ಬೆಂಗಳೂರು: ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಬಿಡಿ ಹಿರೇಮಠ ಅವರ ವಿರುದ್ಧ 20 ಶಾಸಕರು ದೂರನ್ನು ಕೊಟ್ಟಿದ್ದರ ಹಿನ್ನೆಲೆಯಲ್ಲಿ ಸಿಡಿದೆದ್ದಿದ್ದ ರಾಜ್ಯದಲ್ಲಿನ ಬೇಡ ಜಂಗಮರು, ನ್ಯಾಯಯುತ ಬೇಡಿಕೆಗಳಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಜೂನ್ 30ರಂದು ಉಗ್ರ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಇವರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರವು ಬೆಂಗಳೂರಿಗೆ ಆಗಮಿಸುತ್ತಿದ್ದ ಬಸ್ ಟ್ರಕ್ ಮತ್ತಿತರ ವಾಹನಗಳನ್ನು ವಿವಿಧ ಚೆಕ್ ಪೋಸ್ಟ್ ಗಳಲ್ಲಿ ತಡೆಯಲು ಪೊಲೀಸರಿಗೆ ಮೌಖಿಕ ನಿರ್ದೇಶನ ನೀಡಿತ್ತು. ಇದರಿಂದ ರೊಚ್ಚಿಗೆದ್ದ ಬೇಡ ಜಂಗಮರು ಆಯಾ ಸ್ಥಳದಲ್ಲಿಯೇ ಚೆಕ್ ಪೋಸ್ಟ್ ಗಳಲ್ಲಿ ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಪ್ರತಿಭಟನಾ ಸ್ಥಳವಾದ ಫ್ರೀಡಂ ಪಾರ್ಕಿ ಗೆ ಮನವಿ ಸ್ವೀಕರಿಸಲು ಜೂನ್ 30ರಂದು ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು ಉಪವಾಸ ಕುಳಿತಿದ್ದ ಮಠಾಧೀಶರನ್ನು ಉದ್ದೇಶಿಸಿ ಮಾತನಾಡಿ, ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಡೆದಿರುವುದು ಸರಕಾರದ ಗಮನಕ್ಕೆ ಬಂದಿದ್ದು ಕ್ಷಮೆಯನ್ನು ಯಾಚಿಸಿದ್ದರು ಮತ್ತು ಬೇಡಗಂಗಮರಿಗೆ ಮಾತ್ರವಲ್ಲದೆ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯದವರಿಗೆ ಅನ್ವಯವಾಗುವಂತಹ ಸಾಮಾನ್ಯ ಸುತ್ತೋಲೆ ಆದೇಶವನ್ನು ಜುಲೈ 1ರ ಸಂಜೆ ಒಳಗಾಗಿ ಹೊರಡಿಸುವುದಾಗಿ ಸರ್ಕಾರದ ಪರವಾಗಿ ವಾಗ್ದಾನ ಮಾಡಿದ್ದರು.
ಈ ಬಗ್ಗೆ ವಿಶ್ವಾಸ ಹೊಂದಿದ್ದ ಬೇಡ ಜಂಗಮರು ಆದೇಶ ಕೈ ಸೇರುವವರೆಗೂ ಹೋರಾಟವನ್ನು ಮುಂದುವರಿಸಿದ್ದರು. ಜುಲೈ 2ರ ಸಂಜೆವರೆಗೂ ಯಾವುದೇ ಸುತ್ತೋಲೆ, ಆದೇಶವು ಸರಕಾರದಿಂದ ಬಿಡುಗಡೆಯಾಗದಿದ್ದ ಕಾರಣ, ಮಾತು ತಪ್ಪಿದ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಹಲವು ಮಠಾಧೀಶರು, ಒಕ್ಕೂಟದ ಅಧ್ಯಕ್ಷರು ಮತ್ತು ಬೇಡಜಂಗಮ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಇಂದು ತುರ್ತು ಸಭೆಯನ್ನು ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ.
ಸಭೆಯಲ್ಲಿ ಮಠಾಧೀಶರುಗಳಾದ ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಮಹಾಸ್ವಾಮಿಗಳು ಮತ್ತು ಒಕ್ಕೂಟದ ಅಧ್ಯಕ್ಷರಾದ ಬಿಡಿ ಹಿರೇಮಠ, ಜಿಎಂ ವಿಶ್ವನಾಥ ಸ್ವಾಮಿ, ಡಾ. ಎಂಪಿ ದಾರಕೇಶ್ವರಯ್ಯ, ವೀರಣ್ಣ ಹಿರೇಮಠ, ಎಂ ಮುದ್ದಯ್ಯ, ಸುಜಾತ ಮಠದ, ಹೇಮಲತಾ, ಪಂಕಜಾಕ್ಷಿ ಮುಂತಾದವರು ಹಾಜರಿದ್ದರು.