ಬ್ಯಾಡಗಿ: ಹರಪ್ಪ ಮತ್ತು ಮೆಹೆಂಜೋದಾರ ಸಂಸ್ಕೃತಿಯಲ್ಲಿ ಸಿಕ್ಕ ಶಿವನ ದೇವಾಲಯ ಹಾಗೂ ಶಿಲಾಮೂರ್ತಿಗಳು ನಮ್ಮ ಸಂಸ್ಕೃತಿ ಕುರಿತ ಇತಿಹಾಸ ಪರಿಚಯಿಸುತ್ತಿದೆ. ಅಂದೂ ಸಹ ಶಿವನನ್ನು ಆರಾಧಿ ಸುತ್ತಿದ್ದ ಕುರುಹುಗಳಿವೆ. ಹೀಗಾಗಿ ದೇವಾಲಯಗಳು ಸಂಸ್ಕೃತಿ ಮತ್ತು ಪರಂಪರೆಗಳಾಗಿವೆ ಎಂದು ನೆಗಳೂರು ಹಿರೇಮಠದ ಷ.ಬ್ರ. ಗುರುಶಾಂತೇಶ್ವರ ಶಿವಾಚಾರ್ಯಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಂಜನೇಯ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಬಹಳ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು. ಇದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲ ಸಂಸ್ಕೃತಿಗಳಲ್ಲಿ ಬಹಳಷ್ಟು ವರ್ಷಗಳಿಂದ ಇಬ್ಭಾಗವಾಗಿವೆ. ಆದರೆ, ಭಾರತೀಯ ಸಂಸ್ಕೃತಿ ಮಾತ್ರ ಎಂದಿಗೂ ಬದಲಾಗಿಲ್ಲ. ಈ ಎಲ್ಲ ಕಾರಣಗಳಿಂದ ನಮ್ಮ ಪರಂಪರೆ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ ಎಂದರು.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ನಾಸ್ತಿಕ ಮನೋಭಾವನೆ ಮತ್ತು ಧರ್ಮರಹಿತ ಬದುಕು ಎಂದೆಂದಿಗೂ ಅರ್ಥಹೀನ. ನಶ್ವರ ಮನೋಭಾವನೆಯುಳ್ಳ ವ್ಯಕ್ತಿಗಳಿಗೆ ಹುಟ್ಟು ಸಾವುಗಳಿಗೂ ಒಂದೇ ಅರ್ಥ ಎಂಬ ಮನೋಭಾವನೆ ತೋರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಾಲಯಗಳನ್ನು ನಿರ್ಮಿಸುವ ಮೂಲಕ ಜನರಲ್ಲಿ ಆಸ್ತಿಕ ಮನೋಭಾವನೆ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಸನಾತನ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ಭಾರತೀಯ ಸಂಸ್ಕೃತಿ ಮರೆಯುತ್ತಿರುವ ಯುವಕರು ಕತ್ತಲೆ ಜಗತ್ತಿನ ಅಪರಾಧಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಆದರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಿಂತಿರುವ ಸ್ಥಳೀಯ ಆಂಜನೇಯ ಸಂಸ್ಥೆಯ ಯುವಕರು, ಯುವ ಜನತೆಗೆ ಮಾದರಿಯಾಗಿದ್ದಾರೆ. ಇವರಂತೆ ನಮ್ಮ ಸನಾತನ ಸಂಸ್ಕೃತಿ, ಪರಂಪರೆ ಕಾಪಾಡಲು ಸಮಾಜದ ಪ್ರತಿಯೊಬ್ಬ ಯುವಕರು ಶ್ರಮಿಸಬೇಕಾಗಿದೆ ಎಂದರು.
ಶಂಕ್ರಪ್ಪ ಮಾತನವರ, ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಎಪಿಎಂಸಿ ಸದಸ್ಯರಾದ ಉಳಿವೆಪ್ಪ ಕುರುವತ್ತಿ, ವನಿತಾ ಗುತ್ತಲ, ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಓಲೇಕಾರ, ಸದಸ್ಯರಾದ ಬಸಪ್ಪ ಬನ್ನಿಹಟ್ಟಿ, ಶಿವಪ್ಪ ಕುಮ್ಮೂರ, ಶಿವಮೂರ್ತೇಪ್ಪ ಬನ್ನಿಹಟ್ಟಿ, ನಿಂಗಪ್ಪ ಹೆಗ್ಗಣ್ಣನವರ, ಮಲ್ಲಪ್ಪ ದೇಸಾಯಿ, ಮಲಕಪ್ಪ ಮುಳಗುಂದ, ಚಂದ್ರಪ್ಪ ಬಿ.ಬಾರ್ಕಿ, ಮೃತ್ಯುಂಜಯಪ್ಪ ಮುಳಗುಂದ, ವಕೀಲರಾದ ಮಹದೇವಪ್ಪ ಬನ್ನಿಹಟ್ಟಿ, ಪ್ರಕಾಶ ಬನ್ನಿಹಟ್ಟಿ, ಬಸಪ್ಪ ವೀರನಗೌಡ್ರ, ಬಸವರಾಜ ಸಂಕಣ್ಣನವರ, ವೀರಯ್ಯ ಮಾನಿಹಳ್ಳಿಮಠ ಉಪಸ್ಥಿತರಿದ್ದರು.