Advertisement

ಗಬ್ಬೆದ್ದು ನಾರುತ್ತಿದೆ ದನಕನದೊಡ್ಡಿ-ಹತೋಟಿಗೆ ಬಾರದ ಜ್ವರ

02:12 PM Oct 06, 2019 | Suhan S |

ಕೊಪ್ಪಳ: ತಾಲೂಕಿನ ದನಕನದೊಡ್ಡಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಜ್ವರ ಬಾಧೆ ಹೆಚ್ಚಾಗುತ್ತಿದೆ. ಕಾಟಾಚಾರಕ್ಕೆ ಎಂಬಂತೆ ಕೂಕನಕಪಳ್ಳಿಯ ಆರೋಗ್ಯ ಕೇಂದ್ರದ ವೈದ್ಯರು ಭೇಟಿ ನೀಡಿ ತೆರಳಿದ್ದು, ಜನರು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಹತ್ತಾರು ಸಾವಿರ ರೂ. ವ್ಯಯಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ ಕ್ಕೆ ಗ್ರಾಮಸ್ಥರೇ ಸಿಡಿಮಿಡಿ ವ್ಯಕ್ತಪಡಿಸುತ್ತಿದ್ದಾರೆ.

Advertisement

ಹೌದು. ಕಳೆದ ಕೆಲ ದಿನಗಳಿಂದ ದನಕನದೊಡ್ಡಿ ಗ್ರಾಮದಲ್ಲಿ ಜನರಲ್ಲಿ ಜ್ವರ ಬಾಧೆಕಾಣಿಸಿಕೊಂಡಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಶಂಕಿತ ಡೆಂಘೀ ಎಂದು ಹೇಳಿ ಜನರಲ್ಲಿ ಮತ್ತೆ ಆತಂಕ ಮೂಡಿಸುತ್ತಿದ್ದಾರೆ. ಒಂದೊಂದು ಮನೆಯಲ್ಲೂ ಮೂರರಿಂದ ನಾಲ್ವರು ಆಸ್ಪತ್ರೆ ಮೆಟ್ಟಿಲೇರಿ ಚಿಕಿತ್ಸೆ ಪಡೆದು ಬರುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆಸಿಗದೇ ಇರುವುದಕ್ಕೆ ಜನತೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮದಲ್ಲಿ ಎರಡು ವಾರಕ್ಕೂ ಹಿಂದಿನಿಂದಲೂ ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿವೆ.

ಸಮೀಪದ ಕೂಕನಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಗ್ರಾಮಕ್ಕೆ ಬಂದು ಎರಡು ಮಾತ್ರೆ ನೀಡಿ ತೆರಳುತ್ತಿದ್ದಾರೆ. ಆದರೆ ಇಲ್ಲಿಯೇ ಕ್ಯಾಂಪ್‌ ಹಾಕಿ ಜನರಿಗೆ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರ ತಂಡವು ಬರುತ್ತಿಲ್ಲ. ಹೀಗಾಗಿ ಸರ್ಕಾರಿ ವೈದ್ಯರನ್ನು ನೆಚ್ಚಿಕೊಂಡು ಕುಳಿತರೆ ನಮ್ಮ ಜ್ವರ ವಾಸಿಯಾಗಲ್ಲ ಎಂದು ಜನತೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.

ಇನ್ನೂ ಗ್ರಾಮದ ಪರಿಸ್ಥಿತಿ ಹೇಳತೀರದಂತಿದೆ. ರಸ್ತೆಗಳಲ್ಲ ಗಬ್ಬೆದ್ದು ನಾರುತ್ತಿವೆ. ಚರಂಡಿಗಳು ಕಲ್ಮಶ ನೀರಿನಿಂದ ತುಂಬಿಕೊಂಡಿವೆ. ಗ್ರಾಮದ ಮನೆ ಮನೆ ಅಕ್ಕಪಕ್ಕಗಳಲ್ಲೂ ತಿಪ್ಪೆಗಳು ಇವೆ. ತ್ಯಾಜ್ಯದ ನೀರೆಲ್ಲವೂ ಎಲ್ಲೆಂದರಲ್ಲಿ ನಿಂತು ಗ್ರಾಮದ ತುಂಬ ಸೊಳ್ಳೆಗಳಾಗಿವೆ. ಗ್ರಾಮ ಪಂಚಾಯಿತಿಯಂತೂ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ. ತಿಪ್ಪೆಗಳ ತೆರವಿಗೆ ಮುಂದಾಗುತ್ತಿಲ್ಲ. ರೋಗಬಾಧೆ ಉಲ್ಬಣವಾದ ಬಳಿಕ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಪೌಡರ್‌ ಸಿಂಪರಣೆ ಮಾಡಿದ್ದು, ಬಿಟ್ಟರೆ ಮತ್ತಾವ ಕೆಲಸವನ್ನೂ ಮಾಡಿಲ್ಲ. ಚರಂಡಿಗಳ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತಿಲ್ಲ.

ತಿಪ್ಪೆಗಳ ತೆರವು ಮಾಡಿ ಸ್ವತ್ಛತೆ ಕಾಪಾಡುತ್ತಿಲ್ಲ.ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಜನತೆ. ಗ್ರಾಮದಲ್ಲಿನ ಜ್ವರದ ಭೀತಿಯಿಂದ ಜನತೆ ಆತಂಕ ವ್ಯಕ್ತಪಡಿಸುತ್ತಿದೆ. ಸ್ಥಿತಿವಂತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬಡ ಜನರೆ ಖಾಸಗಿ ಆಸ್ಪತ್ರೆಗಳಲ್ಲಿ ಹತ್ತಾರು ಸಾವಿರ ವ್ಯಯಿಸಲಾಗದೇ ನರಳಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆಯನ್ನೊಮ್ಮೆ ಸ್ಥಳೀಯ ಶಾಸಕ- ಸಂಸದರು ನೋಡಬೇಕಿದೆ. ಆಡಳಿತ ವರ್ಗವು ಕಣ್ತೆರೆದು ಜನರ ನೋವು ಆಲಿಸಬೇಕಿದೆ.

Advertisement

ಗ್ರಾಮದಲ್ಲಿ ಇನ್ನೂ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಜನತೆ ಈಗಲೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಕನೂರು ಪಿಎಚ್‌ಸಿ ಆಸ್ಪತ್ರೆ ವೈದ್ಯರು ಬಂದು ಮಾತ್ರೆ ನೀಡಿ ತೆರಳುತ್ತಿದ್ದಾರೆ. ಯಾವ ವೈದ್ಯರ ತಂಡವೂ ಇಲ್ಲಿ ಕ್ಯಾಂಪ್‌ ಮಾಡಿಲ್ಲ. ನಮ್ಮ ಮನೆಯಲ್ಲೇ ಇಬ್ಬರು ಜ್ವರದಿಂದ ಬಳಲಿದ್ದು, 10 ಸಾವಿರಕ್ಕೂ ಅಧಿ ಕ ವ್ಯಯವಾಗಿವೆ.- ಸುರೇಶ ಕುಷ್ಟಗಿ, ದನಕನದೊಡ್ಡಿ ಗ್ರಾಮಸ್ಥ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next