Advertisement
ಮಲಪ್ರಭಾ ನದಿಯ ದಡದಲ್ಲಿನ ತಳಕವಾಡ, ಆಲೂರ ಎಸ್‌ಕೆ, ಕಳಸ, ಕಿತ್ತಲಿ, ಗೋವನಕೊಪ್ಪ, ಬೀರನೂರ, ಹಾಗನೂರ, ಕರ್ಲಕೊಪ್ಪ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಪ್ರವಾಹ ನೀರು ಹೆಚ್ಚಿರುವ ಹೆಬ್ಬಳ್ಳಿ ಗ್ರಾಮಕ್ಕೆ ಕಂದಾಯ ಇಲಾಖೆ ನಿರೀಕ್ಷಕ ವಿ.ಎ.ವಿಶ್ವಕರ್ಮ ಭೇಟಿ ನೀಡಿ ಪರಿಶೀಲಿಸಿ ಗ್ರಾಮದ ಸುಮಾರು 15 ಕುಟುಂಬಗಳ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಪ್ರವಾಹದ ನೀರು ಹೆಚ್ಚುತ್ತಿರುವ ಕಾರಣ ಮುಂಜಾಗೃತ ಕ್ರಮವಾಗಿ ನದಿ ಪಾತ್ರದ ಜನರು, ಜಾನುವಾರುಗಳ ಸಹಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬಾದಾಮಿ ತಹಶೀಲ್ದಾರ್ ಮಧುರಾಜ ಕೂಡಲಗಿ ಸೂಚಿಸಿದ್ದಾರೆ.
ಪ್ರವಾಹದ ನೀರು ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಹೆಬ್ಬಳ್ಳಿ, ಮುಮರಡ್ಡಿಕೊಪ್ಪ ಸೇರಿ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಮೆಕ್ಕೆಜೋಳ, ಹತ್ತಿ, ಕಬ್ಬು, ಸಜ್ಜೆ, ಈರುಳ್ಳಿ ಸೇರಿ ಸಾಕಷ್ಟು ಬೆಳೆಗಳು ಜಲಾವೃತಗೊಂಡಿರುವುದರಿಂದ ರೈತರು ಬೆಳೆದ ಬೆಳೆಯೂ ‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಾದಾಮಿ ನರಗುಂದ ತಾಲೂಕುಗಳಿಗೆ ಸಂಪರ್ಕಿಸುವ ಮಲಪ್ರಭಾ ನದಿಯ ಗೋವನಕೊಪ್ಪ ಹಳೆ ಸೇತುವೆ ಹಾಗೂ ಕಿತ್ತಲಿ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದ್ದು. ಕೆಲವು ಗ್ರಾಮದ ಜನರು ಸುಮಾರು 20 ಕಿ.ಮೀ ಸುತ್ತುವರಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದ ಜಲಾಶಯ ಭರ್ತಿಯಾಗಿದ್ದು, ನೀರಿನ ಒಳ ಹರಿವು 13,055 ಕ್ಯೂಸೆಕ್ ಮಲಪ್ರಭಾ ನದಿಗೆ 8,194 ಕ್ಯೂಸೆಕ್ ನೀರು ಬಿಡಲಾಗಿದೆ. ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಹೆಚ್ಚುತ್ತಿದೆ.