Advertisement

ಹಕ್ಕುಪತ್ರ ಹೊಂದಿದವರಿಗೆೆ ಇಲಾಖೆ ಕಿರುಕುಳ

02:05 AM Jul 05, 2018 | Karthik A |

ಪುಂಜಾಲಕಟ್ಟೆ: ಗ್ರಾ.ಪಂ. ವ್ಯಾಪ್ತಿಯಲ್ಲಿ  ಸುಮಾರು 340 ಬಡಕುಟುಂಬಗಳು 5 ಸೆಂಟ್ಸ್‌  ಸ್ಥಳದಲ್ಲಿ ಕಳೆದ 30 ವರ್ಷಗಳಿಂದ ವಾಸ್ತವ್ಯವಿದ್ದು, ಹಕ್ಕುಪತ್ರ ಹೊಂದಿದ್ದರೂ ಅರಣ್ಯ ಇಲಾಖೆಯ ಸ್ಥಳವೆಂದು ಅಧಿಕಾರಿಗಳು ಕಿರುಕುಳ ನೀಡುವ ಬಗ್ಗೆ ಗ್ರಾಮಸ್ಥರು ಬಡಗಕಜೆಕಾರು ಗ್ರಾಮಸಭೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪಾಂಡವರಕಲ್ಲುವಿನಲ್ಲಿರುವ ಬಡಗಕಜೆಕಾರು ಸಮುದಾಯ ಭವನದಲ್ಲಿ ಬುಧವಾರ ಜರಗಿದ ಬಂಟ್ವಾಳ ತಾ| ಬಡಗಕಜೆ ಕಾರು ಗ್ರಾ.ಪಂ.ನ 2018- 19ನೇ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬೇಡಿಕೆಗಳನ್ನು ಮುಂದಿರಿಸಿದರು. ಗ್ರಾಮಸಭೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು, ತಮ್ಮ ಸಮಸ್ಯೆ ಬಗ್ಗೆ ಸೂಕ್ತ ಉತ್ತರ ದೊರಕದೆ ಗ್ರಾಮಸ್ಥರು ಆಕ್ರೋಶ ವ್ಯಕಪಡಿಸಿದರು. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಲು ನಿರ್ಣಯಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಬಿ. ವಜ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

Advertisement

ಕಡ್ಡಾಯ ಶಿಕ್ಷಣ
ನೋಡಲ್‌ ಅಧಿಕಾರಿಯಾಗಿದ್ದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌ ಎನ್‌.  ಮಾತನಾಡಿ, ಸರಕಾರಗಳು ಕಡ್ಡಾಯ ಶಿಕ್ಷಣಕ್ಕಾಗಿ ಹಲವಾರು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸರಕಾರಿ ಶಾಲೆಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಉತ್ತಮಗೊಳಿಸಿದಲ್ಲಿ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.

ಖಾಯಂ ಅಧಿಕಾರಿ ನೇಮಕಕ್ಕೆ ಆಗ್ರಹ
ಗ್ರಾ.ಪಂ.ಗೆ ಖಾಯಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಖಾಯಂ ಗ್ರಾಮ ಕರಣಿಕರ ನೇಮಕಾತಿ ಆಗಬೇಕು, ಪ್ರಸ್ತುತ ಪಂ.ಅ. ಅಧಿಕಾರಿ ಬಡಗಕಜೆಕಾರು ಗ್ರಾ.ಪಂ. ಸಹಿತ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾ.ಪಂ.ನ ಅಭಿವೃದ್ಧಿ ನಿಟ್ಟಿನಲ್ಲಿ ಖಾಯಂ ಪಂ.ಅ. ಅಧಿ ಕಾರಿ ನೇಮಕ ಅಗತ್ಯ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಆರ್‌.ಟಿ.ಇ. ದಾಖಲಾತಿಗೂ ಶುಲ್ಕ ವಸೂಲಿ
ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಆರ್‌. ಟಿ.ಇ. ಯೋಜನೆ ಜಾರಿಗೊಳಿಸಿದ್ದು, ಆ ಪ್ರಕಾರ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಿರುವ ಬಗ್ಗೆ ಹೆತ್ತವರು  ಶಿಕ್ಷಣಾಧಿಕಾರಿ ಅವರಲ್ಲಿ ದೂರಿದರು. ಈ ಬಗ್ಗೆ ಶಾಲೆ, ಶುಲ್ಕದ ಕುರಿತು ಲಿಖಿತವಾಗಿ ಮಾಹಿತಿ ನೀಡಿದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣಾಧಿಕಾರಿ ತಿಳಿಸಿದರು.

ಬೀದಿ ದೀಪ ಸಮಸ್ಯೆ
ಗ್ರಾ.ಪಂ. ವ್ಯಾಪ್ತಿಯಲ್ಲಿ ಅಳವಡಿಸಿದ ಬೀದಿ ದೀಪಗಳು ಕೆಲವೇ ದಿನಗಳಲ್ಲಿ ಕೆಟ್ಟುಹೋಗುತ್ತಿದ್ದು, ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಗಿರೀಶ್‌ ಪಾಂಡವರಕಲ್ಲು ಅವರು ದೂರಿದರು. ವಿದ್ಯುತ್‌ ಬಿಲ್‌ ದುಪ್ಪಟ್ಟು ಬಂದಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆಯಲಾಯಿತು. ಮಳೆಗಾಲದಲ್ಲಿ ಮರಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದು ಹಾನಿಯಾಗುವುದರಿಂದ ಅವುಗಳನ್ನು ಮೊದಲೇ ತೆರವುಗೊಳಿಸಬೇಕು ಎಂದು ಪ್ರಕಾಶ್‌ ಕರ್ಲ ಸೂಚಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಮೆಸ್ಕಾಂ ಅಧಿಕಾರಿ ನಿತಿನ್‌ ತಿಳಿಸಿದರು.

Advertisement

ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ, ಕಂದಾಯ ಇಲಾಖೆಯ ಬಡಗಕಜೆಕಾರು ಗ್ರಾಮಲೆಕ್ಕಿಗ ರಾಜು, ಪುಂಜಾಲಕಟ್ಟೆ ಪ್ರಾ. ಆರೋಗ್ಯ ಕೇಂದ್ರದ ಅನ್ವರ್‌ ಹುಸೇನ್‌, ಕಜೆಕಾರು ಸಿ.ಎ. ಬ್ಯಾಂಕ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸರಸ್ವತಿ, ಶಿಕ್ಷಣ ಇಲಾಖೆ ವತಿಯಿಂದ ಪಾಂಡವರಕಲ್ಲು ಶಾಲಾ ಮುಖ್ಯ ಶಿಕ್ಷಕಿ ನವೀನಾ ಕುಮಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮೊದಲಾದ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಕೆ. ಜಯ ಬಂಗೇರ, ವಿನೋದಾ, ಲಕ್ಷ್ಮೀ, ಶೋಭಾ, ಸುರೇಖಾ, ವಿದ್ಯಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಬಡಗಕಜೆಕಾರು ಗ್ರಾ.ಪಂ.ನ ಪ್ರಭಾರ ಪಂ.ಅ. ಅಧಿಕಾರಿ ಶ್ರೀಧರ ಸ್ವಾಗತಿಸಿ, ವರದಿ ಮಂಡಿಸಿದರು. ಗ್ರಾ.ಪಂ. ಸಿಬಂದಿ ಮೋಹನ ವಂದಿಸಿದರು.

ರಸ್ತೆ ಬದಿ ತ್ಯಾಜ್ಯ
ಪಾಂಡವರಕಲ್ಲು-ಕಕ್ಯಪದವು ರಸ್ತೆ ಬದಿ ರಾತ್ರಿ ಹೊತ್ತು ವಾಹನಗಳಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಇವರ ವಿರುದ್ಧ ಪಂ. ಕ್ರಮ ಕೈಗೊಳ್ಳಬೇಕೆಂದು ಲಕ್ಷ್ಮಣ ಮೂಲ್ಯ ದೂರಿದರು. ಕೋಳಿ ಮಾರಾಟ ಅಂಗಡಿಯವರು ಕೋಳಿ ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳಬೇಕೆಂದು ಕೆ. ಡೀಕಯ್ಯ ಬಂಗೇರ ಆಗ್ರಹಿಸಿದರು. ನೀರಾರಿ -ಬೆರ್ಕಳ- ಪುಂಜಾಲಕಟ್ಟೆ ರಸ್ತೆ ಹದಗೆಟ್ಟಿದ್ದು, ದುರಸ್ತಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಮಾಡಪಲ್ಕೆಯಿಂದ ಪುಂಜಾಲಕಟ್ಟೆಗೆ ಸರಕಾರಿ ಬಸ್‌ ಬೇಡಿಕೆ, ಗ್ರಾ.ಪಂ.ನಲ್ಲಿ ಆರ್‌.ಟಿ.ಸಿ. ಮತ್ತು ಆಧಾರ್‌ ಲಭ್ಯತೆ, 94ಸಿ ಅರ್ಜಿಗಳ ವಿಲೇವಾರಿ ಮೊದಲಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next