ಗುವಾಹಾಟಿ: ದೊಡ್ಡ ಕೂಟಗಳಿಂದ ಗೆದ್ದಿರುವ ಪದಕಗಳಿಂದ ಕೊಠಡಿ ತುಂಬಿದ ಬಳಿಕ ನಿವೃತ್ತಿ ಘೋಷಿಸಲು ಬಯಸಿದ್ದೇನೆ ಎಂದು ಭಾರತೀಯ ಬ್ಯಾಡ್ಮಿಂಟನ್ ತಂಡದ ಯಶಸ್ವಿ ಡಬಲ್ಸ್ ಆಟಗಾರ ಚಿರಾಗ್ ಶೆಟ್ಟಿ ಹೇಳಿದ್ದಾರೆ. ಒಳ್ಳೆಯ ಫಲಿತಾಂಶ ಬರಲು ನಾವು ಶ್ರೇಷ್ಠ ಬ್ಯಾಡ್ಮಿಂಟನ್ ಆಟ ಆಡಬೇಕಾಗಿದೆ ಎಂಬುದು ಚಿರಾಗ್ ಅವರ ಮಂತ್ರವಾಗಿದೆ.
ಕಳೆದ ವರ್ಷ ನಡೆದ ಕಾಮನ್ವೆಲ್ತ್ ಗೇಮ್ಸ್‌ನ ಚಿನ್ನ ಜಯಿಸಿದ್ದ ಚಿರಾಗ್ ಮತ್ತು ಅವರ ಜತೆಗಾರ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಈ ಋತುವಿನನಲ್ಲಿ ಶ್ರೇಷ್ಠ ನಿರ್ವಹಣೆ ನೀಡುತ್ತ ಬಂದಿದ್ದಾರೆ. ಇಂಡೋನೇಶ್ಯ ಓಪನ್, ಏಷ್ಯಾ ಚಾಂಪಿಯನ್‌ಶಿಪ್, ಸ್ವಿಸ್ ಓಪನ್ ಮತ್ತು ಕೊರಿಯ ಓಪನ್‌ನ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
ಜೋಡಿಯಾಗಿ ನಾವು ಸರ್ಕ್ನೂಟ್‌ನಲ್ಲಿರುವ ಎಲ್ಲ ಕೂಟಗಳ ಪ್ರಶಸ್ತಿ ಗೆಲ್ಲಲು ಬಯಸಿದ್ದೇವೆ. ಹೀಗಾಗಿ ಮುಂದಿನ ಕೆಲವು ವರ್ಷಗಳಲ್ಲಿ ನಿವೃತ್ತಿಯಾಗುವ ಮೊದಲು ನನ್ನ ಕೊಠಡಿಯು ದೊಡ್ಡ ಕೂಟಗಳ ಪ್ರಶಸ್ತಿಗಳಿಂದ ತುಂಬುವ ಸಾಧ್ಯತೆಯಿದೆ ಎಂದು ಚಿರಾಗ್ ಹೇಳಿದ್ದಾರೆ.
ಪ್ರಶಸ್ತಿ ಗೆಲ್ಲುವುದು ನನ್ನ ಆಸಕ್ತಿಯಲ್ಲಿ ಒಂದಾಗಿದೆ. ಹಾಗಾಗಿ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಅಥವಾ ವಿಶ್ವ ಟೂರ್ ಫೈನಲ್ಸ್ ಇರಲಿ. ಎಲ್ಲ ಕೂಟಗಳ ಪ್ರಶಸ್ತಿ ಗೆಲ್ಲುವುದು ನನ್ನ ಗುರಿಯಾಗಿದೆ. ನಾನಿನ್ನೂ ಹಲವು ಕೂಟಗಳ ಪ್ರಶಸ್ತಿ ಗೆದ್ದಿಲ್ಲ ಎಂದವರು ಹೇಳಿದ್ದಾರೆ. ವಿಶ್ವದ ಎರಡನೇ ರ್‍ಯಾಂಕಿನ ಭಾರತೀಯ ಜೋಡಿ ಕಳೆದ ವರ್ಷ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಬಾರಿ ಕಂಚು ಜಯಿಸಿತ್ತು. ಅವರು ಈ ಬಾರಿ ಆ. 21ರಿಂದ ಡೆನ್ಮಾರ್ಕ್‌ನ ಕೊಪೆನ್‌ಹಾಗನ್‌ನಲ್ಲಿ ನಡೆಯಲಿರುವ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.