ಪಡುಬಿದ್ರಿ: ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನ ಸಭೆಯು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜೂ.14ರಂದು ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿವೇಕಾನಂದ ವಿ. ಗಾಂವ್ಕರ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮಸ್ಥರಿಗೆ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಮಾಡಲು ವಿಪುಲ ಅವಕಾಶಗಳಿವೆ. ಸರಕಾರವು ಕೂಲಿ ದರ ಹೆಚ್ಚಳ ಮಾಡಿರುವುದರಿಂದ ಇದರ ಸದುಪಯೋಗವನ್ನು ಗ್ರಾಮಸ್ಥರೆಲ್ಲರೂ ಪಡೆಯಬೇಕೆಂದರು.
ತಾಲೂಕು ಸಂಯೋಜಕರಾದ ರಾಜು ಮೂಲ್ಯ ಅವರು ಸಾಮಾಜಿಕ ಲೆಕ್ಕ ಪರಿಶೋಧನಾ ಕಡತ ಪರಿಶೀಲನೆ ಮತ್ತು ಮನೆ ಮನೆ ಭೇಟಿ ಸಂದರ್ಭದಲ್ಲಿ ಕಂಡು ಬಂದಂತಹ ವಾಸ್ತವ ವಿಚಾರವನ್ನು ಸಭೆಯಲ್ಲಿ ಮಂಡಿಸಿ ಈ ಯೋಜನೆಯಲ್ಲಿ ಆಸ್ತಿ ಸೃಜನೆಯಂತಹ ಕಾಮಗಾರಿಗಳನ್ನು ಹಾಗೂ ಅರಣ್ಯೀಕರಣ ಇತ್ಯಾದಿ ಕಾಮಗಾರಿಗಳನ್ನು ಗ್ರಾಮಸ್ಥರು ನಡೆಸುವಂತೆ ವಿನಂತಿಸಿದರು.
ಬಡಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಶಾಲಿನಿ ವಿ. ಎಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಿಗುವ ಸವಲತ್ತುಗಳ ಮಾಹಿತಿಯನ್ನು ನೀಡಿ ಅನುಪಾಲನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಗ್ರಾ. ಪಂ. ಅಧ್ಯಕ್ಷೆ ಶರ್ಮಿಳಾ ಡಿ. ಸಾಲ್ಯಾನ್ ಮಾಹಿತಿ ನೀಡುತ್ತಾ ಕಾಲನಿ ನಿವಾಸಿಗಳಿಗೂ ಬಾವಿ ರಚನೆಯಂತಹ ಕೆಲಸ ಕಾರ್ಯಗಳನ್ನು ಉದ್ಯೋಗ ಖಾತರಿ ಯೋಜನೆಯಡಿ ಸೇರಿಸಿಕೊಳ್ಳುವಂತಾಗಬೇಕು ಎಂದರು.
ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕುಂದರ್, ಶೃತಿಕಾ, ಶ್ವೇತಾ, ಗ್ರಾಮಸ್ಥರು, ಕೂಲಿ ಕಾರ್ಮಿಕರು, ಪಂಚಾಯತ್ ಸಿಬ್ಬಂದಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಲೆಕ್ಕ ಸಹಾಯಕಿ ನಿರ್ಮಲಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.