Advertisement

ಕೆಟ್ಟ  ರಸ್ತೆಗಳು; ಟಿಕೆಟ್‌ ದರ ದುಪ್ಪಟ್ಟು

09:59 AM Sep 01, 2018 | |

ಮಹಾನಗರ: ಪ್ರಮುಖ ರಸ್ತೆಗಳು ಸಂಪರ್ಕ ಕಡಿದುಕೊಂಡು ಮಂಗಳೂರು- ಬೆಂಗಳೂರು ಪ್ರಯಾಣಿಕರು ಪರದಾಡುತ್ತಿರಬೇಕಾದರೆ ಗಣೇಶ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಇದು ಹಬ್ಬದ ಆಚರಣೆಗೆ ಊರಿಗೆ ಬರಲು ಅಣಿಯಾಗುತ್ತಿರುವ ಜನರಿಗೆ ಶಾಕ್‌.

Advertisement

ಹಿಂದೆಯೆಲ್ಲ ಹಬ್ಬದ ಸಂದರ್ಭ ಸ್ವಂತ ವಾಹನಗಳಲ್ಲಿ ಊರಿಗೆ ಬರುತ್ತಿದ್ದವರು ಈ ಬಾರಿ ಹಿಂದೇಟು ಹಾಕುತ್ತಿದ್ದಾರೆ. ರೈಲು ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗುತ್ತಿರುವುದರಿಂದ ಹಲವರು ಚಿಂತಿತರಾಗಿದ್ದಾರೆ. ಇದರಿಂದ ಈ ಬಾರಿ ಖಾಸಗಿ ಹಾಗೂ ಸರಕಾರಿ ಬಸ್‌ ಪ್ರಯಾಣಕ್ಕೆ ಹೆಚ್ಚಿನ ಬೇಡಿಕೆ ಹೆಚ್ಚಿದೆ. ಕೆಲವು ಖಾಸಗಿ ಬಸ್‌ನವರು ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದ್ದು, ಟಿಕೆಟ್‌ ದರ ದುಪ್ಪಟ್ಟು ಮಾಡುತ್ತಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 400ಕ್ಕೂ ಹೆಚ್ಚು ಖಾಸಗಿ ಬಸ್‌ ಸಂಚರಿಸುತ್ತವೆ. ಹಬ್ಬದ ಋತುವಿನಲ್ಲಿ ಹೆಚ್ಚುವರಿ ಬಸ್‌ ರಸ್ತೆಗಿಳಿಯುತ್ತವೆ. ಸಾಮಾನ್ಯ ದಿನಗಳಲ್ಲಿ ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಟಿಕೆಟ್‌ ದರ ಸುಮಾರು 600 ರೂ. ಆದರೆ ಆನ್‌ಲೈನ್‌ ಮೂಲಕ ಗಣೇಶ ಹಬ್ಬದ ಮುನ್ನಾದಿನ ಅಂದರೆ ಸೆ. 12ರಂದು ಬೆಂಗಳೂರಿನಿಂದ ಮಂಗಳೂರು ಟಿಕೆಟ್‌ ಗೆ 1,500 ರೂ. ನೀಡಬೇಕಿದೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಸರಕಾರಿ ಬಸ್‌ಗಳಲ್ಲಿ ಹಬ್ಬದ ದಿನಗಳು ಮತ್ತು ಸಾಮಾನ್ಯ ದಿನಗಳು ಎಂಬ ಎರಡು ದರಪಟ್ಟಿ ಇರುತ್ತದೆ. ಅದರ ಪ್ರಕಾರ ಸೆ. 1ರಿಂದ ಹಬ್ಬಗಳ ದಿನದ ದರ ಜಾರಿಯಾಗುತ್ತದೆ.

ರೈಲು ಸಂಪರ್ಕವೂ ಬಂದ್‌
ಮಂಗಳೂರು-ಬೆಂಗಳೂರು ರೈಲು ಮಾರ್ಗದ ನಡುವೆ ವಿವಿಧೆಡೆ ಹಳಿಗಳಿಗೆ ಗುಡ್ಡ ಕುಸಿದು ಬಿದ್ದ ಕಾರಣ ಸುಬ್ರಹ್ಮಣ್ಯ, ಸಕಲೇಶಪುರ ಮಾರ್ಗವಾಗಿ ರೈಲು ಸಂಚಾರ ಸದ್ಯ ರದ್ದಾಗಿದೆ. ಗಣೇಶ ಹಬ್ಬದ ಸಮಯಕ್ಕೂ ರೈಲು ಸಂಚಾರ ಪುನರಾರಂಭ ಅನುಮಾನ ಎಂದು ರೈಲ್ವೇ ಅಧಿಕಾರಿಗಳು ಹೇಳುತ್ತಾರೆ. ಈಗ ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬರಬೇಕಾದರೆ ಕೇರಳ ಮೂಲಕ ಬರಬೇಕು. ಅದು ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತದೆ.  

ಪ್ರಾರಂಭಿಕ ಬೆಲೆಯೇ 1,199 ರೂ.
ಆನ್‌ಲೈನ್‌ ಮೂಲಕ ಗಣೇಶ ಹಬ್ಬದ ಮುನ್ನಾದಿನ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಟಿಕೆಟ್‌ ಕಾಯ್ದಿರಿಸಬೇಕಾದರೆ ಪ್ರಾರಂಭಿಕ ಬೆಲೆಯೇ 1,199 ರೂ. ಇದೆ. ಸಾಮಾನ್ಯ ದಿನಗಳಲ್ಲಿ ಇದು ಸುಮಾರು 500 ರೂ.ಗಳಿಂದ ಪ್ರಾರಂಭವಾಗುತ್ತದೆ. ಆದರೆ ಈಗ ಎರಡು ಪಟ್ಟು ಹೆಚ್ಚಿಸಲಾಗಿದೆ.

Advertisement

ಹೆಚ್ಚುವರಿ ಬಸ್‌
ಹಬ್ಬಗಳ ಸಮಯದಲ್ಲಿ ಸಾಮಾನ್ಯವಾಗಿ ಸರಕಾರಿ ಬಸ್‌ ದರವೂ ಹೆಚ್ಚಳವಾಗುತ್ತದೆ. ಮಂಗಳೂರಿನಿಂದ ಬೆಂಗಳೂರಿಗೆ ಸದ್ಯ 45 ಬಸ್‌ಗಳು ಸಂಚರಿಸುತ್ತಿವೆ. ಗಣೇಶ ಹಬ್ಬದ ಪ್ರಯುಕ್ತ ಮತ್ತಷ್ಟು ಹೆಚ್ಚುವರಿ ಬಸ್‌ ನಿಯೋಜಿಸಲಾಗುವುದು. ಈ ಬಗ್ಗೆ ವಾರದೊಳಗೆ ಸಭೆ ನಡೆಸಿ ತೀರ್ಮಾನಿಸುತ್ತೇವೆ.
– ದೀಪಕ್‌ ಕುಮಾರ್‌,
  ಕೆಎಸ್ಸಾರ್ಟಿಸಿ ಮಂಗಳೂರು  ವಿಭಾಗಾಧಿಕಾರಿ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next