Advertisement

ಬ್ಯಾಡ್ಜ್ ಕಡ್ಡಾಯ ಮಾನದಂಡ: ಸಹಸ್ರಾರು ಆಟೋ ಚಾಲಕರು ಸಹಾಯಧನ ವಂಚಿತರು!

11:18 AM May 11, 2020 | sudhir |

ಉಡುಪಿ: ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ಆಟೋ ರಿಕ್ಷಾ ಚಾಲಕರಿಗೆ ಸಹಾಯಧನ ಪಡೆಯಲು ಬ್ಯಾಡ್ಜ್ ಕಡ್ಡಾಯ ಎಂಬ ನಿಯಮದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಸ್ರಾರು ಆಟೋ ಚಾಲಕರು ಸೌಲಭ್ಯ ವಂಚಿತರಾಗುವ ಸಾಧ್ಯತೆಗಳಿವೆ.

Advertisement

ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 13 ಸಾವಿರ ಆಟೋ ರಿಕ್ಷಾ ಚಾಲಕರಿದ್ದಾರೆ. ಅವರ ಪೈಕಿ 6 ಸಾವಿರದಷ್ಟು ಮಂದಿ ಮಾತ್ರ ಬ್ಯಾಡ್ಜ್ ಹೊಂದಿದ್ದು, ಉಳಿದ 7 ಸಾವಿರ ಮಂದಿಯಲ್ಲಿ ಇಲ್ಲ. ದ.ಕ. ಜಿಲ್ಲೆಯಲ್ಲಿ 26 ಸಾವಿರಕ್ಕೂ ಅಧಿಕ ಅಟೋ ರಿಕ್ಷಾ ಚಾಲಕರಿದ್ದು 12,500ದಷ್ಟು ಮಂದಿ ಬ್ಯಾಡ್ಜ್ ಹೊಂದಿಲ್ಲ ಎನ್ನಲಾಗುತ್ತಿದೆ. ನಾನಾ ಕಾರಣಗಳಿಂದ ಅವರೆಲ್ಲ ಬ್ಯಾಡ್ಜ್ ಪಡೆದುಕೊಂಡಿಲ್ಲ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರಿಕ್ಷಾ ಚಾಲಕರಿಗೆ ಸರಕಾರವು ತಲಾ 5,000 ರೂ. ಸಹಾಯಧನ ನೀಡುತ್ತಿದೆ. ಆದರೆ ಅವರು ಚಾಲನಾ ಪರವಾನಿಗೆ ಮತ್ತು ಬ್ಯಾಡ್ಜ್ ಹೊಂದಿರಬೇಕು ಎಂಬ ನಿಯಮದಿಂದಾಗ ಅರ್ಧದಷ್ಟು ಮಂದಿ ಸೌಲಭ್ಯ ವಂಚಿತರಾಗುತ್ತಿದ್ದಾರೆ.

2020ರ ಮಾ. 1ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಪರವಾನಿಗೆಯನ್ನು ಸೇವಾ ಸಿಂಧು ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಜತೆಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ, ಬ್ಯಾಂಕ್‌ನ ಐಎಫ್ಎಸ್‌ಸಿ, ಎಂಐಸಿಆರ್‌ ಕೋಡ್‌ಗಳು, ವಾಹನದ ನೋಂದಣಿ ಸಂಖ್ಯೆ ನಮೂದಿಸಬೇಕು. ಅರ್ಜಿ ಸಲ್ಲಿಸುವ ವೇಳೆ ಚಾಲಕರು ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಪತ್ರವನ್ನೂ ನೀಡಬೇಕು.

ಸಚಿವರಿಂದ ಭರವಸೆ
ಸುಪ್ರೀಂ ಕೋರ್ಟ್‌ ಸಾರಿಗೆ ಇಲಾಖೆಗೆ 2017ರ ಜು. 3ರಂದು ಆದೇಶ ಸಂಖ್ಯೆ 5826ರ ಆದೇಶದಲ್ಲಿ ಬ್ಯಾಡ್ಜ್ ಕಡ್ಡಾಯವಲ್ಲ ಎಂದು ಉಲ್ಲೇಖಿಸಿದೆ. ಹೀಗಾಗಿ ಬ್ಯಾಡ್ಜ್ ರಹಿತರು ಕೂಡ ಸರಕಾರದ ಸಹಾಯಧನ ಪಡೆಯಲು ಅರ್ಹರು. ರಿಕ್ಷಾ ಪರವಾನಿಗೆ ಕೂಡ ತಾಲೂಕು ವ್ಯಾಪ್ತಿಯದ್ದಾಗಿರುತ್ತದೆ. ಆದ್ದರಿಂದ ಬ್ಯಾಡ್ಜ್ ರಹಿತರಿಗೂ ಸೌಲಭ್ಯ ಒದಗಿಸಬೇಕು ಎಂಬ ಆಗ್ರಹ ಗಳಿವೆ. ಬ್ಯಾಡ್ಜ್ ರಹಿತರರಿಗೆ ಸೌಲಭ್ಯ ನೀಡು ವುದು, ನಿಯಮಾವಳಿ ಸಡಿಲಿಸಬೇಕು ಇತ್ಯಾದಿ ಬೇಡಿಕೆಗಳ ಮನವಿಯನ್ನು ದ.ಕ. ಜಿಲ್ಲೆಯ ಗುತ್ತಿಗಾರು ಬಿಎಂಎಸ್‌ ಸಂಘಟನೆಯ ಚಂದ್ರಶೇಖರ್‌ ಕಡೋಡಿ ಅವರು ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದು, ಸರಕಾರದ ಮಟ್ಟದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ.

Advertisement

ಮಧ್ಯವರ್ತಿಗಳ ಹಾವಳಿ ತಡೆಯಿರಿ
ರಿಕ್ಷಾ ಚಾಲಕರು ದಾಖಲೆ ಇತ್ಯಾದಿ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಸಹಾಯಧನ ವಿಚಾರದಲ್ಲೂ ಮಧ್ಯವರ್ತಿಗಳು ಕೈಯಾಡಿಸುವ ಸಾಧ್ಯತೆ ಇದೆ. ಅವರು ಬಡ ಚಾಲಕರ ದಾರಿ ತಪ್ಪಿಸದಂತೆ ಮತ್ತು ಯೋಜನೆಯ ಹಣ ಪೂರ್ತಿಯಾಗಿ ಚಾಲಕರಿಗೇ ತಲುಪುವಂತೆ ಆಗಬೇಕೆಂದು ರಿಕ್ಷಾ ಚಾಲಕ ಯೂನಿಯನ್‌ಗಳು ಆಗ್ರಹಿಸಿವೆ.

ಅರ್ಜಿ ಸಲ್ಲಿಕೆಗೆ ಸೂಚಿಸಲಾಗಿದ್ದರೂ ಉಡುಪಿ ಜಿಲ್ಲೆಯಲ್ಲಿ ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ಪ್ರಕಟನೆ ಹೊರಡಿಸಿಲ್ಲ. ಬಹುತೇಕ ಚಾಲಕರು ಬಡವರು. ಬ್ಯಾಡ್ಜ್ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬ್ಯಾಡ್ಜ್ ರಹಿತರಿಗೂ ಸೌಲಭ್ಯ ವಿಸ್ತರಿಸಬೇಕು.
– ಸುರೇಶ್‌ ಅಮೀನ್‌,
ಕಾರ್ಯಾಧ್ಯಕ್ಷ , ಆಟೋ ಚಾಲಕರ ಸಂಘದ ಜಿಲ್ಲಾ ಒಕ್ಕೂಟ, ಉಡುಪಿ

ಆಟೋ ರಿಕ್ಷಾ ಚಾಲಕರ ಪೈಕಿ ಶೇ. 40ರಷ್ಟು ಮಂದಿ ಬ್ಯಾಡ್ಜ್ ಹೊಂದಿಲ್ಲ. ಹೀಗಾಗಿ ಅವರು ಸೌಲಭ್ಯದಿಂದ ವಂಚಿತರಾಗುತ್ತಾರೆ. ಬ್ಯಾಡ್ಜ್ ರಹಿತರಿಗೂ ಸಿಗುವಂತೆ ಒತ್ತಡ ತರಲಾಗುವುದು.
-ಭಾಸ್ಕರ ರಾವ್‌, ಜಿಲ್ಲಾಧ್ಯಕ್ಷರು, ಬಿಎಂಎಸ್‌ ಅಟೋ ಚಾಲಕರ ಸಂಘ ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next