Advertisement

ಬ್ಯಾಡಗಿ ಒಣಮೆಣಸು ಇನ್ನಷ್ಟು ಖಾರ

12:55 AM Jan 13, 2020 | Sriram |

ಮಂಗಳೂರು: “ಕೆಂಪು ಸುಂದರಿ’ ಬ್ಯಾಡಗಿ ಒಣ ಮೆಣಸಿನ ಬೆಲೆ ಒಂದು ವಾರದಿಂದೀಚೆಗೆ ಬಹಳಷ್ಟು ಏರಿಕೆ ಯಾಗಿದ್ದು, ಗ್ರಾಹಕರ ಪಾಲಿಗೆ ಇನ್ನಷ್ಟು ಖಾರವಾಗಿದೆ. ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ 50 ರೂ. ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ 10ರಿಂದ 20 ರೂ.ಗಳಷ್ಟು ಏರಿಕೆಯಾಗಿದೆ.

Advertisement

ಚಿಲ್ಲರೆ ಮಾರಾಟ ಅಂಗಡಿಯಲ್ಲಿ ವಾರದ ಹಿಂದೆ 160 ರೂ.ಗೆ ಮಾರಾಟ ಆಗುತ್ತಿದ್ದ ಬ್ಯಾಡಗಿ ಮೆಣಸಿನ ಬೆಲೆ ಈಗ 200 ರೂ.ಗೇರಿದೆ. ಸಗಟು ಮಾರಾಟ ಮಳಿಗೆಯಲ್ಲಿ 190 ರೂ. ಇದೆ. ಕೇವಲ ಒಂದೇ ದಿನದಲ್ಲಿ 10 ರೂ. ಹೆಚ್ಚಳವಾಗಿದೆ.

ಸಾಮಾನ್ಯ ಮೆಣಸಿಗಿಂತ ಆಕಾರ ದಲ್ಲಿ ಉದ್ದವಾಗಿರುವ ಬ್ಯಾಡಗಿ ಮೆಣಸಿಗೆ ಬೆಲೆ ಜಾಸ್ತಿಯಾದ ಹಿನ್ನೆಲೆ ಯಲ್ಲಿ ಗಿಡ್ಡ ಮೆಣಸು (ರಾಮ ನಗರ), ಕಾಶ್ಮೀರಿ ಮೆಣಸು ಮತ್ತು ಗುಂಟೂರು ಒಣಮೆಣಸಿಗೂ ಬೆಲೆ ಹೆಚ್ಚಳವಾಗಿದೆ.

ಮೆಣಸಿನ ಬೆಲೆ ಏರಿಕೆಗೆ ನೈಜ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ. ವರ್ತಕರಲ್ಲಿಯೂ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

ಗೃಹಿಣಿಯರಿಗೆ ಪ್ರಿಯ
ಸಾಮಾನ್ಯವಾಗಿ ಬ್ಯಾಡಗಿ ಮೆಣಸು ಖಾರ ಕಡಿಮೆ, ಆದರೆ ಹೆಚ್ಚು ರುಚಿಕರ. ಅಲ್ಲದೆ ಈ ಮೆಣಸನ್ನು ಉಪಯೋಗಿಸಿದರೆ ಮಸಾಲೆಯ ಪ್ರಮಾಣ ಜಾಸ್ತಿ ಆಗುತ್ತದೆ ಮತ್ತು ಮಸಾಲೆಗೆ ಉತ್ತಮ ಬಣ್ಣವೂ ಬರುತ್ತದೆ ಎನ್ನುವುದು ಗೃಹಿಣಿಯರ ನಂಬಿಕೆ. ಹಾಗಾಗಿ ಕರಾವಳಿಯಲ್ಲೂ ಬ್ಯಾಡಗಿ ಮೆಣಸಿಗೆ ಬೇಡಿಕೆ ಜಾಸ್ತಿಯಿದೆ. ಮಸಾಲೆಯ ಖಾರವನ್ನು ಸರಿದೂಗಿಸಲು ಬಹಳಷ್ಟು ಮಂದಿ ಗೃಹಿಣಿಯರು ಬ್ಯಾಡಗಿ ಮೆಣಸಿನ ಜತೆಗೆ ಬೆರಳೆಣಿಕೆಯ ಗಿಡ್ಡ ಮೆಣಸನ್ನು (ರಾಮ ನಗರ) ಮಿಶ್ರಣ ಮಾಡುತ್ತಾರೆ. ಆದರೆ ಈಗ ಕಡಿಮೆ ಖಾರದ ಬ್ಯಾಡಗಿ ಮೆಣಸು ಬೆಲೆ ಏರಿಕೆಯ ಮೂಲಕ ತನ್ನ ಖಾರ ವೃದ್ಧಿಸಿಕೊಂಡಿದೆ. ಮಂಗಳೂರು ಮಾತ್ರವಲ್ಲದೆ ಇತರೆಡೆಯೂ ಬ್ಯಾಡಗಿ ಮೆಣಸಿನ ಬೆಲೆ ಹೆಚ್ಚಳವಾಗಿದೆ.

Advertisement

ಹೊಸ ಒಣ ಮೆಣಸು ಮಾರುಕಟ್ಟೆಗೆ ಆವಕವಾಗಿಲ್ಲ. ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯದ ವೇಳೆಗೆ ಹೊಸ ಮೆಣಸು ಆವಕವಾಗುತ್ತದೆ. ಆದರೆ ಈ ವರ್ಷ ಅಕ್ಟೋಬರ್‌- ನವೆಂಬರ್‌ನಲ್ಲಿಯೂ ಮಳೆ ಬಂದಿದ್ದ ಕಾರಣ ಹೊಸ ಮೆಣಸು ಮಾಟುಕಟ್ಟೆಗೆ ಬರುವುದು ವಿಳಂಬವಾಗಿದೆ. ಈಗ (ಜನವರಿ) ಹಳೆಯ ಒಣ ಮೆಣಸಿನ ಕೊನೆಯ ಅವಧಿಯಾಗಿದ್ದು, ಹೊಸ ಮೆಣಸು ಬಾರದ ಕಾರಣ ಬೆಲೆ ಏರಿಕೆ ಆಗಿರಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಫೆಬ್ರವರಿ ತಿಂಗಳಲ್ಲಿ ಹೊಸ ಒಣ ಮೆಣಸು ಮಾರುಕಟ್ಟೆಗೆ ಆವಕವಾಗಲಿದ್ದು, ಆಗ ಬೆಲೆ ಇಳಿಕೆ ಆಗಲಿದೆ.
– ವಿನಯ ಭಟ್‌, ವ್ಯಾಪಾರಿ, ಪಿವಿಎಸ್‌ ಜಂಕ್ಷನ್‌

ಸುಮಾರು ಒಂದು ವಾರದ ಹಿಂದೆ ಒಣ ಮೆಣಸಿನ ಬೆಲೆ ಹೆಚ್ಚಳವಾಗಿದೆ. ಸರಾಸರಿ 50 ರಿಂದ 60 ರೂ. ತನಕ ಏರಿಕೆ ಆಗಿದೆ. ಇದಕ್ಕೆ ಕಾರಣ ಏನೆಂದು ತಿಳಿದಿಲ್ಲ.
– ನೌಶಾದ್‌, ವ್ಯಾಪಾರಿ, ಮಂಗಳೂರು ಸೆಂಟ್ರಲ್‌ ಮಾರ್ಕೆಟ್‌.

Advertisement

Udayavani is now on Telegram. Click here to join our channel and stay updated with the latest news.

Next