Advertisement

ಬಾಗಿಲು ತೆರೆದ ಕೇದಾರನಾಥ-ಬಾದಾಮಿ ಶುಗರ್ಸ್‌: ದಶಕದಿಂದ ಸ್ತಬ್ಧಗೊಂಡ ಕಾರ್ಖಾನೆಗಳಿಗೆ ಮರುಜೀವ

11:32 AM Jan 10, 2021 | Team Udayavani |

ಬಾಗಲಕೋಟೆ: “ಸಕ್ಕರೆ ಕಾರ್ಖಾನೆ ಅಥವಾ ಯಾವುದೇ ಕಾರ್ಖಾನೆಗಳು ಬಾದಾಮಿ ತಾಲೂಕಿಗೆ ಆಗಿ ಬರಲ್ಲ’ ಎಂಬ ಶಾಪ
ಕೊನೆಗೂ ವಿಮೋಚನೆಯಾಗಿದ್ದು, ಬರೋಬ್ಬರಿ ಒಂದು ದಶಕದಿಂದ ಸ್ತಬ್ಧಗೊಂಡಿದ್ದ ಎರಡು ಕಾರ್ಖಾನೆಗಳಿಗೆ ಮರುಜೀವ ಬಂದಿದೆ. ಹೌದು. ನೀರಾವರಿ, ಉದ್ಯಮ, ಕಾರ್ಖಾನೆ ವಿಷಯದಲ್ಲಿ ಬಾದಾಮಿ ತಾಲೂಕಿನ ಜನರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಈ ಭಾಗದ ರೈತರೂ ಕಬ್ಬು ಬೆಳೆದು ಕೈ ತುಂಬಾ ಹಣ ಮಾಡಿಕೊಳ್ಳಲೆಂಬ ಉದ್ದೇಶದಿಂದ ಆರಂಭಗೊಂಡ ಎರಡು ಕಾರ್ಖಾನೆಗಳು, ದಶಕದಿಂದ ಬಾಗಿಲು ಹಾಗಿದ್ದವು. ನಿರಾಣಿ ಉದ್ಯಮ ಸಮೂಹದ ಪ್ರಯತ್ನದಿಂದ ಇದೀಗ ಆ ಎರಡೂ ಕಾರ್ಖಾನೆಗಳ ಬಾಗಿಲು ತೆರೆದಿದ್ದು, ಬಾದಾಮಿ ತಾಲೂಕಿಗೂ ಸಿಹಿ ಸಿಗಲಿದೆ.

Advertisement

ದಶಕದ ಹಿಂದೆ ಸ್ತಬ್ಧ: ಬಾದಾಮಿ ತಾಲೂಕಿನ ಜಮ್ಮನಕಟ್ಟಿಯಲ್ಲಿ 2500 ಮೆ.ಟನ್‌ ಕಬ್ಬು ನುರಿಸುವ ಸಾಮರ್ಥ್ಯದ ಸಕ್ಕರೆ ಕಾರ್ಖಾನೆ ಬಾದಾಮಿ ಶುಗರ್ ಆರಂಭಗೊಂಡಿತ್ತು. ಆದರೆ, ಇದು ಕಳೆದ 2008ರಲ್ಲೇ ಹಲವು ಆರ್ಥಿಕ ಮುಗ್ಗಟ್ಟು, ವಿವಿಧ ಕಾರಣಗಳಿಂದ ಸ್ತಬ್ಧಗೊಂಡಿತ್ತು. ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರು 2014ರಲ್ಲಿ ಈ ಕಾರ್ಖಾನೆ ಪುನಾರಂಭಿಸುವ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಅದನ್ನು ಪುನಾರಂಭಿಸುವ ಧೈರ್ಯವನ್ನೂ ತೋರಲಿಲ್ಲ. ಆದರೆ ನಿರಾಣಿ ಉದ್ಯಮ ಸಮೂಹದ ಸಂಸ್ಥಾಪಕದ ಅಧ್ಯಕ್ಷ, ಶಾಸಕ ಮುರುಗೇಶ ನಿರಾಣಿ ಈ ಕಾರ್ಖಾನೆಯನ್ನು ತಮ್ಮ ಒಡೆತನಕ್ಕೆ ಪಡೆದು ಸುಮಾರು 20 ಕೋಟಿ ತುರ್ತು ಅನುದಾನ ಖರ್ಚು ಮಾಡಿ, ಬಾದಾಮಿ ಶುಗರ್ ಪುನಃ ಆರಂಭಿಸುವ ಧೈರ್ಯ ಮಾಡಿದ್ದಾರೆ. ಹತ್ತು ವರ್ಷದಿಂದ ತುಕ್ಕು ಹಿಡಿದ ಕಾರ್ಖಾನೆಯನ್ನು ಪುನಃ ಆರಂಭಿಸಿದ್ದಾರೆ. ಹೀಗಾಗಿ ಬಾದಾಮಿ ತಾಲೂಕಿನ ಹಲವು ಗ್ರಾಮಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕಬ್ಬು ಬೆಳೆಯುವ ರೈತರಿಗೆ ಖುಷಿ ತಂದಿದೆ.

ಇದನ್ನೂ ಓದಿ:ನಾಪತ್ತೆಯಾಗಿದ್ದ ಇಂಡೋನೇಷ್ಯಾ ವಿಮಾನದ ಅವಶೇಷಗಳು, ಮೃತದೇಹ ಸಮುದ್ರದಲ್ಲಿ ಪತ್ತೆ!

ಕೇದಾರನಾಥ ಶುಗರ್ ಆರಂಭ: ಇನ್ನು ಹಲವು ವಿವಾದಗಳಲ್ಲಿದ್ದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಕೇದಾರನಾಥ ಶುಗರ್ ಕೂಡ, ಕಳೆದ 2012ರಲ್ಲೇ ಸ್ಥಗಿತಗೊಂಡಿತ್ತು. ಉದ್ಯಮಿ ಮುಂಬೈನ ವಿಜಯಸಿಂಹ ಅಪರಾದ ಸ್ಥಳೀಯ ಕೆಲ ಉದ್ಯಮಿಗಳ ಸಹಕಾರದೊಂದಿಗೆ ಈ ಕಾರ್ಖಾನೆ ಆರಂಭಿಸಿದ್ದರು. ಹಣಕಾಸು ಮುಗ್ಗಟ್ಟು ಹಾಗೂ ಹಲವು ಸಮಸ್ಯೆಯಿಂದ
ಆರಂಭಗೊಂಡ ಮೊದಲ ವರ್ಷವೇ ಈ ಕಾರ್ಖಾನೆಯೂ ಬಂದ್‌ ಆಗಿತ್ತು. ಹೀಗಾಗಿ ಕಬ್ಬು ಪೂರೈಸಿದ ರೈತರು, ನಮ್ಮ ತಾಲೂಕಿಗೆ
ಕಬ್ಬಿನ ಯೋಗವಿಲ್ಲ. ಕಾರ್ಖಾನೆಗಳು ಆಗಿ ಬರಲ್ಲ. ಈ ಕಬ್ಬಿನ ಸಹವಾಸವೇ ಸಾಕೆಂಬ ತೀರ್ಮಾನಕ್ಕೆ ಬಂದಿದ್ದರು. ರೈತರ ಈ
ಮಾತಿನಂತೆ ಬಾದಾಮಿ ತಾಲೂಕಿನಲ್ಲಿ ಆರಂಭಿಸಿದ ಯಾವ ಕಾರ್ಖಾನೆಗಳೂ ಜನಪರ-ರೈತಪರವಾಗಿ ಮುಂದುವರಿಯಲಿಲ್ಲ.
ಆರಂಭಗೊಂಡ ವೇಗದಷ್ಟೇ ಸ್ಥಗಿತಗೊಂಡಿದ್ದವು. ಆದರೆ ಕೇದಾರನಾಥ ಶುಗರ್ ಕೂಡ ತಮ್ಮ ಒಡೆತನಕ್ಕೆ ಪಡೆದ ನಿರಾಣಿ ಕೇವಲ
ಎರಡೇ ತಿಂಗಳಲ್ಲಿ ಸುಮಾರು 60 ಕೋಟಿ ಖರ್ಚು ಮಾಡಿ ಇಡೀ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿದ್ದಾರೆ.

1200 ಜನ ಸ್ಥಳೀಯರಿಗೆ ಉದ್ಯೋಗ: ಸದ್ಯ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಹಾಗೂ ಬಾದಾಮಿಯ ಬಾದಾಮಿ ಶುಗರ್ ಅನ್ನು ನಿರಾಣಿ ಉದ್ಯಮ ಸಮೂಹದಿಂದ ಪುನಃ ಆರಂಭಿಸಿದ್ದು, ಎರಡೂ ಕಾರ್ಖಾನೆಯಲ್ಲಿ ಒಟ್ಟು ಸುಮಾರು 1200 ಜನ ಸ್ಥಳೀಯರಿಗೆ ಉದ್ಯೋಗ ದೊರೆತಿದೆ. ಅಲ್ಲದೇ 200 ಜನ ವಾಹನ ಚಾಲಕರು (ಟ್ರ್ಯಾಕ್ಟರ್‌-ಇತರೆ ವಾಹನ), 5 ಸಾವಿರ ಜನ ಕಬ್ಬು ಕಡಿಯುವ ಕಾರ್ಮಿಕರು ಸೇರಿದಂತೆ ಒಟ್ಟಾರೆ ಸ್ಥಳೀಯ ಸುಮಾರು 12 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ಮುಖ್ಯವಾಗಿ ಮುಧೋಳ, ಜಮಖಂಡಿ ಭಾಗದಲ್ಲಿ 20 ವರ್ಷಗಳ ಹಿಂದೆಯೇ ವಾಣಿಜ್ಯ ಬೆಳೆಯ ಮೂಲಕ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಂಡ ರೈತರ ಮಾದರಿಯಲ್ಲೇ ಇನ್ನು ಬಾದಾಮಿ ತಾಲೂಕಿನ ರೈತರೂ ಆರ್ಥಿಕ ಸುಧಾರಣೆಗೆ ಅನುಕೂಲವಾಗಲಿದೆ ಎಂಬುದು ಇಲ್ಲಿನ ಪ್ರಜ್ಞಾವಂತರ ಆಶಯ.

Advertisement

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next