ಬಾಗಲಕೋಟೆ: ಕೊರೊನಾ 2ನೇ ಅಲೆ ದಿನೇ ದಿನೇ ಹೆಚ್ಚುತ್ತಿದ್ದು, ಹಲವರಿಗೆ ಹಲವು ರೀತಿಯ ಸಮಸ್ಯೆ ತಂದೊಡ್ಡುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಗರದ ಸಮಾನ ಮನಸ್ಕರ ಗೆಳೆಯರು ಕೂಡಿಕೊಂಡು, ಕಾಮಧೇನು ಸಂಸ್ಥೆಯ ಮೂಲಕ ಸಂಕಷ್ಟದಲ್ಲಿರುವ ಜನರ ಬಳಿಗೆ ಹೋಗಿ ಊಟದ ಪೊಟ್ಟಣ ನೀಡುವ ಸೇವಾ ಕಾರ್ಯ ಮಾಡುತ್ತಿದ್ದಾರೆ.
ಹೌದು, ನಗರದಲ್ಲಿ ಕೊರೊನಾ 2ನೇ ಅಲೆಯಿಂದ ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೇ ಪ್ರತಿಯೊಬ್ಬರೂ ಒಂದೊಂದು ರೀತಿ ಸಂಕಷ್ಟ ಎದುರಿಸುತ್ತಿದ್ದಾರೆ. ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರೊಂದಿಗೆ ಬಂದಿರುವ ಸಂಬಂಧಿಕರು, ಮಿತ್ರರು, ಆಸ್ಪತ್ರೆಯ ಹೊರಗೆ ಊಟ, ನೀರು ಸಿಗದೇ ಪರದಾಡುವಂತಹ ಪರಿಸ್ಥಿತಿ ಇದೆ. ಅಂತಹ ಸಂಕಷ್ಟದಲ್ಲಿ ಇರುವ ಜನರಿಗೆ ಊಟ, ನೀರು ಒದಗಿಸುವ ನಿಟ್ಟಿನಲ್ಲಿ ಬಾಗಲಕೋಟೆ ನಗರದ ಗೆಳೆಯರ ತಂಡ, ಗುರುವಾರದಿಂದ ಅನ್ನ-ಆಹಾರ ನೀಡುವ ಔದಾರ್ಯದ ಕಾರ್ಯ ನಡೆಸಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲ ದಿನವೇ 260 ಜನರಿಗೆ ನೆರವು: ನಗರ, ನವನಗರ, ವಿದ್ಯಾಗಿರಿ ಮುಂತಾದೆಡೆ ರಸ್ತೆ ಬದಿಯಲ್ಲಿರುವ ನಿರ್ಗತಿಕರು, ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಎದುರು ಇರುವ ಸೋಂಕಿತರ ಸಂಬಂಧಿಕರು, ಬಸ್ ನಿಲ್ದಾಣ ಮುಂತಾದೆಡೆ ನೀರು, ಅನ್ನಕ್ಕಾಗಿ ಪರದಾಡುವಂತಹ ಜನರನ್ನು ಹುಡುಕಿ, ಅವರಿದ್ದಲ್ಲಿಗೆ ಹೋಗಿ ಊಟದ ಪೊಟ್ಟಣ, ನೀರು ಪೂರೈಕೆ ಕಾರ್ಯ ಗುರುವಾರದಿಂದ ಆರಂಭಗೊಂಡಿದೆ. ಕಾಮಧೇನು ಸಂಸ್ಥೆಯ ಮೂಲಕ ಈ ಕಾರ್ಯ ನಡೆದಿದ್ದು, ಕೊರೊನಾ ಕರ್ಫ್ಯೂ ವೇಳೆ ಸಂಕಷ್ಟದಲ್ಲಿರುವ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಈ ಸೇವಾ ಕಾರ್ಯ ಆರಂಭವಾದ ಮೊದಲ ದಿನವೇ 260ಕ್ಕೂ ಹೆಚ್ಚು ಜನರಿಗೆ ಊಟ, ನೀರು ತಲುಪಿಸಿದ್ದು, ಸೇವಾ ಕಾರ್ಯದಲ್ಲಿ ತೊಡಗಿರುವವರಿಗೂ ಒಂದು ರೀತಿಯ ಸೇವೆಯ ನೆಮ್ಮದಿ. ಗುರುವಾರ ಬೆಳಗ್ಗೆ ಈ ಸೇವಾ ಕಾರ್ಯಕ್ಕೆ ಗ್ರೇಡ್ -2 ತಹಶೀಲ್ದಾರ್ ಭಜಂತ್ರಿ ಚಾಲನೆ ನೀಡುವ ಜತೆಗೆ ಸಮಾನ ಮನಸ್ಕರ ಗೆಳೆಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಕಷ್ಟದಲ್ಲಿದ್ದರೆ ಸಂಪರ್ಕಿಸಿ: ಮನೆಯಲ್ಲಿ ಐಸೋಲೇಶನ್ ಆಗಿರುವವರು, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಹೊರಗೆ ಊಟ, ನೀರು ಸಿಗದೇ ಕಷ್ಟ ಎದುರಿಸುತ್ತಿರುವವರು ಸೇರಿದಂತೆ ಊಟ, ನೀರು ಸಿಗದೇ ಸಂಕಷ್ಟದಲ್ಲಿದ್ದರೆ, ಅಂತಹ ಜನರು ನಮ್ಮನ್ನು ಸಂಪರ್ಕಿಸಿ, ನೀವಿದ್ದಲ್ಲಿಗೆ ಆಹಾರ, ನೀರು ತಲುಪಿಸುವ ಕಾರ್ಯ ಮಾಡುತ್ತೇವೆ ಎಂಬುದು ಕಾಮಧೇನು ಸಂಸ್ಥೆಯ ಗೆಳೆಯರ ಆತ್ಮವಿಶ್ವಾಸದ ಮಾತು. ನಗರದ ಸಮಾನ ಮನಸ್ಕರರಾದ ವಿಜಯ ಸುಲಾಖೆ- 9972372344, ಅಶೋಕ ಮುತ್ತಿನಮಠ- 9880663690, ರವಿ ಕುಮಟಗಿ- 9845705979, ಶಿವು ಮೆಲಾ°ಡ- 9448021734, ಸಂತೋಷ ಹೊಕ್ರಾಣಿ- 7338234113, ಬಸವರಾಜ ಕಟಗೇರಿ- 9902852217 ಅವರನ್ನು ಸಂಪರ್ಕಿಸಲು ಕಾಮಧೇನು ಸಂಸ್ಥೆಯ ಗೆಳೆಯರು ಕೋರಿದ್ದಾರೆ.