ಯಾವುದೇ ಭೂಮಿ ಅಥವಾ ಕಟ್ಟಡ ಸ್ವಾಧೀನದ ಐತೀರ್ಪು ಹೊರಡಿಸಿದ ಮೂರು ತಿಂಗಳೊಳಗಾಗಿ ಪರಿಹಾರ ಧನ ನೀಡಲೇಬೇಕು. ಅಲ್ಲದೇ ಆರು ತಿಂಗಳ ಒಳಗಾಗಿ ಪುನರ್‌ವಸತಿ ಮತ್ತು ಪುನರ್ ನಿರ್ಮಾಣದ ಹಣಕಾಸಿನ ಆರ್ ಆ್ಯಂಡ್ ಆರ್ ಅರ್ಹತೆ ಕಲ್ಪಿಸಬೇಕು ಎಂಬುದನ್ನು ಹೊಸ ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ.
Related Articles
Advertisement
ಪರಿಹಾರಧನವೇ ಖಾಲಿ: 2421 ಕಟ್ಟಡ ಮಾಲೀಕರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, 3ನೇ ಯೂನಿಟ್ ಸಿದ್ಧಪಡಿಸಿ ಅವರಿಗೆ ನಿವೇಶನ ನೀಡಿಲ್ಲ. ಹೀಗಾಗಿ ಪರಿಹಾರ ಪಡೆದ ಸಂತ್ರಸ್ತರು ವಿವಿಧ ಅನಿವಾರ್ಯತೆಗಾಗಿ ಪರಿಹಾರಧನ ಖರ್ಚು ಮಾಡಿಕೊಂಡಿದ್ದಾರೆ. ಕಾನೂನು ಪ್ರಕಾರ, ಅಧಿಸೂಚನೆ ಹೊರಡಿಸಿದ 18 ತಿಂಗಳಲ್ಲೇ ನಿವೇಶನಸಹಿತ ಪುನರ್‌ವಸತಿ ಹಾಗೂ ಪುನರ್ ನಿರ್ಮಾಣದ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂಬ ಕಾನೂನಿದ್ದರೂ ಪಾಲನೆಯಾಗಿಲ್ಲ. ಪರಿಹಾರಧನ ಖರ್ಚು ಮಾಡಿಕೊಂಡ ಭೂ ಮಾಲೀಕರು, ಪುನಃ ಮನೆ ನಿರ್ಮಾಣಕ್ಕಾಗಿ ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಹೊಸ ಕಾಯ್ದೆ ಅನ್ವಯಕ್ಕೆ ಕಾನೂನು ವಿಭಾಗಕ್ಕೆ: ಹೊಸ ಭೂಸ್ವಾಧೀನ ಕಾಯಿದೆಯಡಿ ಪುನರ್‌ವಸತಿ, ಪುನರ್ ನಿರ್ಮಾಣ ಸೌಲಭ್ಯ ಅನ್ವಯಿಸಲು ಒತ್ತಾಯಿಸಿ ನಗರದ 523 ಮೀಟರ್‌ನಿಂದ 525 ಮೀಟರ್ ವ್ಯಾಪ್ತಿಯ ಕಟ್ಟಡ ಮಾಲೀಕರೊಬ್ಬರು ಎಸ್‌ಎಲ್‌ಒಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಬಿಟಿಡಿಎ ಕಾನೂನು ಸಲಹೆಗಾರರು, ಅವರಿಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ದೊರೆಯುವ ಸೌಲಭ್ಯ ಕೊಡಲೇಬೇಕೆಂದು ವರದಿ ನೀಡಿದ್ದಾರೆ. ಹೀಗಾಗಿ ಈ ಪ್ರಸ್ತಾವನೆ ಸದ್ಯ ಎಸ್‌ಎಲ್‌ಒ ಕಚೇರಿಯಿಂದ ಆರ್.ಒ ಕಚೇರಿಗೆ ಹೋಗಿದ್ದು, ಶೀಘ್ರವೇ ಅನ್ವಯವಾಗುವ ಹಂತದಲ್ಲಿದೆ. ಇದೇ ಮಾದರಿ, 2421 ಕಟ್ಟಡ ಮಾಲಿಕರಿಗೂ ಅನ್ವಯವಾಗುತ್ತದೆ. ಆದರೆ, ಇದಕ್ಕೆ ಕಟ್ಟಡ ಮಾಲೀಕರೂ ಜಾಗೃತರಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಟ್ಟಡ ಮಾಲೀಕರಿಗೆ ಹೊಸ ಕಾಯ್ದೆಯಡಿ ಪರಿಹಾರದ ಜತೆಗೆ ಪುನರ್‌ವಸತಿ, ಪುನರ್ ನಿರ್ಮಾಣದ ಭತ್ಯೆ, ಸೌಲಭ್ಯ ದೊರೆಯುತ್ತವೆ. ಹೊಸ ಕಾಯಿದೆಯಡಿ ಪರಿಹಾರ ನೀಡಿದರೂ ಈ ಸೌಲಭ್ಯಗಳನ್ನು ಸಂತ್ರಸ್ತರಿಗೆ ಅನ್ವಯಿಸುತ್ತಿಲ್ಲ. ಅಲ್ಲದೇ ಯೂನಿಟ್-3ರ ನಕ್ಷೆಯೇ ನಗರ ಯೋಜನೆ ಪ್ರಾಧಿಕಾರದಿಂದ ಅನುಮೋದನೆ ಆಗಿಲ್ಲ. ಹೀಗಾಗಿ ಲೇಔಟ್ ಅಭಿವೃದ್ಧಿಪಡಿಸಲೂ ಆಗಿಲ್ಲ. ಸಂತ್ರಸ್ತರಿಗೆ ಪರಿಹಾರ ಧನ ನೀಡಿ ವರ್ಷವೇ ಕಳೆದಿದ್ದು, ಕೂಡಲೇ ನಿವೇಶನ ಹಂಚಿಕೆ ಮಾಡುವ ಜತೆಗೆ ಹೊಸ ಕಾಯ್ದೆಯಡಿ ನೀಡಬೇಕಾದ ಎಲ್ಲ ಸೌಲಭ್ಯ ನೀಡಬೇಕು.ವೆಂಕಟಾಚಲಪತಿ ಬಳ್ಳಾರಿ, ಕಾರ್ಯದರ್ಶಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಹೋರಾಟ ಸಮಿತಿ 523ರಿಂದ 525 ಮೀಟರ್ ವರೆಗಿನ ಕೆಲವು ಕಟ್ಟಡಗಳು ಹಳೆಯ ಮತ್ತು ಇನ್ನೂ ಕೆಲವು ಹೊಸ ಕಾಯಿದೆಯಡಿ ಸ್ವಾಧೀನಗೊಂಡಿವೆ. ಹಲವರು ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಹೊಸ ಕಾಯ್ದೆಯಡಿ ಸಂತ್ರಸ್ತರಿಗೆ ಪುನರ್ ವಸತಿ ಮತ್ತು ಪುನರ್‌ನಿರ್ಮಾಣ ಸೌಲಭ್ಯಗಳು ಅನ್ವಯವಾಗಿರುವ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಲಾಗುವುದು.
ಎಂ. ಗಂಗಪ್ಪ,
ವಿಶೇಷ ಭೂಸ್ವಾಧೀನಾಧಿಕಾರಿ, ಬಿಟಿಡಿಎ ಎಸ್.ಕೆ. ಬಿರಾದಾರ