Advertisement

ಬ್ಯಾಗ್‌ ಮಿಲ್ಖಾ ಬ್ಯಾಗ್‌

06:00 AM Nov 27, 2018 | Team Udayavani |

ದಿನಾ ಬೆಳಗಾದರೆ ಬ್ಯಾಗ್‌ ಅನ್ನು ಬೆನ್ನಿಗೇರಿಸಿಕೊಂಡು, ಮಿಲ್ಖಾ ಸಿಂಗ್‌ನಂತೆ ಓಡುವ ಕಾಲೇಜು ವಿದ್ಯಾರ್ಥಿಗಳ ಅಂತರಾಳವಿದು. ಅವರಿಗೆಲ್ಲ ಬ್ಯಾಗ್‌ ಅಂದ್ರೆ ಜಂಬ, ಬ್ಯಾಗ್‌ ಅಂದ್ರೆ ರೋಮಾಂಚನ, ಬ್ಯಾಗ್‌ ಅಂದ್ರೆ ಭಾವಿ ಗಂಡನಿಗಿಂತ ಒಂದು ಸ್ಟೆಪ್‌ ಮೇಲೆ ಇರುವ ಬಾದ್‌ಶಾ. ಹೊಸದಾಗಿ ಬ್ಯಾಗ್‌ ಖರೀದಿಸಿ ತಂದಿದ್ದಾಳೆ ಅಂದ್ರೆ, ಅವಳ ಬಾಯಿಗೆ ಒಂದು ವಾರ ಪುರುಸೋತ್ತೇ ಇರೋದಿಲ್ಲ…

Advertisement

“ಇಣುಕಿ ನೋಡಬಾರದು ಚೀಲದೊಳಗಿನ ಲೋಕವ’- ಎನ್ನುವ ವೈದೇಹಿಯವರ ಕವನ ಹೆಣ್ಣು ಮಕ್ಕಳ ಭಾವನೆಗೆ ಹಿಡಿದ ಕನ್ನಡಿ. ಪ್ರತಿಯೊಬ್ಬ ಹೆಣ್ಣು ಮಗಳೂ ತನ್ನ ವಸ್ತುಗಳ ಮೇಲೆ ಒಂದು ರೀತಿಯ ಬಂಧವನ್ನು ಬೆಸೆದುಕೊಂಡಿರುತ್ತಾಳೆ. ಅದಕ್ಕೆ ನಾನು ಕೂಡ ಹೊರತಲ್ಲ. ನನಗೆ ಎಲ್ಲ ವಸ್ತುಗಳಿಗಿಂತಲೂ ಬ್ಯಾಗ್‌ ಮೇಲೆ ಸ್ವಲ್ಪ ಜಾಸ್ತಿನೇ ಪ್ರೀತಿ. ಅದರಲ್ಲೂ ಕಾಲೇಜು ಬದುಕಿನಲ್ಲಿ ಬ್ಯಾಗ್‌ ಎನ್ನುವುದೇ ಮಿನಿ ವಿಶ್ವ ಇದ್ದಂತೆ.

ಹುಡುಗರಿಗಿಂತಲೂ ಹುಡುಗಿಯರಿಗೆ ಬ್ಯಾಗ್‌ ಮೇಲೆ ತುಸು ವ್ಯಾಮೋಹ ಹೆಚ್ಚು. ಹುಡುಗಿಯರಿಗೆ ಯಾರು ಕೈ ಕೊಟ್ರೂ, ಈ ಬ್ಯಾಗ್‌ ಮಾತ್ರ ಕೈ ಕೊಡಲ್ಲ. ಯಾರೂ ಗೆಳೆಯರಿಲ್ಲದಾಗ, ಒಂಟಿಯಾಗಿ¨ªಾಗ, ಬ್ಯಾಗನೊಮ್ಮೆ ಎದೆಗೆ ಅಪ್ಪಿಕೊಂಡು ಕುಳಿತರೆ ನಿರಾಳತೆ ಮೂಡುತ್ತದೆ. ಸದಾ ಜತೆಗಿರುವ, ನೆರಳಿಗೂ ಮೊದಲೇ ಹೋದಲ್ಲೆಲ್ಲಾ ಹಿಂಬಾಲಿಸುವ ಈತನಿಗಿಂತ ಒಳ್ಳೆಯ ಸ್ನೇಹಿತ ಬೇರೊಬ್ಬರಿಲ್ಲ. ಹೆಣ್ಮಕ್ಕಳಂತೂ, ತಮ್ಮ ಎಲ್ಲ ರಹಸ್ಯಗಳನ್ನೂ ಬ್ಯಾಗ್‌ನಲ್ಲೇ ತುಂಬಿರುತ್ತಾರೆ. ತನಗೆ ಬೇಕಾದದ್ದು, ಬೇಡದ್ದನ್ನೆಲ್ಲ ಬ್ಯಾಗ್‌ ಎಂಬ ಸ್ನೇಹಿತ ತುಂಬಿಸಿಟ್ಟುಕೊಳ್ಳುತ್ತದೆ.

ಬ್ಯಾಗ್‌ ಸೆಲೆಕ್ಷನ್‌ ಅನ್ನೋದು ಹುಡುಗಿಯರಿಗೆ ಒಂದು ಕ್ರೇಜ್‌. ಜುಲೈನಲ್ಲಿ ಕಾಲೇಜು ಶುರುವಾಗುವಾಗ ಅದರ ಅಬ್ಬರವನ್ನು ಕಾಣುವುದೇ ಚೆಂದ. ಇಡೀ ಅಂಗಡಿಯ ತುಂಬಾ ಹುಡುಗಿಯರೇ ಗಿಲಿಗಿಲಿ ಅಂತಿರ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಟೇಸ್ಟು. ಕೆಲವರಿಗೆ ಸೈಡ್‌ ಬ್ಯಾಗ್‌ ಇಷ್ಟ. ಮತ್ತೆ ಕೆಲವರಿಗೆ ಬೆನ್ನ ಮೇಲೆ ಬೆಚ್ಚಗೆ ಕೂರುವ ಬ್ಯಾಗೇ ಶ್ರೇಷ್ಠ. ಬ್ರಾಂಡೆಡ್‌ ಬ್ಯಾಗ್‌ಗಳಿಗೆ ಜೀವ ಬಿಡುವ ವ್ಯಾಮೋಹಿಗಳೂ ಅಲ್ಲಲ್ಲಿ ಇರ್ತಾರೆ. ಬ್ಯಾಗ್‌ ಅಂದ್ರೆ ಜಂಬ, ಬ್ಯಾಗ್‌ ಅಂದ್ರೆ ರೋಮಾಂಚನ, ಬ್ಯಾಗ್‌ ಅಂದ್ರೆ ಭಾವಿ ಗಂಡನಿಗಿಂತ ಒಂದು ಸ್ಟೆಪ್‌ ಮೇಲೆ ಇರುವ ಬಾದ್‌ಶಾ. ಹೊಸದಾಗಿ ಬ್ಯಾಗ್‌ ಖರೀದಿಸಿ ತಂದಿದ್ದಾಳೆ ಅಂದ್ರೆ, ಅವಳ ಬಾಯಿಗೆ ಒಂದು ವಾರ ಪುರುಸೊತ್ತೇ ಇರೋದಿಲ್ಲ. ಕಲರ್‌ ಕಲರ್‌ ಬ್ಯಾಗ್‌ಗಳು ಕ್ಲಾಸ್‌ರೂಮ್‌ನಲ್ಲಿ ಕುಳಿತಾಗ, ಕಣ್ಣಿಗೆ ಹಬ್ಬ. ಈ ಹೊತ್ತಿನಲ್ಲಿ ಲೆಕ್ಚರರ್‌ಗಳಿಗೂ ಸಿಟ್ಟು ಬರೋಲ್ವಂತೆ.

ಎಲ್ಲರನ್ನೂ ಮುಖ ನೋಡಿಯೇ ಗುರುತಿಸಬೇಕಂತೇನೂ ಇಲ್ಲ. ಬೆನ್ನಿಗೆ ನೇತು ಬಿದ್ದ ಬ್ಯಾಗ್‌ನ ಮೂಲಕವೂ ಅವರನ್ನು ಪತ್ತೆ ಹಚ್ಚಬಹುದು. ಕಾರಣ, ಯಾರೂ ಒಂದೇ ರೀತಿಯ ಬ್ಯಾಗ್‌ಗಳನ್ನು ಇಟ್ಟುಕೊಂಡಿರುವುದಿಲ್ಲ ಎನ್ನುವುದು “ಬ್ಯಾಗ್‌ ತತ್ವ’. ಅದರಲ್ಲೂ ಬುರ್ಖಾ ಧರಿಸುವ ಸ್ನೇಹಿತೆಯರನ್ನು ಈ ಬ್ಯಾಗ್‌ನ ಮೂಲಕವೇ ಇಂಥವರು ಎಂದು ಸಲೀಸಾಗಿ ಗುರುತಿಸುವ ಜಾಣತನ ಸದ್ದಿಲ್ಲದೇ ನಮ್ಮೊಳಗೆ ಮೂಡುತ್ತದೆ.

Advertisement

ಪ್ರೇಮಿಗಳಿಗೆ ಪಾರ್ಕು, ಥಿಯೇಟರು ಇದ್ದಂತೆ, ಬ್ಯಾಗ್‌ಪ್ರೇಮಿಗಳಿಗೆ ತಮ್ಮ ಚೀಲದ ಮೇಲಿನ ಪ್ರೀತಿ ಪ್ರಕಟಗೊಳ್ಳಲೂ ನಿರ್ದಿಷ್ಟ ಜಾಗಗಳುಂಟು. ಅದರಲ್ಲಿ ಸಿಟಿಬಸ್‌ ಕೂಡ ಒಂದು. ಕಾಲೇಜು ಬಿಟ್ಟ ತಕ್ಷಣ, ನಾ ಮುಂದು ತಾ ಮುಂದು ಅಂತ ಸ್ಪರ್ಧೆಗೆ ಬಿದ್ದವರಂತೆ ಪಟ್ಟು ಬಿದ್ದು ಹತ್ತಿ ನೋಡಿದರೆ, ಅಲ್ಲಿ ಸೀಟೇ ಸಿಗೋದಿಲ್ಲ. ಅಷ್ಟೊಂದು ರಶ್‌Ï. ಆಗ ನಮ್ಮ ಪ್ರೀತಿಯ ಬ್ಯಾಗನ್ನು ಜತನವಾಗಿ ತೊಡೆ ಮೇಲೆ ಇಟ್ಟುಕೊಳ್ಳೋರು ಯಾರು ಎಂದು ಕಣ್ಣಲ್ಲೇ ಶೋಧಿಸುತ್ತೇವೆ. ಅಕ್ಕಪಕ್ಕದ ಪ್ರತಿಯೊಬ್ಬರ ಮುಖವನ್ನೂ ಸ್ಕ್ಯಾನ್‌ ಮಾಡಿ, ಅರ್ಹರೊಬ್ಬರಿಗೆ ಕೊಟ್ಟು ಬಿಡುತ್ತೇವೆ. ಸೂಕ್ತರಾರೂ ಇಲ್ಲ ಅಂತಾದರೆ, ಕಷ್ಟಪಟ್ಟೋ, ಇಷ್ಟಪಟ್ಟೋ… ಬ್ಯಾಗ್‌ ಅನ್ನು ನಾವೇ ಇಟ್ಟುಕೊಳ್ಳುತ್ತೇವೆ.

ಬ್ಯಾಗ್‌ ಎನ್ನುವುದು ಅನೇಕರಿಗೆ ಸಾಮಾನ್ಯ ಸರಕೇ ಆಗಿರಬಹುದು. ಆದರೆ, ಹುಡುಗಿಯರಿಗೆ ಅದು ಅಂತರಂಗದ ಪ್ರೀತಿಯ ಕಣಜದಂತೆ. ಮತ್ತೆ ಕೆಲವರಿಗೆ ಅದೇ ಬೆಸ್ಟ್‌ಫ್ರೆಂಡ್‌. ಹೆಗಲಲ್ಲಿ ತೆಪ್ಪಗೆ ಕುಳಿತುಕೊಳ್ಳುವ ಬ್ಯಾಗ್‌ ಯಾವತ್ತೂ ಹೊರೆ ಆಗುವುದಿಲ್ಲ. ಈ ಮೂಕ ಸ್ನೇಹಿತ ಯಾವತ್ತೂ, ಬೆನ್ನಿಗೆ ಭಾರ ಅನಿಸಿಲ್ಲ. ನೋವನ್ನೂ ಕೊಟ್ಟಿಲ್ಲ. “ಪ್ರೀತಿ ಇದ್ದಲ್ಲಿ ನೋವಿದ್ದರೂ, ಆ ಯಾತನೆ ಸಿಹಿ ಆಗಿಯೇ ತೋರುತ್ತೆ’ ಎನ್ನುತ್ತಾರೆ ಬಲ್ಲವರು. ಬ್ಯಾಗ್‌ ವಿಚಾರದಲ್ಲಿ ಆ ಮಾತು ನೂರಕ್ಕೆ ನೂರು ನಿಜ. 

ಯಕ್ಷಿತಾ

Advertisement

Udayavani is now on Telegram. Click here to join our channel and stay updated with the latest news.

Next