Advertisement

ಬತ್ತಿ ಬರಿದಾದ ಪ್ರವಾಸಿ ತಾಣ ಅಗಸ್ತ್ಯತೀರ್ಥ !

07:00 AM Sep 22, 2018 | |

ಬಾದಾಮಿ: ವಿಶ್ವದ ಗಮನ ಸೆಳೆದಿರುವ ಪ್ರವಾಸಿ ತಾಣ, ಹಲವಾರು ಚಲನಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿರುವ ಇಲ್ಲಿನ ಅಗಸ್ತ್ಯತೀರ್ಥ ಹೊಂಡ ಬರೋಬ್ಬರಿ 46 ವರ್ಷಗಳ ಬಳಿಕ ಬತ್ತಿ ಬರಿದಾಗಿದೆ.

Advertisement

ಪಟ್ಟಣದ ಸುತ್ತಲಿನ ಸಿ ಆಕಾರದ ಗುಡ್ಡಗಳ ಮಧ್ಯೆ ಇರುವ ಅಗಸ್ತ್ಯತೀರ್ಥ  ಹೊಂಡಕ್ಕೆ ಇತಿಹಾಸವಿದೆ. ಈ ಹೊಂಡದಲ್ಲೇ ಬಾದಾಮಿ ಚಾಲುಕ್ಯ ಅರಸರ ಕಾಲದ ಕಲ್ಲಿನಲ್ಲಿ ನಿರ್ಮಿಸಲಾದ ಸುಂದರ ಭೂತನಾಥ ದೇವಾಲಯವಿದ್ದು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಪಕ್ಕದಲ್ಲೇ ಮೇಣಬಸದಿ ಇದ್ದು, ಬಾದಾಮಿಗೆ ಬರುವ ಸಾವಿರಾರು ಪ್ರವಾಸಿಗರು ಅಗಸ್ತ್ಯತೀರ್ಥ ಹೊಂಡ, ಭೂತನಾಥ ದೇವಾಲಯ, ಮ್ಯೂಜಿಯಂ (ವಸ್ತು ಸಂಗ್ರಹಾಲಯ), ಮೇಣಬಸದಿ ನೋಡಿ ಆನಂದ ಪಡುತ್ತಾರೆ.

ಕ್ರಿಕೆಟ್‌ ಮೈದಾನವಾಯ್ತು: 1972ರಲ್ಲಿ ತೀವ್ರ ಬರ ಆವರಿಸಿದ್ದಾಗ ಅಗಸ್ತ್ಯತೀರ್ಥ  ಹೊಂಡ ಬತ್ತಿತ್ತು. ಅದಾದ ಬಳಿಕ ಎಷ್ಟೇ ಮಳೆ ಕೊರತೆ ಕಂಡು ಬಂದರೂ ಹೊಂಡ ಒಮ್ಮೆಯೂ ಬತ್ತಿರಲಿಲ್ಲ. ಆದರೀಗ ಸಂಪೂರ್ಣ ಬತ್ತಿದ್ದು, ಭೂತನಾಥ ದೇವಾಲಯ ಎದುರು ಭಣಗುಡುತ್ತಿದೆ. ಅಗಸ್ತ್ಯತೀರ್ಥ ಹೊಂಡದ ಆವರಣವನ್ನು ಯುವಕರು ಕ್ರಿಕೆಟ್‌ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ.

ಮಳೆ ಆದ್ರೆ ನೀರು: ಅಗಸ್ತ್ಯತೀರ್ಥ  ಹೊಂಡಕ್ಕೆ ಕೆರೆ ತುಂಬುವಂತಹ ಯೋಜನೆಗಳು ಕೈಗೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಅವಕಾಶ ಇರುವ ಬನಶಂಕರಿ ಹೊಂಡವನ್ನೇ ತುಂಬಿಸಲು ಅಧಿಕಾರಸ್ಥರು ಮುಂದಾಗಿಲ್ಲ. ಇನ್ನು ಸಣ್ಣ ಕೆಲಸಕ್ಕೂ ತಕರಾರು ತೆಗೆಯುವ ಎಎಸ್‌ಐ (ಭಾರತೀಯ ಪುರಾತತ್ವ ಇಲಾಖೆ), ಈ ಹೊಂಡಕ್ಕೆ ನೀರು ತುಂಬಿಸಲು 3 ಅಡಿಯ ಪೈಪ್‌ ಹಾಕಲು ಅನುಮತಿ ಕೊಡಲ್ಲ. ಅಲ್ಲದೇ ಗುಹಾಂತರ ದೇವಾಲಯಗಳ ಮಾರ್ಗವಾಗಿ, ಅಗಸ್ತ್ಯತೀರ್ಥ ಹೊಂಡಕ್ಕೆ  ಪೈಪ್‌ಲೈನ್‌ ಮಾಡಲು ಬೇರೆ ಮಾರ್ಗವಿಲ್ಲ. ಹೀಗಾಗಿ ಕೆರೆ ತುಂಬುವಂತಹ ಯೋಜನೆ ಅಳವಡಿಸುವುದು ದುಸ್ಸಾಹಸದ ಕೆಲಸ ಎನ್ನುತ್ತಾರೆ ಪ್ರಜ್ಞಾವಂತರು.

ಸಿ ಆಕಾರದ ಗುಡ್ಡಗಳೇ ಆಸರೆ: ಅಗಸ್ತ್ಯತೀರ್ಥ ಹೊಂಡದ ಸುತ್ತಲೂ ಸಿ ಆಕಾರದ ಗುಡ್ಡಗಳಿವೆ. ಅದರಲ್ಲಿ ಪೂರ್ವ ಭಾಗದ ಮಹಾಕೂಟ ಭಾಗದ ಗುಡ್ಡ (ಕಾರಂಜಿ)ಗಳು ಸಿ ಆಕಾರದಲ್ಲಿವೆ. ಜತೆಗೆ ಅಕ್ಕ-ತಂಗಿ ದಿಡಗು ಮೂಲಕ ಈ ಹೊಂಡಕ್ಕೆ ನೀರು ಬರುತ್ತದೆ. ಅದು ಬಾದಾಮಿ ಸುತ್ತಲಿನ ಈ ಗುಡ್ಡಗಳ ಮೇಲೆ ಮಳೆ ಆದರೆ ಮಾತ್ರ. ಅದು ಅಕ್ಕ- ತಂಗಿ ದಿಡಗು, ಮಹಾಕೂಟ ಭಾಗದ ಗುಡ್ಡಗಳ ಮೂಲಕ ಬರುವ ಕಾರಂಜಿ ನೀರು ಹೊರತುಪಡಿಸಿದರೆ ಬೇರೆ ಜಲಮೂಲಗಳೇ ಇಲ್ಲ.

Advertisement

ಅಗಸ್ತ್ಯತೀರ್ಥ ಹೊಂಡ ಅದ್ಭುತ ಹಾಗೂ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ. ನಮ್ಮ ಹಿರಿಯರು ಹೇಳುವಂತೆ ಇದು 1972ರಲ್ಲಿ ಬತ್ತಿತ್ತು. ಆ ಬಳಿಕ ಒಮ್ಮೆಯೂ ಬತ್ತಿರಲಿಲ್ಲ. ಈ ವರ್ಷ ಸಂಪೂರ್ಣ ಖಾಲಿಯಾಗಿದೆ. ಇದಕ್ಕೆ ಕೆರೆ ತುಂಬುವಂತಹ ಯೋಜನೆ ಕೈಗೊಳ್ಳುವುದು ದೂರದ ಮಾತು. ಹೊಂಡ ತುಂಬಲು ಮಳೆರಾಯನ ಕೃಪೆಯೇ ಬೇಕು.
– ಇಷ್ಟಲಿಂಗ ಶಿರಸಿ, ಸಾಮಾಜಿಕ ಹೋರಾಟಗಾರ, ಬಾದಾಮಿ

– ಶಶಿಧರ ವಸ್ತ್ರದ

Advertisement

Udayavani is now on Telegram. Click here to join our channel and stay updated with the latest news.

Next