Advertisement

ವಿಚ್ಛೇದನಕ್ಕೂ ಮುನ್ನ 2ನೇ ವಿವಾಹ: ಪತ್ನಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗೆ ಕೋರ್ಟ್‌ ಆದೇಶ

11:57 PM Jun 09, 2024 | Team Udayavani |

ಬೆಳ್ತಂಗಡಿ: ವಿವಾಹ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯ ದಲ್ಲಿ ಇರುವಾಗಲೇ ಪತ್ನಿ 2ನೇ ವಿವಾಹ ವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದಗಳನ್ನು ಆಲಿಸಿದ ಬೆಳ್ತಂಗಡಿ ನ್ಯಾಯಾಲಯವು ಪತ್ನಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದೆ.

Advertisement

ಪಣಕಜೆ ಮುಂಡಾಡಿ ನಿವಾಸಿ ಉದಯ ನಾಯಕ್‌ ಅವರು ಮುಂಬಯಿಯ ಅನಿತಾ ನಾಯಕ್‌ ಅವರನ್ನು 2018ರಲ್ಲಿ ವಿವಾಹವಾಗಿ ದ್ದರು. ಒಂದು ವರ್ಷದ ಬಳಿಕ ದಾಂಪತ್ಯದಲ್ಲಿ ಅಡೆತಡೆ ಬಂದ ಹಿನ್ನೆಲೆ ಮಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಪ್ರತೀ ತಿಂಗಳು 30 ಸಾವಿರ ರೂ. ನೀಡುವಂತೆ ಪತ್ನಿ ಕೋರಿದ್ದರು. ಈ ಮಧ್ಯೆ ಪತ್ನಿ ಪತಿಗೆ ತಿಳಿಯದಂತೆ 2023ರಲ್ಲಿ ಮುಂಬಯಿಯಲ್ಲಿ ಬೇರೊಬ್ಬರನ್ನು ವಿವಾಹವಾಗಿದ್ದರು. ಈ ವಿಚಾರ ತಿಳಿದಉದಯ್‌ ಸಾಕ್ಷಿ ಸಮೇತ ಬೆಳ್ತಂಗಡಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪಿರ್ಯಾದು ಸಲ್ಲಿಸಿದ್ದರು.

ಎಸಿಜೆ ಮತ್ತು ಎಫ್‌ಸಿಜೆಎಂ ವಿಜಯೇಂದ್ರ ಟಿ.ಎಚ್‌. ಅವರು ಉದಯ್‌ ಸಲ್ಲಿಸಿದ ಖಾಸಗಿ ದೂರನ್ನು ಒಪ್ಪಿಕೊಂಡು ಐಪಿಸಿಯ ಸೆಕ್ಷನ್‌ 34, 120 ಬಿ ಮತ್ತು 494ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಪುಂಜಾಲಕಟ್ಟೆ ಪೊಲೀಸರಿಗೆ ಸೂಚಿಸಿದ್ದಾರೆ.

ಪತಿಯಿಂದಲೇ ಗೌಪ್ಯ ಕಾರ್ಯಾಚರಣೆ
ಪತ್ನಿ ಗೌಪ್ಯವಾಗಿ ಎರಡನೇ ವಿವಾಹ
ವಾಗಿರುವುದನ್ನು ಖಚಿತಪಡಿಸುವ ಸಲುವಾಗಿ ಉದಯ ನಾಯಕ್‌ ಖುದ್ದು ಪತ್ತೆದಾರಿಕೆಗೆ ಮುಂದಾಗಿದ್ದರು. ಪತ್ನಿ ಅನಿತಾ ಮುಂಬಯಿಯ ಡೊಂಬಿವಲಿಯ ಲೋಧಾ ಪ್ಯಾನೇಶಿಯಾದಲ್ಲಿ ಹರಿಕೃಷ್ಣ ಗಣಪತ್‌ ರಾವ್‌ ಕೀಲು ಅವರೊಂದಿಗೆ 2023 ಮಾರ್ಚ್‌ 13 ಎರಡನೇ ವಿವಾಹವಾಗಿ ರುವುದನ್ನು ಪತ್ತೆ ಹಚ್ಚಿದ್ದರು. ಅದು ಮಹಾರಾಷ್ಟ್ರ ಗೆಜೆಟ್‌ ಕಚೇರಿಗೆ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ ಅನಿತಾ ನಾಯಕ್‌ ಅವರು ಅನಿತಾ ಹರಿಕೃಷ್ಣ ಕೀಲು ಎಂದು ಹೆಸರು ಬದಲಾಯಿಸಿ ಕೊಂಡಿದ್ದರು. ಈ ಮಾಹಿತಿಯನ್ನು ಉದಯ ಆರ್‌ಟಿಐಯಲ್ಲಿ ಸಂಗ್ರಹಸಿ ದ್ದರು. ಜತೆಗೆ ಅನಿತಾ ಅವರ ಸಂಬಂಧಿಕರ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಫೋಟೋವನ್ನು ಸಂಗ್ರಹಿಸಿ ಮಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಲಯದ ಪ್ರಧಾನ ನ್ಯಾಯಾಧೀಶರು ಈ ಪುರಾವೆಯನ್ನು ಅಂಗೀಕರಿಸಿದರಲ್ಲದೆ, ಉದಯ್‌ ನಾಯಕ್‌ ಅವರ ಅರ್ಜಿಯ ಹೆಚ್ಚಿನ ತನಿಖೆಗೂ ನಿರ್ದೇಶಿಸಿತ್ತು. ಬಳಿಕ ಉದಯ್‌ ಅವರು ಬೆಳ್ತಂಗಡಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ಪಿರ್ಯಾದು ಸಲ್ಲಿಸಿದಾಗ ಈ ವಿಚಾರವಾಗಿ ಪತ್ನಿ ಅನಿತಾ ಹಾಗೂ ತಂದೆ ರಾಮಚಂದ್ರ ನಾಯಕ್‌, ಅನಿತಾ ಅವರನ್ನು ಮದುವೆಯಾದ ಹರಿಕೃಷ್ಣ ಗಣಪತ್‌ ರಾವ್‌ ಕೀಲು ಹಾಗೂ ತಂದೆ ಗಣಪತ್‌ ರಾವ್‌ ಕೀಲು, ತಾಯಿ ಚಂದ್ರಾವತಿ ಕೀಲು ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದೆ. ಉದಯ್‌ ಪರವಾಗಿ ವಿಶಾಲ್‌ ಶೆಟ್ಟಿ ವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next