ಬದಿಯಡ್ಕ: ಏಳ್ಕಾನದ ಶಾಜಿ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೂಲತ: ಕೊಲ್ಲಂ ಕೊಟ್ಟಿಯಂ ನಿವಾಸಿ ನೀತುಕೃಷ್ಣ(30) ಅವರನ್ನು ಕೊಲೆಗೈದ ಪ್ರಕರಣದ ಆರೋಪಿ ವಯನಾಡು ಮೇಲಾಡಿ ಪೊಲೀಸ್ ಠಾಣೆ ವಾಪ್ತಿಗೊಳಪಟ್ಟ ತೃಕ್ಕೇಪಟ್ಟಮುಟ್ಟಿಲ್ ತಾಳುವಾರದ ಆಂಟೋ ಸೆಬಾಸ್ಟಿನ್(32)ನನ್ನು ಪೊಲೀಸರು ತಿರುವನಂತಪುರದಿಂದ ಕಾಸರಗೋಡಿಗೆ ಕರೆತಂದು ಬಂಧನ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವೈಭವ್ ಸಕ್ಸೇನಾ, ಎ.ಎಸ್ಪಿ. ಮೊಹಮ್ಮದ್ ನದಿಮುದ್ದೀನ್, ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರೇಂ ಸದನ್, ಬದಿಯಡ್ಕ ಎಸ್.ಐ. ವಿನೋದ್ ಕುಮಾರ್ ಕೆ.ಪಿ, ವಿದ್ಯಾನಗರ ಎಸ್.ಐ. ಬಾಲಚಂದ್ರನ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ತಿರುವನಂತಪುರದಿಂದ ಬಂಧಿಸಿದೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಸೈಬರ್ ಪೊಲೀಸ್ ಠಾಣೆಯ ಎಎಸ್‌ಐ ಪ್ರೇಮರಾಜನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರಾಜೇಶ್, ಅಭಿಲಾಷ್, ಶಿವ ಕುಮಾರ್ ಮತ್ತು ಆಸ್ಟಿನ್ ತಂಬಿ ಒಳಗೊಂಡಿದ್ದಾರೆ.
ಜ.27 ರಂದು ಆರೋಪಿ ಆಂಟೋ ಸೆಬಾಸ್ಟಿನ್ ನೀತು ಕೃಷ್ಣನ್‌ಳನ್ನು ಏಳ್ಕಾನದ ಬಾಡಿಗೆ ಮನೆಯಲ್ಲಿ ಕುತ್ತಿಗೆ ಬಿಗಿದು ಕೊಲೆಗೈದಿದ್ದು, ಜ.28 ಮತ್ತು 29 ರಂದು ಮೃತದೇಹದ ಜತೆ ಅದೇ ಮನೆಯಲ್ಲಿ ತಂಗಿದ್ದನು. ನಂತರ ಮೃತದೇಹವನ್ನು ಆ ಮನೆಯೊಳಗೆ ಬಟ್ಟೆಯಿಂದ ಮುಚ್ಚಿ ಮೃತ ಮಹಿಳೆ ಧರಿಸಿದ್ದ ಚಿನ್ನದ ಬ್ರೇಸ್‌ಲೆಟ್‌ನ್ನು ಕಳಚಿ ತೆಗೆದು ಮನೆಗೆ ಬೀಗ ಜಡಿದು ಜ.30 ರಂದು ಜಾಗ ಖಾಲಿ ಮಾಡಿದ್ದನು. ಮನೆ ಬಿಡುವ ಮುನ್ನ ನೀತುಕೃಷ್ಣಳ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಜೊತೆಗೆ ಒಯ್ದಿದ್ದನು. ಅಲ್ಲಿಂದ ಪೆರ್ಲದ ಚಿನ್ನದ ಅಂಗಡಿಗೆ ತೆರಳಿ ಆ ಬ್ರೇಸ್‌ಲೆಟ್‌ನ್ನು ಮಾರಾಟ ಮಾಡಿ ಅದರ ಹಣದೊಂದಿಗೆ ಕಲ್ಲಿಕೋಟೆಗೆ ಹೋಗಿ ಅಲ್ಲಿ ಉಳಿದುಕೊಂಡು ಸಿನಿಮಾ ವೀಕ್ಷಿಸಿ, ಮದ್ಯಪಾನಗೈದಿದ್ದನು. ಮರುದಿನ ಬೆಳಗ್ಗೆ ಎರ್ನಾಕುಳಂಗೆ ಹೋಗಿ ಅಲ್ಲೂ ಮದ್ಯಪಾನ ಮಾಡಿದ್ದನು. ಬಳಿಕ ಅಲ್ಲಿಂದ ತಿರುವನಂತಪುರಕ್ಕೆ ಹೋಗುವ ದಾರಿ ಮಧ್ಯೆ ನೀತುಕೃಷ್ಣಳ ಮೊಬೈಲ್ ಫೋನನ್ನು ಆನ್ ಮಾಡಿ ಕೊಲೆಗೆ ಸಂಬಂಧಿಸಿ ಯಾವುದಾದರೂ ಮಾಹಿತಿ ಇದೆಯೇ ಎಂದು ನೋಡಿದ್ದನು. ಆ ಮೊಬೈಲ್ ಫೋನ್‌ನ ಮೇಲೆ ಕಾಸರಗೋಡು ಸೈಬರ್ ಸೆಲ್ ಪೊಲೀಸರು ನಿಗಾ ಇರಿಸಿದ್ದರು. ಮೊಬೈಲ್ ಫೋನ್‌ನಲ್ಲಿ ಫೋನ್ ಮಾಡಿದ ವೇಳೆ ಆತ ತಿರುವರಂತಪುರದಲ್ಲಿರುವ ಮಾಹಿತಿ ಲಭಿಸಿತು. ಇದರ ಜಾಡು ಹಿಡಿದು ಅಲ್ಲಿಗೆ ಹೋದಾಗ ತಿರುವನಂತಪುರದಿಂದ ಮುಂಬೈಗೆ ಹೋಗಲು ಬಸ್ ಟಿಕೆಟ್ ಸಿದ್ಧಪಡಿಸಿದ್ದು ತಿಳಿದು ಬಂತು. ಅದಕ್ಕೂ ಮುನ್ನ ಆತನನ್ನು ಪೊಲೀಸರು ಬಂಧಿಸಿದರು.
ಹಲವು ಪ್ರಕರಣಗಳ ಆರೋಪಿ : ತಿರುವನಂತಪುರದಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದ ಆಂಟೋ ಮಕ್ಕಳಿಗೆ ಪದೇ ಪದೇ ಹಿಂಸೆ ನೀಡುತ್ತಿದ್ದ. ಈ ಕಾರಣಕ್ಕೆ ಪತ್ನಿ ವಿವಾಹ ವಿಚ್ಛೇಧನ ಪಡೆದಿದ್ದಳು. ನಂತರ ಕಲ್ಪೆಟ್ಟಾಕ್ಕೆ ಬಂದ ಆಂಟೋ ಮೂವರು ಮಕ್ಕಳ ತಾಯಿಯೊಂದಿಗೆ ವಾಸಿಸತೊಡಗಿದ್ದ. ಇಲ್ಲೂ ಮಕ್ಕಳಿಗೆ ಹಿಂಸೆ ನೀಡುತ್ತಿದ್ದುದರಿಂದ ಆಕೆ ದೂರು ನೀಡಿದ್ದರಿಂದಾಗಿ ಪೊಲೀಸರು ಜೆಜೆ ಆ್ಯಕ್ಟ್ ಪ್ರಕಾರ ಬಂಧಿಸಿದ್ದರು. ನಂತರ ಆತ ಅಲ್ಲಿಂದ ಕೊಲ್ಲಂ ಕೊಟ್ಟಿಯಂಗೆ ಬಂದು ನೀತುಕೃಷ್ಣಳೊಂದಿಗೆ ವಾಸಿಸತೊಡಗಿದ್ದ. ಅಲ್ಲಿನ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕಾರ್ಮಿಕನಾಗಿ ದುಡಿಯುತ್ತಿದ್ದು, ರಬ್ಬರ್ ತೋಟದ ಮಾಲಕನ ಮನೆಯಿಂದ ಚಿನ್ನದ ಉಂಗುರವನ್ನು ಕಳವು ಮಾಡಿದ್ದ. ಈ ಪ್ರಕರಣದಲ್ಲೂ ಆತನನ್ನು ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಏಳ್ಕಾನಕ್ಕೆ ಬಂದು ನೀತುಕೃಷ್ಣಳೊಂದಿಗೆ ವಾಸಿಸತೊಡಗಿದ್ದ. ಈ ಮಧ್ಯೆ ಕಳವು ಮಾಡಿದ ಚಿನ್ನ ದುಂಗರ ಬಗ್ಗೆ ಅವರ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತೆಂದು ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿರಬೇಕೆಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮುಂಡಾಜೆ ಕಾಪು ಚಡಾವಿನಲ್ಲಿ ನದಿಗೆ ಉರುಳಿದ ರಿಕ್ಷಾ: ಮಹಿಳೆ ಸ್ಥಳದಲ್ಲೇ ಸಾವು