Advertisement

ಕೃಷಿ ಮಸೂದೆ ಹಿಂಪಡೆಯುವಂತೆ ಆಗ್ರಹ

04:58 PM Feb 05, 2021 | Team Udayavani |

ಮಂಡ್ಯ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ರಾಷ್ಟ್ರವ್ಯಾಪಿ ಕರೆ ನೀಡಿರುವ ಹೆದ್ದಾರಿ ತಡೆ ಬೆಂಬಲಿಸಿ, ಫೆ.6ರಂದು ಮಧ್ಯಾಹ್ನ 12ರಿಂದ 3ರವರೆಗೆ ರಾಜ್ಯದ ಎಲ್ಲ ಹೆದ್ದಾರಿಗಳು ಬಂದ್‌ ಆಗಲಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Advertisement

ದೇಶದ 546 ರೈತ ಸಂಘಟನೆಗಳು ಒಗ್ಗೂಡಿ ಸಂಯುಕ್ತ ಕಿಸಾನ್‌ ಮೋರ್ಚಾ ಹೆಸರಿನಡಿ ದೆಹಲಿ ಗಡಿಯಲ್ಲಿ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಹೆದ್ದಾರಿ ತಡೆಗೆ ಕರೆ ನೀಡಿದ್ದಾರೆ. ಇದರ ಹಿನ್ನೆಲೆ ರಾಜ್ಯದ ರೈತ,  ಕಾರ್ಮಿಕ, ದಲಿತ, ವಿದ್ಯಾರ್ಥಿ, ಮಹಿಳಾ ಸಂಘಟನೆಗಳು ಸೇರಿದಂತೆ 48 ವಿವಿಧ ಸಂಘಟನೆಗಳು ಸಂಯುಕ್ತ ಹೋರಾಟ ಕರ್ನಾಟಕ ಹೆಸರನಡಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರ ನಡೆ ಅಮಾನವೀಯ: ರೈತರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ರಸ್ತೆಗೆ ಕಬ್ಬಿಣದ ಸಲಾಕೆ, ಮೊಳೆ  ಹಾಕಲಾಗಿದೆ. ರೈತರ ಸುತ್ತ ಬೇಲಿ ಹಾಕಿ, ಇಂಟರ್‌ನೆಟ್‌, ವಿದ್ಯುತ್‌, ನೀರಿನ ಸಂಪರ್ಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ  ನಡೆ ಅಮಾನವೀಯವಾಗಿದೆ. ರಾಷ್ಟ್ರದ ಅಧಿಕಾರವನ್ನು ಪ್ರಜಾತಂತ್ರ ವ್ಯವಸ್ಥೆಯ ಅರಿವಿಲ್ಲದಂತೆ ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರಕ್ಕೆ ಹತಾಶೆಯ ಕಾರ್ಮೋಡ: ಅಹಿಂಸಾ ಮಾರ್ಗದಲ್ಲಿ ನಡೆಯುತ್ತಿರುವ ರೈತರ ಹೋರಾಟ ದಿಂದ ಕೇಂದ್ರ ಸರ್ಕಾರಕ್ಕೆ ಹತಾಶೆಯ ಕಾರ್ಮೋಡ ಕವಿದಂತಾಗಿದೆ. ಅದರ ಪ್ರತೀಕವಾಗಿ ರೈತ ಹೋರಾಟಕ್ಕೆ ಅಡ್ಡಿಯುಂಟು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಫೆ.13ಕ್ಕೆ ರೈತ ಜಾಗೃತಿ ದಿನ: ರೈತ ನಾಯಕ ಪೊ›.ಎಚ್‌ .ಸಿ.ನಂಜುಂಡಸ್ವಾಮಿ ಅವರ ಸೈದ್ಧಾಂತಿಕ ತತ್ವಗಳು ಇಂದು ಪ್ರಸ್ತುತತೆಗೆ ಬಂದಿವೆ. ರೈತನಿಗೆ ಸರ್ಕಾರಗಳಿಂದ ಹೀಗೊಂದು ಪರಿಸ್ಥಿತಿ ಬರಬಹುದು ಎಂಬ ಕಾರಣದಿಂದ ಅವರು ರೈತ ಸಂಘಟನೆ ಮಾಡಿದ್ದು, ರೈತರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಬಲ ಬಂದಿದೆ ಎಂದರು.

Advertisement

ಫೆ.13ರಂದು ಅವರ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ರೈತ ಜಾಗೃತಿ ದಿನವನ್ನಾಗಿ ಆಚರಿಸಲಾಗುವುದು. ಈ ದಿನದಂದು ಎಲ್ಲ ರೈತಪರ ಸಂಘಟನೆಗಳು ಭಾಗವಹಿಸಲಿದ್ದು, ಕೃಷಿ ಮಸೂದೆಗಳ ಸಂಬಂಧ ಸಂವಾದ ವಿಚಾರಗೋಷ್ಠಿ  ಯನ್ನು ನಡೆಸಲಾಗುವುದು ಎಂದು ಹೇಳಿದರು.

ಫೆ.18ರಂದು ಕೆಎಸ್‌ಪಿ ಸ್ಮರಣೆ: ರೈತ ನಾಯಕ ಹಾಗೂ ಮಾಜಿ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರು ನಮ್ಮನ್ನಗಲಿ ಮೂರು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ಫೆ.18 ರಂದು ಅವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲ ಸಾಮಾಜಿಕ ಸಂಘಟನೆಗಳು ಉಪಸ್ಥಿತಿ ವಹಿಸಲಿದ್ದು, ರೈತರ ಹೋರಾಟ ಧಮನಕ್ಕೆ ಕೇಂದ್ರ ಸರ್ಕಾರದ ಹುನ್ನಾರ ವಿಷಯದ ಕುರಿತು ವಿಚಾರ ಗೋಷ್ಠಿಯನ್ನು ನಡೆಸಲಾಗುವುದು ಎಂದರು.

ರೈತ ಸಂಘಕ್ಕೆ ಹೊಸ ರೂಪ: ರೈತ ಸಂಘಕ್ಕೆ ಕೆ.ಎಸ್‌ .ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿಯೇ ಹೊಸ ರೂಪ ನೀಡುವ ಉದ್ದೇಶ ಹೊಂದಲಾಗಿತ್ತು. ಅವರ ಅಕಾಲಿಕ ಮರಣದಿಂದಾಗಿ ಅಂದು ಅವರ ಕನಸನ್ನು ನನಸು ಮಾಡುವ ಸಲುವಾಗಿ ರೈತಸಂಘಕ್ಕೆ ಹೊಸ ರೂಪ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :ಯಂಕಂಚಿ ರೈತನ ಆಕಳು ಕೊಂದ ವನ್ಯಜೀವಿ

ರೈತ ಸಂಘಕ್ಕೆ ಪ್ರತ್ಯೇಕ ಸಂವಿಧಾನ ರಚನೆ: ರೈತ ಸಂಘಕ್ಕೆ ಪ್ರತ್ಯೇಕ ಸಂವಿಧಾನ ರಚಿಸಲಾಗುವುದು.ಹಸಿರು ಟವಲ್‌ನ್ನು ಕೆಟ್ಟದ್ದಕ್ಕೂ ಬಳಸಲಾಗುತ್ತಿದೆ. ಅದನ್ನು ತಪ್ಪಿಸುವ ಹಿನ್ನೆಲೆ ಹಸಿರು ಟವಲ್‌ಗೆ ಶಾಸನಾತ್ಮಕ ಬದಲಾವಣೆ ನೀಡುವುದು. ಸಂಘಟನೆಯ ಹೆಸರು ಮತ್ತು ಲಾಂಚನದಲ್ಲಿ ಬದಲಾವಣೆ ನೀಡುವುದು. ಸಕ್ರಿಯವಾಗಿ ಸಾಮಾಜಿಕ ಜಾಲತಾಣಗಳ ಸದ್ಬಳಕೆ,  ರೈತರ ಸಮಸ್ಯೆಗಳನ್ನು ಮಾತ್ರ ತಿಳಿಸುವ ಉದ್ದೇಶದಿಂದ ನೇಗಿಲ ಹಾಡು ಪತ್ರಿಕೆ ಲೋಕಾರ್ಪಣೆ ಮಾಡಲಾಗುವುದು. ಐಟಿ- ಬಿಟಿ ಕಂಪನಿಗಳ ವ್ಯವಸಾಯ ಆಸಕ್ತರು, ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡ 500 ಮಂದಿ ಹೊಸದಾಗಿ ಸೇರ್ಪಡೆಯಾಗುವುದು. ರಾಜ್ಯ, ಜಿಲ್ಲೆ, ತಾಲೂಕು ಸಮಿತಿಗಳ ಪುನರ್‌ ರಚನೆ, ಕೃಷಿ ತಂತ್ರಜ್ಞರು, ಕಾನೂನು, ಐಎಎಸ್‌, ಕೆಎಎಸ್‌, ಐಪಿಎಸ್‌ ನಿವೃತ್ತ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸುವ ಮೂಲಕ ರೈತ ಸಂಘಕ್ಕೆ ಬಲ ತುಂಬಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಉಪಾಧ್ಯಕ್ಷ ರಾಮಕೃಷ್ಣ, ಗೌರವಾಧ್ಯಕ್ಷ ಪುಟ್ಟಸ್ವಾಮಿ, ಕೆ.ಟಿ.ಗೋವಿಂದೇಗೌಡ, ರವಿಕುಮಾರ್‌, ಮದ್ದೂರು ತಾಲೂಕು ಅಧ್ಯಕ್ಷ ಸೀತಾರಾಂ, ಹರೀಶ್‌ ಚಿಕ್ಕಾಡೆ, ಶಾಂತಮೂರ್ತಿ, ಮಂಜುನಾಥ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next