ಹ್ಯಾಂಗ್ ಝೂ: ಭಾರತದ ಸ್ಟಾರ್ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶನಿವಾರ ನೇರ ಗೇಮ್‌ಗಳ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಬ್ಯಾಡ್ಮಿಂಟನ್ ಚಿನ್ನದ ಪದಕವನ್ನು ತಂದುಕೊಟ್ಟು ಹೊಸ ಇತಿಹಾಸ ಬರೆದಿದ್ದಾರೆ.
ರಿಪಬ್ಲಿಕ್ ಆಫ್ ಕೊರಿಯಾದ ಚೋಯ್ ಸೋಲ್ಗ್ಯು-ಕಿಮ್ ವೊನ್ಹೋ ವಿರುದ್ಧ ಸಾತ್ವಿಕ್ ಮತ್ತು ಚಿರಾಗ್ ಅವರು 21-18, 21-16 ಸೆಟ್ ಗಳಿಂದ ಪಂದ್ಯವನ್ನು ಗೆದ್ದು ಭಾರತಕ್ಕೆ ಏಷ್ಯನ್ ಗೇಮ್ಸ್‌ನ ಮೊದಲ ಬ್ಯಾಡ್ಮಿಂಟನ್ ಸ್ವರ್ಣ ಪದಕ ಗೆದ್ದು ಹೆಮ್ಮೆ ಮೂಡಿಸಿದರು.
ಬ್ಯಾಡ್ಮಿಂಟನ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಚಿನ್ನ ಗೆಲ್ಲುವ ಭಾರೀ ನಿರೀಕ್ಷೆ ಇರಿಸಲಾಗಿತ್ತು, ಇಬ್ಬರು ಅತ್ಯಮೋಘ ಪ್ರದರ್ಶನ ತೋರಿ ನಿರೀಕ್ಷೆ ಹುಸಿಯಾಗದಂತೆ ಮಾಡಿದರು. 1982 ರ ಆವೃತ್ತಿಯಲ್ಲಿ ಲೆರಾಯ್ ಡಿಸಾ ಮತ್ತು ಪ್ರದೀಪ್ ಗಂಧೆ ಕಂಚಿನ ಪದಕ ಗೆದ್ದ ನಂತರ, 41 ವರ್ಷಗಳ ಬಳಿಕ ಪುರುಷರ ಡಬಲ್ಸ್‌ನಲ್ಲಿ ಭಾರತದ ಮೊದಲ ಪದಕವಾಗಿದೆ.
ಏಷ್ಯನ್ ಗೇಮ್ಸ್ ನಲ್ಲಿ ಈ ಬಾರಿ ಪುರುಷರ ತಂಡ ಬೆಳ್ಳಿ ಗೆದ್ದಿತ್ತು. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಎಚ್.ಎಸ್.ಪ್ರಣಯ್, ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್, ಮಿಥುನ್ ಮಂಜುನಾಥ್, ಧ್ರುವ ಕಪಿಲ, ಎಂ.ಆರ್.ಅರ್ಜುನ್, ರೋಹನ್ ಕಪೂರ್, ಸಾಯಿ ಪ್ರತೀಕ್ ಕೆ.ಅವರು ಪುರುಷರ ತಂಡದಲ್ಲಿ ಅಮೋಘ ನಿರ್ವಹಣೆ ತೋರಿದ್ದರು. ಎಚ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಬ್ಯಾಡ್ಮಿಂಟನ್ ನಲ್ಲಿ ಒಟ್ಟು ಮೂರು ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ.
ಭಾರತ 28 ಚಿನ್ನ,36 ಬೆಳ್ಳಿ,41 ಕಂಚಿನ ಪಾದಕಗಳೊಂದಿಗೆ ಒಟ್ಟು 105 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ತೋರಿದೆ.