ವರದಿ: ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕೊರೊನಾ 2ನೇ ಅಲೆಯ ಲಾಕ್‌ಡೌನ್ ಬಳಿಕ ಜಿಪಂ, ತಾಪಂ ಚುನಾವಣೆಯ ಕಾವು ಮತ್ತೆ ಗರಿಗೆದರಿದ್ದು, ರಾಜಕೀಯ ಪಕ್ಷಗಳು ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿವೆ.
ಹೌದು, ಈ ಮೊದಲು 36 ಇದ್ದ ಜಿಪಂ ಕ್ಷೇತ್ರಗಳು, ಇದೀಗ 40ಕ್ಕೆ ಏರಿಕೆಯಾಗಿವೆ. ಅಲ್ಲದೇ 130 ಇದ್ದ ತಾಪಂ ಕ್ಷೇತ್ರಗಳು, ಈ ಬಾರಿ 110ಕ್ಕೆ ಇಳಿಕೆಯಾಗಿವೆ. ಕಳೆದ ಮಾರ್ಚ್‌ನಲ್ಲಿಯೇ ಹಾಲಿ ಇದ್ದ ಜಿಪಂ ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯಬೇಕಿತ್ತು. ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿತ್ತಾದರೂ ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು.
ರಾಜಕೀಯ ಚಟುವಟಿಕೆ ಶುರು: ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಜಿಪಂ, ತಾಪಂ ಚುನಾವಣೆ ನಡೆಸಲು ಸರ್ಕಾರ ಇದೀಗ ಮುಂದಾಗಿದ್ದು, ಇತ್ತ ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆ ಶುರು ಮಾಡಿವೆ. ಎರಡು ದಿನಗಳ ಹಿಂದೆ ನಡೆದ ಆಡಳಿತಾರೂಢ ಬಿಜೆಪಿ ಪಕ್ಷದ ಪ್ರಮುಖ ಸಭೆಯಲ್ಲಿ ತನ್ನ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಈ ಕುರಿತು ನಿರ್ದೇಶನ ಕೂಡ ನೀಡಿದೆ. ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ ಎಂಬ ಸಂದೇಶವನ್ನು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ನೀಡಿದ್ದಾರೆ. ಬೆನ್ನಲ್ಲೆ ಕಾಂಗ್ರೆಸ್ ಪಕ್ಷವೂ ಚುನಾವಣೆಗೆ ತಯಾರಿ ಮಾಡಿಕೊಳ್ಳಲಾರಂಭಿಸಿದೆ.
40 ಕ್ಷೇತ್ರಗಳ ಉದಯ: ಜಿಲ್ಲೆಯಲ್ಲಿ ಈ ಮೊದಲು 36 ಕ್ಷೇತ್ರಗಳಿರುವುದು, ಇದೀಗ ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆಯ ಬಳಿಕ 40ಕ್ಕೆ ಏರಿಕೆಯಾಗಿವೆ. ಅಲ್ಲದೇ ಸರ್ಕಾರ ಕೂಡ, ಜಿಪಂ ಕ್ಷೇತ್ರಗಳಿಗೆ ಸಂಖ್ಯಾವಾರು ಮೀಸಲಾತಿ ಪಟ್ಟಿಯನ್ನು ನಿಗದಿ ಮಾಡಿದೆ. ಆದರೆ, ಮತಕ್ಷೇತ್ರವಾರು ಮೀಸಲಾತಿ ಇನ್ನೂ ನಿಗದಿಯಾಗಿಲ್ಲ. ಎಸ್‌ಸಿ, ಎಸ್.ಟಿ, ಸಾಮಾನ್ಯ, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ ವರ್ಗಕ್ಕೆ ನಿಯಮಾವಳಿ ಪ್ರಕಾರ ಮೀಸಲಾತಿ ಸಂಖ್ಯೆ ನಿಗದಿಯಾಗಿವೆ. ಮತಕ್ಷೇತ್ರವಾರು ಮೀಸಲಾತಿ ನಿಗದಿಗಾಗಿ ಆಡಳಿತಾರೂಢ ಬಿಜೆಪಿ ಕೂಡ ರಾಜಕೀಯ ತಂತ್ರಗಾರಿಕೆ ಮೆರೆಯಲು ಮುಂದಾಗಿದೆ ಎಂಬ ಮಾತು ಕೇಳಿ ಬಂದಿದೆ.
ಹಲವರ ತಯಾರಿ: ಜಿಪಂ ಹಾಲಿ ಸದಸ್ಯರೂ ಸೇರಿದಂತೆ ಹಲವು ಯುವ ಸಮೂಹ ಜಿಪಂ, ತಾಪಂ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಲಿ ಸದಸ್ಯರೂ ಮತ್ತೂಂದು ಬಾರಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ. ಜಿಪಂ ಮಾಜಿ ಅಧ್ಯಕ್ಷರಾಗಿರುವ ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ ಅವರು ಇದೊಂದು ಬಾರಿ ಸ್ಪರ್ಧೆಗೆ ಆಸಕ್ತಿ ವಹಿಸಿದ್ದಾರಾದರೂ ಕ್ಷೇತ್ರಗಳ ಹುಡುಕಾಟದಲ್ಲಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜು ನಾಯ್ಕರ ಅವರು, ಇದೇ ಮೊದಲ ಬಾರಿಗೆ ಜಿಪಂ ಚುನಾವಣೆಗೆ ಸ್ಪರ್ಧಿಸಲು ಉತ್ಸಾಹದಲ್ಲಿದ್ದು, ಬಾಗಲಕೋಟೆ ತಾಲೂಕಿನಲ್ಲಿ ಎಸ್.ಟಿ ಮೀಸಲು ಆಗಲಿರುವ ಕ್ಷೇತ್ರದಿಂದ ಸ್ಪರ್ಧೆಗೆ ಬಯಸಿದ್ದಾರೆ. ಆದರೆ, ಯಾವ ಕ್ಷೇತ್ರ ಎಸ್‌ಟಿಗೆ ಮೀಸಲಾಗಲಿದೆ ಎಂಬ ಕುತೂಹಲ ಮೂಡಿಸಿದೆ.