Advertisement

ಬದಿಯಡ್ಕ: ಎಂಡೋಸಲ್ಫಾನ್‌ ವಿಶೇಷ ವೈದ್ಯಕೀಯ ಶಿಬಿರ

03:18 PM Apr 11, 2017 | Team Udayavani |

ಬದಿಯಡ್ಕ: ಎಂಡೋಸಲ್ಫಾನ್‌ ದುಷ್ಪರಿಣಾಮದ ಯತಾರ್ಥ ರೋಗಿಗಳ ಆಯ್ಕೆಗಾಗಿ ಬದಿಯಡ್ಕದಲ್ಲಿ ಪ್ರತ್ಯೇಕ ವೈದ್ಯಕೀಯ ಶಿಬಿರ ನಡೆಯಿತು.

Advertisement

ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳಾದ ವರ್ಕಾಡಿ, ಮೀಂಜ, ಮಂಜೇಶ್ವರ, ಪೈವಳಿಕೆ, ಮಂಗಲ್ಪಾಡಿ, ಕುಂಬಳೆ, ಪುತ್ತಿಗೆ, ಎಣ್ಮಕಜೆ, ಬದಿಯಡ್ಕ, ಕುಂಬಾxಜೆ, ಬೆಳ್ಳೂರು ಪಂಚಾಯತ್‌ಗಳ ರೋಗಿಗಳಿಗಾಗಿ ಈ ಶಿಬಿರ ಆಯೋಜಿಸಲಾಗಿತ್ತು. ರೋಗಿಗಳ ಅನುಕೂಲಕ್ಕಾಗಿ ಚೀಮೇನಿ, ರಾಜಪುರಂ,  ಬದಿಯಡ್ಕ, ಬೋವಿಕ್ಕಾನ ಪೆರಿಯದಲ್ಲಿ ಶಿಬಿರ ಜರಗಿತು.

ಬದಿಯಡ್ಕದಲ್ಲಿ ನಡೆದ ಶಿಬಿರದಲ್ಲಿ 220 ಮಂದಿ ಸಹಾಯಕ ಸಿಬಂದಿ, 40 ನುರಿತ ವೈದ್ಯರ ತಂಡ ಪಾಲ್ಗೊಂಡಿದೆ. ಎನ್‌.ಎಸ್‌.ಎಸ್‌., ಕುಟುಂಬಶ್ರೀ ಘಟಕಗಳು, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ರೋಗಿಗಳ ಸಹಾಯಕ್ಕೆ ಧಾವಿಸಿ ಬರುತ್ತಿದ್ದರು. ಬದಿಯಡ್ಕದ ಸುಮಾರು 200ರಷ್ಟು ಮಂದಿ, ಎಣ್ಮಕಜೆಯ 210 ಮಂದಿ ಕುಂಬಾxಜೆಯ 150 ಮಂದಿ ಶಿಬಿರಕ್ಕೆ ಆಯ್ಕೆಯಾಗಿದ್ದರು. 

ಎಂಡೋ ಪಟ್ಟಿಯಿಂದ ಬಿಟ್ಟು ಹೋದವರು ಕೂಡ ಶಿಬಿರಕ್ಕೆ ಆಗಮಿಸಿದ್ದರು. ಅವರನ್ನು ವೈದ್ಯರು ತಪಾಸಣೆ ನಡೆಸಿದರು.
ಎಣ್ಮಕಜೆ ಪಂಚಾಯತ್‌ನ ಶೇಣಿಯಲ್ಲಿ ವಾಸವಾಗಿರುವ ಲೋಕೇಶ ಅವರ 10 ವರ್ಷದ ಪುತ್ರ ನಡೆದಾಡಲು, ಮಾತನಾಡಲೂ ಆಗದ ಸ್ಥಿತಿಯಲ್ಲಿ ರಿತೇಶ್‌ ಎಂಬ ಬಾಲಕನ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ ಎಂಬುದು ಖೇದಕರ ಸಂಗತಿಯಾಗಿದೆ. ಜನನದ ಅನಂತರ ಆರೋಗ್ಯವಾಗಿದ್ದ ರಿತೇಶ್‌ ತನ್ನ 4ನೇ ವರ್ಷದಲ್ಲಿ ಜ್ವರ ಬಂದ ಬಳಿಕ ಹಠಾತ್‌ ಅನಾರೋಗ್ಯಕ್ಕೊಳಗಾಗಿರುವನೆಂದು ತಂದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪುತ್ತಿಗೆ ಪಂಚಾಯತ್‌ನ ಅಂಗಡಿಮೊಗರು ನಿವಾಸಿ ಶಿವಪ್ಪ ರೈ – ಶೀನಾ ದಂಪತಿಗಳ 4 ಮಕ್ಕಳಲ್ಲಿ ಇಬ್ಬರ ಸ್ಥಿತಿ ತೀರಾ ಚಿಂತಾಜನಕವಾಗಿದೆ. 32 ವರ್ಷದ ಚಿತ್ತರಂಜನ್‌ ಹಾಗೂ 25 ವರ್ಷದ ಅಶ್ವಿ‌ನಿಗೆ ಕೈ ಕಾಲುಗಳಿಗೆ ಬಲವಿಲ್ಲ. ಬೇರೆಯವರ ಸಹಾಯವಿಲ್ಲದೇ ಬದುಕಲಾರದ ಸ್ಥಿತಿ. ಸರಕಾರದಿಂದ ತಿಂಗಳಿಗೆ 500 ರೂಪಾಯಿಯಂತೆ ಇಬ್ಬರಿಗೆ
ಹಾಗೂ ನೋಡಿಕೊಳ್ಳುವ ಇಬ್ಬರಿಗೆ 500 ರೂ.ನಂತೆ ಒಟ್ಟು ತಿಂಗಳಿಗೆ 2,000 ರೂಪಾಯಿ ಸಹಾಯಧನ ಲಭಿಸುತ್ತದೆ.

Advertisement

ಶಿಬಿರದಲ್ಲಿ ಒಟ್ಟು 10 ವಿಭಾಗಗಳನ್ನು ಮಾಡಿ ತಪಾಸಣೆಗೆ ಬೇಕಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಕುಡಿಯುವ ನೀರಿನ ಸೌಲಭ್ಯ, ಎಂಡೋ ಪ್ಯಾಕೇಜ್‌ನ ಅಂಬ್ಯುಲೆನ್ಸ್‌ಗಳು, ವೀಲ್‌ ಚೇರ್‌ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಡಿಯಲು ಚಾ ಹಾಗೂ ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next