Advertisement

ಬಣ್ಣದ ವೈಭವ-2; ವಿದೇಶಿಗರಿಗೂ ಮೆಚ್ಚಿನದ್ದಾಗಿದ್ದವು ಬಡಗು ತಿಟ್ಟಿನ ರಾಕ್ಷಸ ವೇಷಗಳು!

06:07 PM Sep 14, 2022 | Team Udayavani |

ಶ್ರೀಮಂತವಾಗಿರುವ ಬಡಗು ತಿಟ್ಟು ಯಕ್ಷಗಾನ ರಂಗದಲ್ಲಿ “ಬಣ್ಣದ ವೇಷ” ವೈಭವ ಕಳೆದುಕೊಳ್ಳುತ್ತಿರುವುದೇಕೆ?ಮೂಲ ಸ್ವರೂಪ ಕಳೆದುಕೊಂಡಿದ್ದೇಕೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಗತ ವೈಭವ ಮತ್ತೆ ಮರುಕಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

Advertisement

ವಿಮರ್ಶಕರು, ಹಿರಿಯ ಪ್ರೇಕ್ಷಕರು ಮತ್ತು ವಿಧ್ವಾಂಸರ ಪ್ರಕಾರ ಬಡಗು ತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೈಭವ ವಿಜೃಂಭಿಸಿದ ಕಾಲವೊಂದಿತ್ತು. ಮೇಳದಲ್ಲಿ ಬಣ್ಣದ ವೇಷಧಾರಿಗೆ ಚೌಕಿಯಲ್ಲಿ(ಮೇಕಪ್ ರೂಮ್) 2ನೇ ವೇಷಧಾರಿ (ಪ್ರಧಾನ ವೇಷಧಾರಿ) ಎದುರಿಗೆ ಪೆಟ್ಟಿಗೆ ಇಟ್ಟು ಕುಳಿತು ಕೊಳ್ಳುವ ಅವಕಾಶ ಇತ್ತು. ಅಷ್ಟೊಂದು ಮಹತ್ವ ಮತ್ತು ಗೌರವ ರಾಕ್ಷಸ ಪಾತ್ರಗಳನ್ನು ಮಾಡುವ ವೇಷಧಾರಿಗೆ ನೀಡಲಾಗಿತ್ತು. ಈಗಲೂ ಕೆಲ ಮೇಳಗಳಲ್ಲಿ ಆ ಜಾಗ ರಾಕ್ಷಸ ಪಾತ್ರಗಳನ್ನು ಮಾಡುವ ಕಲಾವಿದರಿಗೆ ಮೀಸಲಿಡಲಾಗಿದೆ.

ಪೌರಾಣಿಕ ಕಥಾನಕಗಳೇ ಯಕ್ಷಗಾನದಲ್ಲಿ ಹೆಚ್ಚು ಪ್ರದರ್ಶನಗೊಳ್ಳುತ್ತಿದ್ದುದರಿಂದ ರಾಕ್ಷಸ ಪಾತ್ರಗಳು ರಂಗದಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಯಕ್ಷಗಾನೀಯ ಪರಂಪರೆಯ ಎಲ್ಲರ ಗಮನ ಸೆಳೆಯುವ, ಬೆರಗು ಮೂಡಿಸುವ ವೇಷಗಳಿಗೆ ವಿಶೇಷ ಪ್ರಾಧಾನ್ಯತೆ ಇತ್ತು.

ಕೇವಲ ಕರಾವಳಿಯ ಯಕ್ಷಗಾನಾಭಿಮಾನಿಗಳು ಮಾತ್ರವಲ್ಲದೆ ವಿದೇಶಿಗರೂ ಬಣ್ಣದ ವೇಷಗಳಿಗೆ ಮಾರು ಹೋಗಿದ್ದರು. ಯಕ್ಷಗಾನಕ್ಕೆ ಹೊಸ ಮೆರುಗು ನೀಡಿದ ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತ ಅವರ ನಿರ್ದೇಶನದಲ್ಲಿ ಉಡುಪಿ ಯಕ್ಷಗಾನ ಕೇಂದ್ರದವರು ವಿದೇಶದಲ್ಲಿ ಪ್ರದರ್ಶನ ನೀಡಿದ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನಗಳಲ್ಲಿ ಬಣ್ಣದ ವೇಷಗಳಿಗೂ ಪ್ರಾಮುಖ್ಯತೆ ನೀಡಲಾಗಿತ್ತು. ಆ ವೇಷಗಳು ವಿಶೇಷವಾಗಿ ವಿದೇಶಿಗರಿಗೆ ಇತರೆಲ್ಲಾ ವೇಷಗಳಿಂದ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಬಣ್ಣದ ವೇಷದ ಹೆಚ್ಚುಗಾರಿಕೆ ಎನ್ನಬಹುದಲ್ಲವೇ. ಡಾ. ಕಾರಂತರ ತಂಡದಲ್ಲಿ ವಿದೇಶಗಳಲ್ಲಿ ಬಣ್ಣದ ವೇಷಗಳ ಪ್ರದರ್ಶನ ನೀಡಿದ ಹಿರಿಯ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೇತ್ರಿ ಮಾಧವ ನಾಯ್ಕರು ಈ ಅನುಭವ ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ರಾಮಾಯಣದ ಪ್ರಸಂಗಗಳಲ್ಲಿ ಬರುವ ರಾವಣನ ಪಾತ್ರ ಬಡಗುತಿಟ್ಟು ಯಕ್ಷಗಾನದಲ್ಲಿ ಘೋರ ರೂಪವಾದ ರಾಜ ಬಣ್ಣವಾಗಿತ್ತು. ಇಂದಿಗೂ ತೆಂಕು ತಿಟ್ಟಿನಲ್ಲಿ ರಾವಣನ ಪಾತ್ರವನ್ನು ಪ್ರಮುಖ ಬಣ್ಣದ ವೇಷಧಾರಿ ಮಾಡುವ ಕ್ರಮ ಉಳಿದುಕೊಂಡಿದೆ. ಬಡಗಿನಲ್ಲಿ ಸಂಘ ಸಂಸ್ಥೆಗಳು ಮಾಡುವ ಪ್ರಯೋಗಗಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬಣ್ಣದ ವೇಷಗಳ ಛಾಯೆಯನ್ನು ಕಾಣಬಹುದಾಗಿದೆ.ತಿರುಗಾಟದ ಮೇಳಗಳಲ್ಲಿ ಬಣ್ಣದ ರಾವಣ ವೇಷ ಮರೆಯಾಗಿದೆ ಮಾತ್ರವಲ್ಲದೆ ಪಾರಂಪರಿಕ ಬಣ್ಣದ ವೇಷಗಳು ಮರೆಯಾಗಿವೆ ಎನ್ನುವುದು ವಿಪರ್ಯಾಸ.

Advertisement

ಬಡಗುತಿಟ್ಟಿನಲ್ಲಿ ಪ್ರಸಿದ್ಧ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರು ಬಣ್ಣದ ವೇಷಗಳ ದೈತ್ಯರಾಗಿದ್ದ ಸಕ್ಕಟ್ಟು ಲಕ್ಷ್ಮೀ ನಾರಾಯಣ ಅವರ ಒಡನಾಡಿಯಾಗಿ ಹಲವು ಪಾರಂಪರಿಕ ಅಂಶಗಳನ್ನು, ಬಣ್ಣಗಾರಿಕೆ ಅಂಶಗಳನ್ನು, ಬಣ್ಣದ ವೇಷಗಳ ಸೂಕ್ಷ್ಮತೆಯನ್ನು ತಿಳಿದುಕೊಂಡಿದ್ದರು. ಹಲವು ರಾಜ ಬಣ್ಣ, ಹೆಣ್ಣು ಬಣ್ಣದ ವೇಷಗಳಿಗೆ ಜೀವ ತುಂಬಿದ್ದರು.

ಬಣ್ಣದ ವೈಭವ ಮುಂದುವರಿಯುವುದು….

*ವಿಷ್ಣುದಾಸ್ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next