ರಾಣಿ, ಆಫೀಸಿನಿಂದ ಬಂದಾಗ ಮಗು ಹಸಿವಿನಿಂದ ಅಳುತ್ತಿತ್ತು. ಅಡುಗೆ ಮಾಡುತ್ತಿರುವಾಗ ತಂಗಿಯ ಫೋನ್ ಬಂದಿದೆ. ಮಾತು ಮುಗಿಯುತ್ತಿಲ್ಲ. ತಂಗಿ ಜೊತೆ ಫೋನಿನಲ್ಲಿ ಮಾತಾಡಿಕೊಂಡು ಮಗುವಿನ ಲಾಲನೆ- ಪೋಷಣೆ ಮಾಡಲು ಸಾಧ್ಯವಾಗಿಲ್ಲ. ಮಗು ಅತ್ತೂ ಅತ್ತೂ ಹಾಗೆಯೇ ನಿದ್ದೆ ಹೋಗಿದೆ. ಪತಿ ಆಫೀಸಿನಿಂದ ಬಂದರೂ ರಾಣಿಗೆ ಅವರ ಕಡೆ ಗಮನವಿಲ್ಲ. ಹೀಗೆ ಅನೇಕ ದಿನಗಳಿಂದ ನಡೆದಿದೆ. ಪತಿಗೆ ರಾಣಿಯ ಬಗ್ಗೆ ನಿರಾಸಕ್ತಿ ಮೂಡಿದೆ. ತಾಯಿಯ ಗಮನವಿಲ್ಲದೆ ಮಗು ಸೊರಗಿ ಹೋಗಿದ್ದರಿಂದ ಪತಿ ಜಗಳವಾಡಿದ್ದಾರೆ. ಇತ್ತೀಚೆಗೆ ರಾಣಿಗೆ ಎದೆ ಉರಿ. ಸಹಾಯಕ್ಕೆ ಬಾ ಎಂದರೆ, ತಂಗಿ ಫೋನ್ ತೆಗೆಯುತ್ತಿಲ್ಲ.
ಒಕ್ಕುಟುಂಬದಲ್ಲಿರುವ ಕಮಲಾ ಆ ಮನೆಗೆ ಹಿರಿಯ ಸೊಸೆ. ಜವಾಬ್ದಾರಿಯೆಲ್ಲಾ ತನ್ನದೇ ಅಂತ ತಿಳಿದು, ಮನೆಯ ಕೆಲಸ ಮಾಡುವ ಚಟ. ಅತ್ತೆಗೆ ತೊಂದರೆಯಾದರೆ ಎಂಬ ಕಾಳಜಿ. ಚಿಕ್ಕ ಸೊಸೆ ಮತ್ತು ನಾದಿನಿ ಕೆಲಸಕ್ಕೆ ಹೋಗುವುದರಿಂದ ಅವರಿಗೂ ಸಹಾಯ ಮಾಡಬೇಕೆನಿಸುತ್ತದೆ. ಆದರೆ, ಕಮಲಾ ತನ್ನ ಮಕ್ಕಳಿಗೆ ಪಾಠ ಹೇಳುವುದು ಬಿಟ್ಟು, ದೋಸೆ ಹಿಟ್ಟು ತಿರುವುತ್ತಾ ಕೂತರೆ, ಮಕ್ಕಳು ಓದುವುದು ಹೇಗೆ? ಈ ಸಲ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದಾಗಿನಿಂದ ಪತಿ ಗುಡುಗಿದ್ದಾರೆ. ಕಮಲಾಗೆ ಹೊಟ್ಟೆನೋವು- ವಾಂತಿ. ಕುಟುಂಬದವರು ಇವಳಿಗಾಗಿ ಕಾಳಜಿ ವಹಿಸಿಲ್ಲ.
ಸೌಮ್ಯಾಳ ಸ್ನೇಹಿತೆ, ತಾಯಿಗೆ ಹುಷಾರಿಲ್ಲವೆಂದು ಈಕೆಯ ಬಳಿ ಸಾಲ ಕೇಳಿದ್ದಾರೆ. ಸೌಮ್ಯಾ ಬಳಿ ಅತ್ತಿಗೆ ಕೊಟ್ಟ ಹಣವಿತ್ತು. ಆಪತ್ತಿಗಾಗಲಿ ಎಂದು ಅತ್ತಿಗೆ, ಸೌಮ್ಯಾ ಬಳಿ ಅದನ್ನು ಕೊಟ್ಟಿದ್ದರು. ಸ್ನೇಹಿತೆಗೆ ಸಹಾಯ ಮಾಡಬೇಕು ಎಂದು ಸೌಮ್ಯಾಗೆ ಬಹಳ ಅನಿಸಿಬಿಟ್ಟಿದೆ. ಅತ್ತಿಗೆಯ ದುಡ್ಡು ತೆಗೆದು ಸ್ನೇಹಿತೆಗೆ ಕೊಟ್ಟಿದ್ದಾರೆ. ಎಷ್ಟು ದಿನಗಳಾದರೂ ಹಣ ಹಿಂತಿರುಗಿ ಬಂದಿಲ್ಲ. ಅಷ್ಟರಲ್ಲಿ ಅತ್ತಿಗೆ ತನ್ನ ದುಡ್ಡು ಹಿಂಪಡೆಯಲು ಫೋನ್ ಮಾಡಿದ್ದಾರೆ. ಸೌಮ್ಯಾಗೆ ಪೇಚಾಟ. ದೊಡ್ಡ ಮೊತ್ತದ ಹಣವಾದ್ದರಿಂದ ಅತ್ತಿಗೆಯೂ ಕಿಡಿ ಕಾರಿದ್ದಾರೆ. ಪತಿಗೆ ಕೋಪ ಬಂದಿದೆ. ಇತ್ತ ಹಣ ಪಡೆದ ಸ್ನೇಹಿತೆಯೂ ಮಾತುಬಿಟ್ಟಿದ್ದಾರೆ. ಈಗ ಸೌಮ್ಯಾಗೆ ನಿಲ್ಲದಂತೆ ಭೇದಿ ಶುರುವಾಗಿದೆ.
ಗ್ಯಾಸ್ಟ್ರೋ ತಜ್ಞರು ಇವರನ್ನು ನನ್ನ ಬಳಿ ಕಳಿಸಿದ್ದರು. ಎದೆ ಉರಿ, ಹೊಟ್ಟೆನೋವು, ವಾಂತಿ-ಭೇದಿಯೆಂದು ವೈದ್ಯರ ಬಳಿ ಹೋದಾಗ; ಸೋಂಕಿನಿಂದ ಸಮಸ್ಯೆ ಶುರುವಾಗಿದ್ದಾದರೆ, ಮಾತ್ರೆಗಳಿಂದ ತಕ್ಷಣ ನಿವಾರಣೆಯಾಗುತ್ತದೆ. ಆದರೆ, ಮಾನಸಿಕ ಒತ್ತಡವಿದ್ದಲ್ಲಿ ತಕ್ಷಣ ವಾಸಿಯಾಗುವುದಿಲ್ಲ. ಮನೆಮದ್ದಿಗೂ ಕಾಯಿಲೆ ಬಗ್ಗುವುದಿಲ್ಲ. ಆಗ ಕೌನ್ಸೆಲಿಂಗ್ ಒಂದೇ ಅದಕ್ಕೆ ಪರಿಹಾರ.
ತಂಗಿಗೆ ಪ್ರೀತಿ, ಒಕ್ಕುಟುಂಬಕ್ಕೆ ಸಮಯ ಮತ್ತು ಸ್ನೇಹಿತೆಗೆ ಹಣ ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ಇಲ್ಲಿ ಸಾಮಾಜಿಕ ಹೊಣೆಗಾರಿಕೆಗಾಗಿ ಮೂವರೂ ತಮ್ಮ ಕೌಟುಂಬಿಕ ಜವಾಬ್ದಾರಿಯನ್ನು ಕಡೆಗಣಿಸಿದ್ದಾರೆ. ಇವರಿಗೆ ಸಮಾಜದ ಮೆಚ್ಚುಗೆ ಬೇಕೆನಿಸುತ್ತದೆ. ಕೊನೆಗೆ ಶಹಭಾಷ್‌ಗಿರಿ ಹೋಗಲಿ, ಅನಾರೋಗ್ಯದಲ್ಲಿಯೂ ಯಾರೂ ಸಹಾಯಕ್ಕೆ ಬರುವುದಿಲ್ಲ. ಸಂಬಂಧಗಳು ಕೆಟ್ಟಾಗ, ಮನಸ್ತಾಪವಾಗಿ ವೈಯಕ್ತಿಕ ಆರೋಗ್ಯವೂ ಕೆಡುತ್ತದೆ. ಶೋಷಣೆ ನಡೆಯದಿದ್ದರೂ ಶೋಷಿತೆ ಎಂಬ ಭಾವನೆ ಸುಳಿದು ಅನಾರೋಗ್ಯ ಕಾಡುತ್ತದೆ.
ಪ್ರೀತಿ, ಹಣ ಮತ್ತು ಸಮಯ ಬಹಳ ಶ್ರೇಷ್ಠ ಸಂಪನ್ಮೂಲಗಳು. ಹೂಡಿಕೆಯಲ್ಲಿ ನಿಗಾ ಇಡಿ! ಕೊಟ್ ಮೇಲ್ ಚಟ್!
ಶುಭಾ ಮಧುಸೂದನ್