ಕೆ.ಆರ್.ಪೇಟೆ: ತಾಲೂಕಿನ ಶ್ರೀಚಂದಗೋನಹಳ್ಳಿ ಅಮ್ಮನ ದೇಗುಲವೆಂದರೆ ಭಕ್ತರಿಗೆ ಅಪಾರ ನಂಬಿಕೆ. ಅಮ್ಮನಿಗೆ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಸಿದಾಗ ದೇವಿಗೆ ಬಲಿದಾನ ನೀಡುವ ವೇಳೆ ಸ್ವಚ್ಛತೆ ಮರೆತು ಎಲ್ಲೆಂದರಲ್ಲಿ ಕಸಕಡ್ಡಿ ಹಾಕಿ ದುರ್ವಾಸನೆ ಬೀರಿ ಸಾಂಕ್ರಾ ಮಿಕ, ಚರ್ಮರೋಗ ಹರಡುವ ಭೀತಿಯಲ್ಲಿ ದೇವಿ ದರ್ಶನ ಪಡೆಯುವಂತಾಗಿದೆ.
ತಾಲೂಕಿನ ಬೀರುವಳ್ಳಿ ಗ್ರಾಪಂ ವ್ಯಾಪ್ತಿಯ ಶ್ರೀ ಚಂದಗೋನಹಳ್ಳಿ ಅಮ್ಮನಿಗೆ ಭಕ್ತರು ಮಕ್ಕಳಾದರೆ ದೇವಿ ಸನ್ನಿಧಿಯಲ್ಲೇ ಮಗುವಿಗೆ ನಾಮಕರಣ, ಮದುವೆಯಾದರೆ ಅಲ್ಲಿಯೇ ಬೀಗರೂಟ ಕೊಡುವ, ವ್ಯಾಪಾರದಲ್ಲಿ ಕೈ ಹಿಡಿದರೆ, ಕುರಿ ಬಲಿ ಇತ್ಯಾದಿ ಹರಕೆ ತೀರಿಸುವ ಭರಾಟೆಯಲ್ಲಿ ಸ್ವಚ್ಛತೆ ಕಾಪಾಡದೆ ಕಸವೆಲ್ಲಾ ಅಲ್ಲಿಯೇ ಹಾಕಿ ದುರ್ನಾತ ಉಂಟು ಮಾಡುತ್ತಿರುವುದು ಅಸಮಾಧಾನದ ವಿಷಯ. ದೇವಾಲಯದಲ್ಲಿ ಪ್ರಾಣಿ ಬಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರಾಣಿಗಳ ರಕ್ತ ಹೊರ ಹೋಗಲು ವ್ಯವಸ್ಥೆ ಮಾಡಿಲ್ಲದ ಕಾರಣ, ಸ್ವಚ್ಛತೆ ಮಾಡದ ಕಾರಣ ದುರ್ವಾಸನೆ ಬೀರುತ್ತಿದೆ. ಇದರಿಂದ ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನ ಮಾಡುತ್ತಿದ್ದಾರೆ.
ಒಂದು ಕಿ.ಮೀ. ವ್ಯಾಪ್ತಿಗೆ ವಾಸನೆ ಆಡಳಿತ ಮಂಡಲಿಯವರು ಸ್ವಚ್ಛತೆಗೆ ಆದ್ಯತೆ ನೀಡು ತ್ತಿಲ್ಲ. ಪೂಜೆಯಿಂದ ಬರುವ ಸಾವಿರಾರು ರೂ.ಗಳು ಜೇಬಿಗೆ ಹಾಕಿಕೊಂಡು ಮನೆಗೆ ಹೋಗುತ್ತಾರೆ. ಆದರೆ ಆವರಣದಲ್ಲಿ ಸ್ವಚ್ಛತೆಗೆ ಮಾತ್ರ ಆದ್ಯತೆ ನೀಡುತ್ತಿಲ್ಲ.
ಮೊಟ್ಟೆ ದೃಷ್ಟಿ: ಪ್ರಾಣಿ ಬಲಿ ಜೊತೆಗೆ ಮೊಟ್ಟೆ ಒಡೆದು ದೃಷ್ಟಿ ತೆಗೆಯುವುವ ಸಂಪ್ರದಾಯವೂ ಇದೆ. ಸಹಸ್ರಾರು ಒಡೆದ ಮೊಟ್ಟೆ ರಾಶಿ ಬಿದ್ದಿದೆ. ಜೊತೆಗೆ ಭಕ್ತರು ಬಳಸುವ ವಸ್ತುಗಳನ್ನು ಅಲ್ಲಿಯೇ ಎಸೆಯುವುದರಿಂದ ಅವು ಕೊಳೆತಿವೆ. ಈ ಎಲ್ಲ ಕಾರಣದಿಂದ ದೇವಾಲಯದ ಒಂದು ಕಿ.ಮೀ. ವ್ಯಾಪ್ತಿವರೆಗೂ ದುರ್ವಾಸನೆ ಬೀರುತ್ತಿದೆ. ಆದರೂ ಸಮೀಪದ ಗ್ರಾಪಂ ಅಥವಾ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸುತ್ತಿಲ್ಲವೆಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗಡಿಗಳಲ್ಲೂ ಕೊಳಕು: ಸಹಸ್ರಾರು ಭಕ್ತರು ಬರುವ ದೇವಾಲಯದ ಬಳಿ ಹಣ್ಣು, ಪೂಜಾ ಸಾಮಗ್ರಿ, ಸಿಹಿ, ಕಡ್ಲೆಪುರಿ, ಕೋಳಿ ಅಂಗಡಿ ಹೋಟೆಲ್ ಸೇರಿದಂತೆ ಹತ್ತಾರು ಅಂಗಡಿಗಳು ಇವೆ. ವರ್ತಕರು ನಿರುಪಯುಕ್ತ ವಸ್ತುಗಳನ್ನು ಅಲ್ಲಿಯೇ ಎಸೆಯುತ್ತಿರುವುದು ನೈರ್ಮಲ್ಯ ಮತ್ತು ದುರ್ವಾಸನೆಯಿಂದ ಕೂಡಿದೆ. ಅಂಗಡಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುತ್ತಿಲ್ಲ.
ನೀರಿನಲ್ಲಿ ಪ್ರಾಣಿಗಳ ರಕ್ತಹರಿಸುವುದರಿಂದ ನಾಲೆಯಲ್ಲಿ ಕುಡಿಯುವ ನೀರು ಕಲುಷಿತವಾಗುತ್ತಿದೆ. ಈ ಎಲ್ಲಾ ವಸ್ತುಗಳು ನಾಲೆಯ ತೂಬಿಗೆ ಸೇರಿಕೊಂಡು ನಾಲೆಯೂ ಬಿರುಕು ಬಿಡುವ ಜೊತೆಗೆ ಕೆಳಭಾಗದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವುದಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸುವ ಮುನ್ನ ನಾಲೆಯ ತೂಬನ್ನು ಸ್ವಚ್ಛ ಮಾಡಿಸುತ್ತಿದ್ದಾರೆ.
•ಎಚ್.ಬಿ.ಮಂಜುನಾಥ್