Advertisement

ಬ್ಯಾಗ್‌ ಬಿಟ್ಟು ಶಾಲೆಗೆ ಬಂದರು ಚಿಣ್ಣರು

06:00 AM Jul 01, 2018 | Team Udayavani |

ಕುಂದಾಪುರ: ದಿನ ಬೆಳಗಾದರೆ ಮಣಭಾರದ ಬ್ಯಾಗ್‌ ಹೊತ್ತು ಶಾಲೆಗೆ ಬರುತ್ತಿದ್ದ ಮಕ್ಕಳ ಬೆನ್ನಲ್ಲಿ ಈ ದಿನ ಬ್ಯಾಗ್‌ ಇರಲಿಲ್ಲ. ಬಣ್ಣ- ಬಣ್ಣದ ಡ್ರೆಸ್‌ ಧರಿಸಿ, ಕೈಯಲ್ಲೊಂದು ಕೊಡೆ, ಡ್ರಾಯಿಂಗ್‌, ರಂಗೋಲಿ ಬಿಡಿಸಲು ಬೇಕಾದ ಪರಿಕರಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಚಿಣ್ಣರು ನಲಿದು ಖುಷಿ ಪಟ್ಟರು. 

Advertisement

ಉಡುಪಿ ಜಿಲ್ಲೆಯಾದ್ಯಂತ ಪ್ರತಿ ತಿಂಗಳ ಕೊನೆಯ ಶನಿವಾರ ಪಠ್ಯ ಹಾಗೂ ಬ್ಯಾಗಿನ ಹೊರೆ ತಪ್ಪಿಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕುಂದಾಪುರ ತಾಲೂಕಿನ ಎಲ್ಲ ಶಾಲೆಗಳಲ್ಲಿ ಬ್ಯಾಗ್‌ ರಹಿತ ದಿನ ಕಂಡು ಬಂದ ಚಿತ್ರಣವಿದು. 

ವಿವಿಧ ಚಟುವಟಿಕೆಗಳು
“ಈ ದಿನ ನಮಗೆ ಬ್ಯಾಗಿಲ್ಲ.. ನಲಿಯುತ ಕಳೆವೆವು ದಿನವೆಲ್ಲ..’ ಎನ್ನುವ ಘೋಷ ವಾಕ್ಯದಡಿ ಬ್ಯಾಗ್‌ ರಹಿತ ದಿನದಂಗವಾಗಿ ಕುಂದಾಪುರ ಹಾಗೂ ಬೈಂದೂರು ವಲಯದ ಎಲ್ಲ ಶಾಲೆಗಳಲ್ಲಿ ಪಾಠವನ್ನು, ಹೊರತುಪಡಿಸಿ, ಪಠ್ಯಕ್ಕೆ ಪೂರಕವೆನ್ನುವಂತೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಹೀಗಿತ್ತು ದಿನಚರಿ 
ಕೆಲವು ಶಾಲೆಗಳಲ್ಲಿ ವಿಭಿನ್ನ ರೀತಿಯ ಚಟುವಟಿಕೆಗಳನ್ನು ಶಿಕ್ಷಕರು ನಡೆಸಿದರು. ಶಾಲಾ ಕೈತೋಟ (ಕಿರು ತೋಟ) ರಚನೆ, ಇಂಗ್ಲಿಷ್‌ ಹಾಡು, ಸಂಭಾಷಣೆ, ಚಿತ್ರ ಪ್ರದರ್ಶನ, ಚಿತ್ರಕಲೆ ಸ್ಪರ್ಧೆ, ಚೀಟಿ ಎತ್ತಿ ಮಾತನಾಡು, ನಗೆ ಹನಿಗಳ ಸಿಂಪಡಿಕೆ, ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಕ್ರಾಫ್ಟ್‌ ತಯಾರಿಗಳನ್ನು ನಡೆಸಲಾಯಿತು. 

ಸಾಂಪ್ರದಾಯಿಕ ಉಡುಗೆ
ಕುಂದಾಪುರ ವಡೇರಹೋಬಳಿಯ ವಿ.ಕೆ. ಆರ್‌. ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಕೆಲವು ಶಾಲೆಗಳ ವಿದ್ಯಾರ್ಥಿಗಳು ಪಂಚೆ, ಧೋತಿ ಧರಿಸಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ್ದು ಗಮನ ಸೆಳೆಯುವಂತಿತ್ತು. ಮಧ್ಯಾಹ್ನ ಸಿಹಿಯೂಟವನ್ನು ವಿದ್ಯಾರ್ಥಿಗಳಿಗೆ  ಬಡಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next