Advertisement

ಅಂಗನವಾಡಿ ಮಕ್ಕಳು-ಗರ್ಭಿಣಿಯರಿಗೆ ಶೇಂಗಾ ಉಂಡೆ!

12:25 PM Jun 05, 2019 | Naveen |

ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ:
ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಕೊಡುವ ಉದ್ದೇಶದಿಂದ ಪ್ರತಿದಿನ ಊಟದ ಜತೆಗೆ ಶೇಂಗಾ ಉಂಡೆ ಕೊಡಲು ಜಿಪಂ ಮುಂದಾಗಿದೆ.

Advertisement

ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಊಟ, ಬಾಣಂತಿಯರಿಗೆ ಮಧ್ಯಾಹ್ನ ಬಿಸಿಯೂಟ ಹಾಗೂ ಗರ್ಭಿಣಿಯರಿಗೆ ಮೊಟ್ಟೆ ಸಹಿತ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮ ಹಾಗೂ ರುಚಿಕಟ್ಟಾಗಿರಲು ಈವರೆಗೆ ಪ್ರತ್ಯೇಕವಾಗಿ ಶೇಂಗಾ ಮತ್ತು ಬೆಲ್ಲವನ್ನು ಮಿಶ್ರಣಗೊಳಿಸಿ, ಗುಣಮಟ್ಟದ ಶೇಂಗಾ ಉಂಡೆ ಕೊಡಲು ಗಂಭೀರ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಕೆಲವು ಪ್ರಕ್ರಿಯೆ ಪೂರ್ಣಗೊಂಡಿವೆ ಎನ್ನಲಾಗಿದೆ. ಜಿಲ್ಲೆಯಲ್ಲಿ 2,221 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 6 ತಿಂಗಳಿಂದ 6 ವರ್ಷದೊಳಗಿನ ಒಟ್ಟು 1,74,480 ಮಕ್ಕಳು ದಾಖಲಾಗಿವೆ. ಅಲ್ಲದೇ 20,166 ಗರ್ಭಿಣಿಯರು, 19,508 ಬಾಣಂತಿಯರು ಪೌಷ್ಟಿಕ ಆಹಾರದ ಪ್ರಯೋಜನೆ ಪಡೆಯುತ್ತಿದ್ದಾರೆ. ಇವರೆಲ್ಲರಿಗೂ ಊಟದ ಜತೆಗೆ ಶೇಂಗಾ ಉಂಡೆ ಕೊಡುವುದು ಜಿಪಂನ ಉದ್ದೇಶವಾಗಿದೆ.

ಸ್ತ್ರೀಶಕ್ತಿ ಸಂಘಗಳಿಗೆ ಹೊಣೆ ?: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಶೇಂಗಾ ಉಂಡೆ ಕೊಡುವ ಹೊಣೆಯನ್ನು ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳಿಗೆ ವಹಿಸಲು ಜಿಪಂ ಮುಂದಾಗಿದೆ. ಇದು ಕೆಲವರ ಕೆಂಗಣ್ಣಿಗೆ ಗುರಿಯಾದರೆ, ಸ್ತ್ರೀಶಕ್ತಿ ಸಂಘಗಳಿಗೆ ಒಂದು ಉದ್ಯೋಗ ಕೊಟ್ಟಂತಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ. ಜಿಲ್ಲೆಯ ಒಟ್ಟು 2221 ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಶೇಂಗಾ ಉಂಡೆ ಕೊಡಲು ಜಿಲ್ಲೆಯ 20 ಸ್ತ್ರೀಶಕ್ತಿ ಸ್ವಸಹಾಯ ಸಂಘ ಗುರುತಿಸಲಾಗಿದೆ. ಆ ಸಂಘಗಳಿಂದ ಈಗಾಗಲೇ ಶೇಂಗಾ ಉಂಡೆಗಳ ಸ್ಯಾಂಪಲ್ ಪಡೆದಿದ್ದು, ಅವುಗಳ ಗುಣಮಟ್ಟ ಪರಿಶೀಲನೆಗೆ ಬೆಳಗಾವಿಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಶೇಂಗಾ ಉಂಡೆ ವಿತರಿಸುವ ಮಹತ್ವದ ಕಾರ್ಯ ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಊಟದ ಜತೆಗೆ ಶೇಂಗಾ ಉಂಡೆ ಕೊಡಲು ಜಿಪಂ ಸಿಇಒ ನೇತೃತ್ವದ ಸಭೆಯಲ್ಲಿ ಚರ್ಚೆಯಾಗಿದೆ. ಶೀಘ್ರವೇ ಸಿಇಒ ನಿರ್ದೇಶನ ಮತ್ತು ನಿರ್ಧಾರದೊಂದಿಗೆ ಅದು ಜಾರಿಯಾಗಲಿದೆ.
• ಅಶೋಕ ಬಸಣ್ಣನವರ,
ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಅಂಗನವಾಡಿ ಕೇಂದ್ರಗಳ ಮೂಲಕ ಶೇಂಗಾ ಉಂಡೆ ನೀಡಲು ಜಿಲ್ಲೆಯಾದ್ಯಂತ ಕೇವಲ 20 ಸ್ತ್ರಿಶಕ್ತಿ ಸಂಘಗಳನ್ನು ಆಯ್ಕೆ ಮಾಡಲಾಗಿದೆ. 2221 ಅಂಗನವಾಡಿ ಕೇಂದ್ರಗಳಿಗೂ ಕೇವಲ 20 ಸಂಘ ಗುರುತಿಸಿರುವುದು ಸರಿಯಲ್ಲ. ಅಧಿಕಾರಿಗಳು ತಮಗೆ ಬೇಕಾದವರ ಸಂಘದ ಹೆಸರನ್ನು ಶಿಫಾರಸು ಮಾಡಿದ್ದಾರೆ. ಪ್ರಾಮಾಣಿಕ ಕೆಲಸ ಮಾಡುವ, ಎಲ್ಲ ವರ್ಗಗಳ ಸ್ತ್ರೀಶಕ್ತಿ ಸಂಘಗಳಿಗೆ ಹೊಣೆಗಾರಿಕೆ ಕೊಡಬೇಕು.
ಹೆಸರು ಬಹಿರಂಗಪಡಿಸಲಿಚ್ಛಿಸದ ಗುಳೇದಗುಡ್ಡದ ಸ್ತ್ರೀಶಕ್ತಿ ಶಕ್ತಿ ಸಂಘದ ಪದಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next