ಆಲೂರು: ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಸ್ವಚ್ಛತೆ ಕಾಪಾಡಿ ಎಂದು ಹೇಳುವ ಸರ್ಕಾರಿ ಅಧಿಕಾರಿಗಳೇ, ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಕ್ರೋಶ: ನಿತ್ಯ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿಬಂದಿದೆ. ದಿನಕ್ಕೆ ಸಾವಿರಾರು ಮಂದಿ ಈ ಬಸ್ ನಿಲ್ದಾಣಕ್ಕೆ ಆಗಮಿಸಲಿದ್ದು ಆಲೂರು ಬಸ್ ನಿಲ್ದಾಣದ ಶೌಚಾಲಯದ ಮಲ -ಮೂತ್ರ ಪಿಟ್ ಗುಂಡಿಯು ತುಂಬಿ ಮುಚ್ಚಳ ತೆರೆದು ಗಬ್ಬೆದ್ದು ದುರ್ವಾಸನೆ ಬೀರುತ್ತಿದೆ. ಇನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಮುಂದು ನೋಡುತ್ತಿದ್ದಾರೆ: ಕಳೆದೆರಡು ವರ್ಷಗಳಿಂದ ಕೊರೊನಾದಂತಹ ಮಹಾಮಾರಿರೋಗದ ಜತೆಗೆ ಈಗ ಒಮಿಕ್ರಾನ್ ಹರಡುತ್ತಿರುವಸಂದರ್ಭದಲ್ಲೇ ಶೌಚಾಲಯದ ಸುತ್ತಮುತ್ತ ಪಾಚಿ ಬೆಳೆದು ಕ್ರಿಮಿಕೀಟಗಳು ಉತ್ಪತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಸಿದೆ. ಅಲ್ಲದೇ, ಬಸ್ ನಿಲ್ದಾಣದಲ್ಲಿ ತಂಬಾಕು ತಿಂದು ಎಸೆದ ಪ್ಲಾಸ್ಟಿಕ್ ಕವರ್, ಗುಟ್ಕಾ ಪಾಕೇಟ್, ಮದ್ಯದ ಬಾಟಲ್‌ಗಳು, ಬಿದ್ದಿದ್ದರೂ ಸ್ವಚ್ಛಗೊಳಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದು, ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲು ಹಿಂದು ಮುಂದು ನೋಡುತ್ತಿದ್ದಾರೆ.
ಸ್ವಚ್ಛತೆ ಕೈಗೊಳ್ಳಿ: ನಿಲ್ದಾಣದ ಹತ್ತಿರ ತಾಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಜತೆಗೆ ವಾಸದ ಮನೆಗಳಿವೆ. ಸರ್ಕಾರ ಸ್ವಚ್ಛತೆಗಾಗಿ ಕೋಟಿಗಟ್ಟಲೇ ಹಣ ಸುರಿಯುತ್ತಿದ್ದರೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯವಹಿಸಿದ್ದಾರೆ. ಕೋವಿಡ್ ವೇಳೆಯೇ ತಾಲೂಕು ಕಚೇರಿ ಸ್ವಚ್ಛತೆ ಕಾಪಾಡದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದರೂ ತಹಶೀಲ್ದಾರ್‌ಮತ್ತು ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆಗೆ ಗಮನ ನೀಡಬೇಕಿದೆ.
ಭ್ರಷ್ಟ ಅಧಿಕಾರಿಗಳಿಗೆ ಆಶ್ರಯ ತಾಣ: ಧರ್ಮರಾಜ್ : ಎಲ್ಲಿಯೂ ಬೇಡವಾದ, ತಿರಸ್ಕತ ಅಧಿಕಾರಿಗಳು ಆಲೂರು ತಾಲೂಕಿನಲ್ಲಿ ಬೀಡು ಬಿಟ್ಟಿದ್ದಾರೆ. ಭ್ರಷ್ಟಅಧಿಕಾರಿಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ.ಅಭಿವೃದ್ಧಿ ಮರೀಚಿಕೆಯಾಗಿದೆ. ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ಹಣ ಮಾಡುವ ಸಲುವಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಹಣ ಲೂಟಿ ಹೊಡೆಯುತ್ತಿದ್ದಾರೆ. ಒಮಿಕ್ರಾನ್ ಹರಡುತ್ತಿದ್ದರೂ ಬಸ್‌ನಿಲ್ದಾಣದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ತಾಲೂಕು ಕಚೇರಿಯಲ್ಲಿಯೂ ಇದೆ ಪರಿಸ್ಥಿತಿ ಇದ್ದುನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಪಪಂ ಮಾಜಿ ಅಧ್ಯಕ್ಷ ಎಚ್.ಬಿ.ಧರ್ಮರಾಜ್ ಆಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣದ ಶೌಚಾಲಯದ ತೊಟ್ಟಿಗಳು ತುಂಬಿಹರಿಯುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಲ್ದಾಣದ ಪಕ್ಕದ ಮನೆಗಳಲ್ಲಿ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು
-ಮಧು, ಕರವೇ ತಾಲೂಕು ಉಸ್ತುವಾರಿ (ಪ್ರವೀಣ್ ಶೆಟ್ಟಿ ಬಣ)
– ಟಿ.ಕೆ.ಕುಮಾರಸ್ವಾಮಿ, ಟಿ.ತಿಮ್ಮನಹಳ್ಳಿ