Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧೀನದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್ -ಹಿಂದಿನ ಕರ್ನಾಟಕ ಭೂಸೇನಾ ನಿಗಮ) ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರಗಳು ಇನ್ನು ಮುಂದೆ ಸಮಾಜ ಕಲ್ಯಾಣ ಇಲಾಖೆಯ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಕಾಮಗಾರಿ ಗುಣಮಟ್ಟ ಮತ್ತು ಕಾಲಮಿತಿ ಪಾಲನೆ ಸಂಬಂಧ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಮಾಜ ಕಲ್ಯಾಣ ಇಲಾಖೆ ಈ ಆದೇಶ ಹೊರಡಿಸಿದೆ.
ಗುತ್ತಿಗೆದಾರರ ಕಿರಿಕಿರಿ, ಮಧ್ಯವರ್ತಿಗಳ ಹಾವಳಿ ತಡೆ, ದುಬಾರಿ ವೆಚ್ಚಕ್ಕೆ ಕಡಿವಾಣ, ತ್ವರಿತವಾಗಿ ಕಾಮಗಾರಿ ಕೈಗೊಳ್ಳುವ ಹಾಗೂ ಜನರಿಗೆ ಸೇವಾ ಸೌಲಭ್ಯ ಕಲ್ಪಿಸುವ ಕಾಮಗಾರಿಗಳನ್ನು ಸರ್ಕಾರಿ ಸಂಸ್ಥೆಯಿಂದಲೇ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಹಯೋಗದಲ್ಲಿ ಕೆಆರ್‌ಐಡಿಎಲ್ (ಹಿಂದಿನ ಕರ್ನಾಟಕ ಭೂಸೇನಾ ನಿಗಮ) ರಚನೆಯಾಗಿತ್ತು. ಅದರಂತೆ ಬಹಳಷ್ಟು ಇಲಾಖೆಗಳು ಆಯ್ದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸುತ್ತಿವೆ. ಸಮಾಜ ಕಲ್ಯಾಣ ಇಲಾಖೆಯು ವಾರ್ಷಿಕವಾಗಿ ನೂರಾರು ಕೋಟಿ ರೂ. ಮೊತ್ತದ ಆಯ್ದ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರಗಳಿಗೆ ವಹಿಸುತ್ತಿದೆ. ಆದರೆ ಈ ಎರಡೂ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ಅಪಸ್ವರ ಕೇಳಿಬಂದಿದೆ.
Related Articles
ಕೆಆರ್‌ಐಡಿಎಲ್ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರಗಳು ಕೈಗೊಂಡಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಣದಿರುವುದನ್ನು ಸಮಾಜ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಸಂಸ್ಥೆ ಎಂಬ ಕಾರಣಕ್ಕೆ ವಹಿಸಿದ ಕಲ್ಯಾಣ ಕಾರ್ಯಕ್ರಮದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಸಂಸ್ಥೆಗಳು ನಿರ್ವಹಿಸದ ಕಾಮಗಾರಿಗಳ ತಾಳಿಕೆ- ಬಾಳಿಕೆ ಬಗ್ಗೆ ಸಂಶಯ ಮೂಡುವಂತಾಗಿದೆ. ಜತೆಗೆ ಅನುದಾನವೂ ಸದ್ಬಳಕೆಯಾಗದಂತಾಗಿದೆ.
Advertisement
ಕಾಲಮಿತಿ ಪಾಲನೆ ಇಲ್ಲಸಾಮಾನ್ಯವಾಗಿ ಟೆಂಡರ್ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗುತ್ತದೆ. ಟೆಂಡರ್ ಆಹ್ವಾನಿಸಿದರೂ ಗುತ್ತಿಗೆದಾರರಿಂದ ಸ್ಪಂದನೆ ಸಿಗದಿದ್ದರೆ, ಕೇವಲ ಒಂದು ಗುತ್ತಿಗೆ ಸಂಸ್ಥೆಯಷ್ಟೇ ಪಾಲ್ಗೊಂಡರೆ ಟೆಂಡರ್ ರದ್ದಾಗಿ ಮತ್ತೆ ಟೆಂಡರ್ ಆಹ್ವಾನಿಸಬೇಕಾಗುತ್ತದೆ. ಇದರಿಂದ ಸಮಯ ಪೋಲಾಗುವ ಕಾರಣ ನೇರವಾಗಿ ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರಗಳಿಗೆ ಕಾಮಗಾರಿ ವಹಿಸಲಾಗುತ್ತದೆ. ಆದರೆ ಇಲ್ಲಿಯೂ ಸಾಕಷ್ಟು ವಿಳಂಬವಾಗುತ್ತಿರುವುದರಿಂದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂಬುದು ಇಲಾಖೆ ಆರೋಪ. ಹೆಚ್ಚು ವೆಚ್ಚ
ಟೆಂಡರ್ ಆಹ್ವಾನಿಸಿದರೆ ಗುತ್ತಿಗೆದಾರರ ನಡುವೆ ಸ್ಪರ್ಧೆ ಏರ್ಪಟ್ಟು ಕಾಮಗಾರಿ ಮೊತ್ತಕ್ಕಿಂತಲೂ ಕಡಿಮೆ ಮೊತ್ತಕ್ಕೆ ಟೆಂಡರ್ ಮಂಜೂರಾಗುವ ಸಾಧ್ಯತೆ ಹೆಚ್ಚು. ಇದರಿಂದ ಹಣ ಉಳಿತಾಯವಾಗುತ್ತದೆ. ಆದರೆ ಕೆಆರ್‌ಐಡಿಸಿಎಲ್‌ಗೆ ಕಾಮಗಾರಿ ವಹಿಸಿದರೆ ಶೇ.100ರಷ್ಟು ವೆಚ್ಚದ ಜತೆಗೆ ಜಿಎಸ್‌ಟಿ, ಕಾರ್ಮಿಕರ ಶುಲ್ಕ, ಮೂರನೇ ವ್ಯಕ್ತಿ ಪರಿವೀಕ್ಷಣೆ ಹಾಗೂ ಆಡಳಿತಾತ್ಮಕ ವೆಚ್ಚಕ್ಕಾಗಿ ಕಾಮಗಾರಿ ವೆಚ್ಚದ ಶೇ.18.05ರಷ್ಟು ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಅಂದರೆ ಒಟ್ಟು ಶೇ.18.05ರಷ್ಟು ಶುಲ್ಕ ಭರಿಸಬೇಕಿದ್ದು, ಹೊರೆ ಎನಿಸುತ್ತದೆ. ಈ ಎಲ್ಲ ಕಾರಣಗಳಿಗೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಇವುಗಳ ಆಡಳಿತ ವ್ಯಾಪ್ತಿಯಲ್ಲಿರುವ ನಿಗಮಗಳು, ಸಂಸ್ಥೆ ಹಾಗೂ ಕೇಂದ್ರಗಳು ಇನ್ನು ಮುಂದೆ ಯಾವುದೇ ಕಾಮಗಾರಿಯನ್ನು ಕೆಆರ್‌ಐಡಿಎಲ್ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರಗಳಿಗೆ ವಹಿಸಬಾರದು. ನಿಯಮಾನುಸಾರ ಟೆಂಡರ್ ಆಹ್ವಾನಿಸಿ ಹಂಚಿಕೆ ಮಾಡುವಂತೆ ಇಲಾಖೆ ಆ.10ರಂದು ಆದೇಶ ಹೊರಡಿಸಿದೆ. ಅಕ್ರಮ ಆರೋಪ
ಕೆಆರ್‌ಐಡಿಎಲ್ ಕೈಗೊಳ್ಳುವ ಕಾಮಗಾರಿಗಳ ಅನುಷ್ಠಾನದಲ್ಲೂ ಅಕ್ರಮಗಳಿವೆ. ಆರ್ಥಿಕ ವರ್ಷದ ಅಂತ್ಯದಲ್ಲಿ ಅಂದರೆ ಫೆಬ್ರುವರಿ, ಮಾರ್ಚ್‌ನಲ್ಲಿ ಆಯ್ದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಿರುವುದಾಗಿ ಹಣ ವರ್ಗಾಯಿಸಲಾಗುತ್ತದೆ. ಇದರಿಂದ ಆ ವರ್ಷದಲ್ಲೇ ಅನುದಾನ ಬಳಸಲಾಗಿದೆ ಎಂಬಂತಾಗುತ್ತದೆ. ಆದರೆ ಕಾಮಗಾರಿ ಜಾರಿಯಾಗುವುದಿಲ್ಲ. ಹೊಸ ಆರ್ಥಿಕ ವರ್ಷದಲ್ಲಿ ಕೆಆರ್‌ಐಡಿಎಲ್‌ನಿಂದ ಆ ಹಣ ವಾಪಸ್ ಪಡೆಯಲಾಗುತ್ತದೆ. ಇದರಿಂದ ಕಾಮಗಾರಿ ಅನುಷ್ಠಾನವಾಗದೆ, ಫಲಾನುಭವಿವಳಿಗೆ ಸೌಲಭ್ಯಗಳು ಸಿಗದಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. – ಎಂ. ಕೀರ್ತಿಪ್ರಸಾದ್