Advertisement

ಬ್ಯಾಗ್‌ವತಿ; ತರಕಾರಿ ಚೀಲ ಅಲ್ಲ ಇದೇ ಈಗ ಸ್ಟೈಲು…

09:14 AM Mar 05, 2020 | mahesh |

ಹೆಂಗಳೆಯರ ಹೆಗಲೇರುವ ವ್ಯಾನಿಟಿ ಬ್ಯಾಗುಗಳು ಈ ಹಿಂದೆಲ್ಲಾ ಪುಟ್ಟದಾಗಿರುತ್ತಿದ್ದವು. ಅದರಲ್ಲಿ ಕೆಲವೇ ಕೆಲವು ಅಗತ್ಯ ವಸ್ತುಗಳನ್ನಿಡಲು ಜಾಗ ಇರುತ್ತಿತ್ತು. ಆದರೆ, ಕಾಲಕ್ರಮೇಣ ಮಹಿಳೆಯರ ಅಗತ್ಯಕ್ಕೆ ತಕ್ಕಂತೆ ಬ್ಯಾಗ್‌ನ ಗಾತ್ರ ಹಿಗ್ಗಿತು. ಈಗಂತೂ, ತರಕಾರಿ ಚೀಲದಷ್ಟು ದೊಡ್ಡದಾದ ಬ್ಯಾಗುಗಳೇ ಹೆಚ್ಚು ಸದ್ದು ಮಾಡುತ್ತಿರುವುದು.

Advertisement

ಪರ್ಸ್‌, ಹ್ಯಾಂಡ್‌ ಬ್ಯಾಗ್‌ ಅಥವಾ ವ್ಯಾನಿಟಿ ಬ್ಯಾಗ್‌ ಎಂಬುದು ಎಷ್ಟು ಮುಖ್ಯ ಅಂತ ಮಹಿಳೆಯರಿಗೆ ಗೊತ್ತೇ ಇದೆ. ಅದಿಲ್ಲದೆ ಹೊರಗೆ ತಿರುಗಾಡುವುದು ಬಹಳ ಕಷ್ಟ. ಹೆಣ್ಣು ಮಕ್ಕಳ ಪಾಲಿಗೆ, ದಿನನಿತ್ಯದ ಅತೀ ಅಗತ್ಯ ವಸ್ತುಗಳಲ್ಲೊಂದಾದ ಈ ಬ್ಯಾಗ್‌, ನೋಡಲು ಪುಟ್ಟದಾಗಿ, ಚೆನ್ನಾಗಿರಬೇಕು. ಆದರೆ, ತರಕಾರಿ, ದಿನಸಿ, ಇತ್ಯಾದಿಗಳನ್ನು ತರಲು ಕೊಂಡೊಯ್ಯುತ್ತಿದ್ದ ಚೀಲವೂ ಮುಂದೊಂದು ದಿನ ಫ್ಯಾಷನ್‌ನ ಮುಖ್ಯ ಭಾಗವಾಗುತ್ತದೆ ಅಂತ ಯಾರೂ ಯೋಚಿಸಿರಲಿಕ್ಕಿಲ್ಲ. ಇದೀಗ, ವಿಶ್ವ ವಿಖ್ಯಾತ ವಸ್ತ್ರ ವಿನ್ಯಾಸಕರು ದೊಡ್ಡ ದೊಡ್ಡ ಚೀಲಗಳನ್ನು ತಯಾರಿಸಿ, ತಮ್ಮ ಬ್ರಾಂಡ್‌ ಲೋಗೋ ಅನ್ನು ಅವುಗಳ ಮೇಲೆ ಮೂಡಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ನೋಡಲು ಥೇಟ್‌ ದಿನಸಿ ಚೀಲದಂತೆ ಕಾಣುವ ಈ “ಟ್ರೆಂಡಿ ಬ್ಯಾಗ್‌’ಗಳಿಗೆ ಬಹಳ ಬೇಡಿಕೆ ಇದೆ ಎಂದರೆ ನೀವು ನಂಬಲೇಬೇಕು.

ತರಕಾರಿ ಚೀಲದಂಥ ಬ್ಯಾಗ್‌!
ಮೊದಲೆಲ್ಲಾ, ವ್ಯಾನಿಟಿ ಬ್ಯಾಗ್‌ ಎಂಬುದು ದುಡ್ಡಿನ ಪರ್ಸ್‌ ಅನ್ನು ಕೊಂಡೊಯ್ಯಲು ಮಹಿಳೆಯರು ಬಳಸುತ್ತಿದ್ದ ಪುಟ್ಟ ಕೈಚೀಲವಾಗಿತ್ತು. ಆದರೀಗ ಕರವಸ್ತ್ರ, ಕಾಂಪ್ಯಾಕr… ಮೇಕ್‌ಅಪ್‌ ಕಿಟ್‌, ಮೊಬೈಲ್‌, ಛಾರ್ಜರ್‌, ಛತ್ರಿ, ನೀರಿನ ಬಾಟಲಿ, ಮನೆಯ ಬೀಗದ ಕೈ, ಗಾಡಿಯ ಬೀಗದ ಕೈ, ಪೆನ್‌, ಕಾಗದ, ಟಿಶ್ಯೂ, ಶಾಲು, ಜಾಕೆಟ್‌, ಲ್ಯಾಪ್‌ಟಾಪ್‌… ಇತ್ಯಾದಿಗಳನ್ನು ಮಹಿಳೆಯರು ಹೋದಲ್ಲೆಲ್ಲಾ ಕೊಂಡು ಹೋಗಬೇಕಾದ ಸ್ಥಿತಿ ಬಂದಿದೆ. ಹಾಗಾಗಿ, ವ್ಯಾನಿಟಿ ಬ್ಯಾಗ್‌ ಕೂಡಾ ಮೇಕ್‌ ಓವರ್‌ ಪಡೆದಿದೆ. ಗಾತ್ರದಲ್ಲಷ್ಟೇ ದೊಡ್ಡದಾಗಿಲ್ಲ. ಬದಲಿಗೆ, ಆಕಾರ ಮತ್ತು ವಿನ್ಯಾಸದಲ್ಲೂ ಬದಲಾಗಿದೆ. ಹಾಗೆಂದ ಮಾತ್ರಕ್ಕೆ ತುಂಬಾ ಸ್ಟೈಲಿಶ್‌ ಆಗಿದೆ ಎಂದುಕೊಂಡರೆ ಅಚ್ಚರಿ ಆಗಬಹುದು. ತರಕಾರಿ ಚೀಲವೇ ಈಗ ವ್ಯಾನಿಟಿ ಬ್ಯಾಗ್‌ ಆಗಿಬಿಟ್ಟಿದೆ! ಸೆಲೆಬ್ರಿಟಿಗಳು ಇಂಥ ಚೀಲ ಹಿಡಿದು ಕ್ಯಾಮೆರಾ ಎದುರು ಕಾಣಿಸಿಕೊಂಡಿದ್ದರಿಂದ, ಅಭಿಮಾನಿಗಳೂ ಆ ಬಗೆಯ ಚೀಲಗಳಿಗೆ ಮಾರು ಹೋಗಿದ್ದಾರೆ.

ಚೀಲವೂ ಸ್ಟೈಲಿಶ್‌ ಆಗಿರಲಿ
ತಮ್ಮ ಉಡುಪನ್ನು ಹೋಲುವ ಬಟ್ಟೆಯಲ್ಲೇ ಬ್ಯಾಗ್‌ಗಳನ್ನು ಹೊಲಿಸಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ಮಾಡುವವರಿದ್ದಾರೆ. ವಸ್ತ್ರ ವಿನ್ಯಾಸಕಾರರ ಬಳಿ ತಮಗಿಷ್ಟದ ವಿನ್ಯಾಸ, ಬಣ್ಣ ಮತ್ತು ಬಟ್ಟೆಯಿಂದ ಕಸ್ಟಮೈಸ್ಡ್ ಬ್ಯಾಗ್‌ಗಳನ್ನು ಸೆಲೆಬ್ರಿಟಿಗಳು ಮಾಡಿಸಿಕೊಳ್ಳುತ್ತಾರೆ. ತೊಟ್ಟ ಉಡುಗೆ ಸಿಂಪಲ್‌ ಆಗಿದ್ದರೂ, ಕೈಯಲ್ಲಿರುವ ಚೀಲ ಗ್ರ್ಯಾಂಡ್‌ ಆಗಿದ್ದರೆ ಎಲ್ಲರ ಗಮನ ನಮ್ಮತ್ತ ಬೀಳುತ್ತದೆ. ಹಾಗಾಗಿ ಸೆಲೆಬ್ರಿಟಿಗಳು ತಮ್ಮ ಬ್ಯಾಗ್‌ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಾರೆ. ಇತರರಿಗಿಂತ ಉತ್ತಮ ಮತ್ತು ವಿಭಿನ್ನವಾಗಿರುವ ಬ್ಯಾಗ್‌ ಜೊತೆ ಕಾಣಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.

ಸರ್ವೋಪಯೋಗಿ ಬ್ಯಾಗ್‌
ಜಿಮ್‌ಗೊಂದು ಚೀಲ, ಕಾಲೇಜಿಗೊಂದು ಚೀಲ, ಏರ್‌ಪೋರ್ಟ್‌ಗೊಂದು, ಆಫೀಸ್‌ಗೊಂದು ಚೀಲ ಅಂತ ಹತ್ತಾರು ಬ್ಯಾಗ್‌ಗಳನ್ನು ಖರೀದಿಸುವ ಬದಲು, ಒಂದೇ ಒಂದು ದೊಡ್ಡ ಗಾತ್ರದ ಸ್ಟೆçಲಿಶ್‌ ಚೀಲ ಬಳಸುವುದು ಉತ್ತಮ. ಒಳ್ಳೆ ಬ್ರ್ಯಾಂಡ್‌ನ‌ ಡಿಸೈನರ್‌ ಬ್ಯಾಗ್‌ ಕೊಂಚ ದುಬಾರಿಯಾದರೂ ಖರೀದಿಸಲು ಮಹಿಳೆಯರು ಹಿಂಜರಿಯುತ್ತಿಲ್ಲ. ಇವುಗಳಲ್ಲಿ ವಿಧ ವಿಧವಾದ ಬಣ್ಣ, ವಿನ್ಯಾಸ, ಆಕೃತಿ ಮತ್ತು ಸ್ಟೈಲ್‌ ಅಲ್ಲದೆ ಮೆಟೀರಿಯಲ್‌ಗ‌ೂ ಬೇಡಿಕೆ ಇದೆ. ದಿನ ನಿತ್ಯದ ಉಪಯೋಗಕ್ಕೆ ಬಳಸುವವರು ವಾಟರ್‌ಪ್ರೂಫ್ ಮೆಟೀರಿಯಲ್‌ನ ಚೀಲ ಬಳಸಿದರೆ ಒಳ್ಳೆಯದು. ಚಳಿಗಾಲ, ಮಳೆಗಾಲ, ಬೇಸಿಗೆ, ಹೀಗೆ ಎÇÉಾ ಸಮಯದಲ್ಲೂ ವಾಟರ್‌ಪ್ರೂಫ್ ಬ್ಯಾಗ್‌ಗಳು ಉಪಯೋಗಕ್ಕೆ ಬರುತ್ತವೆ.

Advertisement

ಅಬ್ಟಾ, ಅಷ್ಟೊಂದು ದುಬಾರೀನಾ?
ಬಾಲಿವುಡ್‌ ನಟಿಮಣಿಯರ ಡ್ರೆಸ್‌ ಬಗ್ಗೆ ಇರುವಷ್ಟೇ ಕುತೂಹಲ ಅವರ ಹ್ಯಾಂಡ್‌ಬ್ಯಾಗ್‌ಗಳ ಬಗ್ಗೆಯೂ ಇದೆ. ಯಾರು, ಯಾವ ಸಂದರ್ಭದಲ್ಲಿ, ಯಾವ ಬಗೆಯ ಬ್ಯಾಗ್‌ ಹಿಡಿದಿದ್ದರು, ಅದರ ಬೆಲೆ ಎಷ್ಟಿರಬಹುದು ಎಂಬ ವಿಷಯಗಳು ಸುದ್ದಿಯಾಗುತ್ತವೆ. ಇತ್ತೀಚೆಗೆ, ನಟಿ ಆಲಿಯಾ ಭಟ್‌ ಕೂಡಾ ತಮ್ಮ ಬ್ಯಾಗ್‌ನ ಕಾರಣಕ್ಕೇ ಸುದ್ದಿಯಾಗಿದ್ದಾರೆ. ಮಡ್‌ ರೋಸ್‌ ಬಣ್ಣದ ಮ್ಯಾಕ್ಸಿ, ಅದೇ ಬಣ್ಣದ ಬ್ಲೇಝರ್‌ ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಡ್ರೆಸ್‌ನ ಬಣ್ಣದ ಬ್ಯಾಗ್‌ ಅವರ ಕೈಯಲ್ಲಿತ್ತು. ಎಲ್ಲರ ಕಣ್ಣು ಆ ಬ್ಯಾಗ್‌ ಮೇಲೆ ಬಿದ್ದಿದ್ದೇ ತಡ, ಅದರ ಬೆಲೆ ಎಷ್ಟು ಎಂಬುದರ ಕುರಿತು ಮಾತುಕತೆಗಳು ನಡೆದವು. ಆ ಬ್ಯಾಗ್‌ನ ಬೆಲೆ ಎಷ್ಟು ಗೊತ್ತಾ? ಸುದ್ದಿಯೊಂದರ ಪ್ರಕಾರ, ಅದರ ಬೆಲೆ 2,300 ಡಾಲರ್‌/ ಅಂದರೆ, ನಮ್ಮ ಲೆಕ್ಕದಲ್ಲಿ ಸುಮಾರು 1 ಲಕ್ಷದ 64 ಸಾವಿರ ರೂ.ಗಳಂತೆ!

-ಬ್ರ್ಯಾಂಡೆಡ್‌ ಬ್ಯಾಗ್‌ಗಳು ದುಬಾರಿಯಾದರೂ, ಹೆಚ್ಚು ಕಾಲ ಬಾಳಿಕೆ ಬರುತ್ತದೆ.
-ಆಫೀಸ್‌, ಜಿಮ್‌, ಶಾಪಿಂಗ್‌ ಹೀಗೆ ಎಲ್ಲ ಸಂದರ್ಭಕ್ಕೂ ಒಂದೇ ಬ್ಯಾಗ್‌ ಕೊಂಡೊಯ್ಯುವವರಿಗೆ ಬ್ರ್ಯಾಂಡೆಡ್‌ ಬ್ಯಾಗ್‌ಗಳೇ ಸೂಕ್ತ.
– ಬ್ಯಾಗ್‌ಗಳು, ಉಡುಪಿನ ಬಣ್ಣಕ್ಕೆ ಸರಿ ಹೊಂದುವಂತೆ ಇರಬೇಕು. ಒಂದೇ ಬ್ಯಾಗ್‌ ಅನ್ನು ಎಲ್ಲ ಕಡೆಗೂ ಒಯ್ಯುವವರು, ಕಪ್ಪು, ನೀಲಿಯಂಥ ಬಣ್ಣಗಳನ್ನು ಆಯ್ದುಕೊಳ್ಳಬಹುದು.
– ಸ್ಟೈಲಿಶ್‌ ಆಗಿ ಕಾಣಿಸಬೇಕು ಅಂತ ಬಯಸುವವರು, ಮೈಕ್ರೋಬ್ಯಾಗ್‌, ಮೈಕ್ರೋ ಪರ್ಸ್‌ನಂಥ ಸಣ್ಣ ಬ್ಯಾಗುಗಳನ್ನು ಬಳಸಬಹುದು.

– ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next