Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ವಸ್ತು ಬಳಕೆ

07:41 AM Mar 11, 2019 | Team Udayavani |

ಮಾಗಡಿ: ಹಸಿದವರಿಗೆ ಕಡಿಮೆ ಬೆಲೆಯಲ್ಲಿ ಊಟ ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಿದೆ. ಆದರೆ, ಈ ಕ್ಯಾಂಟೀನ್‌ನಲ್ಲಿ ಅವಧಿ ಮುಗಿದ ಅಕ್ಕಿ, ಎಣ್ಣೆ ಹಾಗೂ ಕಳಪೆ ಆಹಾರ ವಸ್ತುಗಳನ್ನು ಬಳಸಿ ಅಡುಗೆ ತಯಾರಿಸುತ್ತಿರುವುದು ಕಂಡು ಬಂದಿದೆ. ಅಡುಗೆಯಲ್ಲಿ ಗುಣಮಟ್ಟ ಕಾಪಾಡುತ್ತಿಲ್ಲ ಎಂದು ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಅಕ್ಕಿಯ ಮೂಟೆಗಳ ಮೇಲೆ ಅವಧಿ ನಿಗದಿ: ಮಾಗಡಿ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ ಸುಮಾರು 900 ಮಂದಿ ಊಟ ಸೇವಿಸುತ್ತಿದ್ದು, ಇಲ್ಲಿಗೆ ಒಂದು ದಿನಕ್ಕೆ 100 ಕೆ.ಜಿ ಅಕ್ಕಿಯ ಅಗತ್ಯವಿದೆ. ಅನ್ನ ತಯರಿಸಲು ಒಂದು ಬಗೆಯ ಅಕ್ಕಿ, ಪಲಾವ್‌ ತಯಾರಿಸಲು ಇನ್ನೊಂದು ಬಗೆಯ ಅಕ್ಕಿ ಹಾಗೂ ಮೊಸರನ್ನ ತಯಾರಿಸಲು ಅಕ್ಕಿಯ ನುಚ್ಚನ್ನು ಬಳಸಲಾಗುತ್ತಿದೆ.

ಅನ್ನ ತಯಾರಿಸಲು ಬಳಸುವ ಅಕ್ಕಿಯ ಮೂಟೆಗಳ ಮೇಲೆ 2017/18 ಎಂದು ತಯಾರಿಕೆ ವರ್ಷ ಎಂದಿದೆ. ಒಂದು ವರ್ಷದೊಳಗೆ ಬಳಸಬೇಕು ಎಂದು ನಮೂದಿಸಿದ್ದು. ಅವಧಿ ಮುಗಿದ ನಂತರವೂ ಅಕ್ಕಿಯನ್ನು ಬಳಸುತ್ತಿರುವುದು ಕಂಡು ಬಂದಿದೆ. ಅಲ್ಲದೆ, ಪಲಾವ್‌ ತಯಾರಿಸಲೆಂದು ಬಳಸುತ್ತಿರುವ ಅಕ್ಕಿ ಎರಡು ಬಣ್ಣದಲ್ಲಿದೆ.

ಬಡ ಜನರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿದ್ದರು. ಈ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ 5 ರೂ., ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಕೇವಲ 10 ರೂ., ಗಳಿಗೆ ನೀಡುತ್ತಿದ್ದ ಕಾರಣ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿ ದಿನ ನೂರಾರು ಮಂದಿ ಊಟ ಮಾಡುತ್ತಿದ್ದು, ಇದು ಬಡವರ ಹಸಿವು ನೀಗಿಸುವ ಕೇಂದ್ರವಾಗಿದೆ.

ಪುರಸಭೆಯಿಂದ 35 ರೂ. ಪಾವತಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಒಂದು ಊಟಕ್ಕೆ 45 ರೂ. ಆಗುತ್ತದೆ. ಗ್ರಾಹಕರಿಂದ ಇಂದು ಊಟಕ್ಕೆ 10 ರೂ. ಪಡೆಯುತ್ತಿದ್ದು, ಉಳಿದ ಸುಮಾರು 35 ರೂ.ಗಳನ್ನು ಸ್ಥಳೀಯ ಪುರಸಭೆ ಪಾವತಿಸುತ್ತಿದೆ. ಇಷ್ಟು ಹಣದಲ್ಲಿ ರುಚಿಯಾದ ಆಹಾರವನ್ನು ಒದಗಿಸಬಹುದಾಗಿದ್ದು, ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಆಹಾರವನ್ನು ತಯಾರಿಸಬಹುದಾಗಿದೆ.

Advertisement

ಅವಧಿ ಮುಗಿದ ಹಾಗೂ ಬೇರೆ ಬ್ರ್ಯಾಂಡ್‌ ಎಣ್ಣೆ ಬಳಕೆ: ಇಂದಿರಾ ಕ್ಯಾಂಟೀನ್‌ನಲ್ಲಿ ಅಡುಗೆ ತಯಾರಿಸಲು ಗುಣಮಟ್ಟದ ಎಣ್ಣೆಯನ್ನು ಬಳಸಬೇಕಿದೆ. ಅದರೆ, ಮಾಗಡಿ ಕ್ಯಾಂಟೀನ್‌ನಲ್ಲಿ ಸನ್‌ಫವರ್‌ ಬ್ರ್ಯಾಂಡ್‌ನ‌ ಬದಲಿಗೆ ಬೇರೆ ಬ್ರ್ಯಾಂಡ್‌ನ‌ ಎಣ್ಣೆಯನ್ನು ಬಳಸುತ್ತಿದ್ದು, ಎಣ್ಣೆ ಟಿನ್‌ ಮೇಲೆ ಪ್ಯಾಕ್‌ ಮಾಡಿದ 6 ತಿಂಗಳ ಅವಧಿಯಲ್ಲಿ ಬಳಸಬೇಕು ಎಂದು ನಮೂದಿಸಿದ್ದು, ಇದು ಸಹ ಅವಧಿ ಮುಗಿದಿರುವುದು ಕಂಡು ಬಂದಿದೆ.

ಕ್ಯಾಂಟೀನ್‌ನಿಂದ ಸಾರ್ವಜನಿಕರು ದೂರ: ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸುವ ಅಡುಗೆ ಅತ್ಯಂತ ಕಳಪೆಯಾಗಿದ್ದು, ಅನ್ನ ಸರಿ ಬೆಂದಿರುವುದಿಲ್ಲ. ಸಾಂಬರ್‌ನಲ್ಲಿ ಖಾರ ಹೆಚ್ಚಾಗಿರುತ್ತದೆ. ಅನ್ನ ಮುದ್ದೆಯಾಗಿರುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಒದಗಿಸಬೇಕು ಎಂದು ತೆರೆದಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದು, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ನಿಂದ ವಿಮುಖರಾಗುವ ಪರಿಸ್ಥಿತಿ ಮಾಗಡಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಬಳಸುತ್ತಿರುವ ಆಹಾರವನ್ನು ಪರಿಶೀಲಿಸಿ ಸಂಪೂರ್ಣ ವರದಿ ತಯಾರಿಸಲಾಗುವುದು. ಆಹಾರ ಸಾಮಗ್ರಿಗಳು ಅವಧಿ ಮುಗಿದಿರುವುದು ಹಾಗೂ ಕಳಪೆ ಎಂದು ಕಂಡು ಬಂದರೆ, ಸಾಮಗ್ರಿಗಳನ್ನು ಪೂರೈಸುವ ಟೆಂಡರ್‌ ಪಡೆದಿರುವ ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. 
-ಸುಷ್ಮಾ, ಪುರಸಭೆ ಪರಿಸರ ಅಭಿಯಂತರರು

ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ತಯಾರಿ ಮಾಡುತ್ತಿರುವುದು ಗೊತ್ತಿಲ್ಲ. ಒಂದು ವೇಳೇ ಕಳಪೆ ಕಂಡು ಬಂದರೆ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಎಚ್‌.ಆರ್‌.ಮಂಜುನಾಥ್‌, ಅಧ್ಯಕ್ಷ, ಮಾಗಡಿ ಪುರಸಭೆ

ಕಳಪೆ ಸಾಮಗ್ರಿಗಳನ್ನು ಬಳಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಅಡುಗೆ ತಯಾರಿಸಲಾಗುತ್ತಿದೆ. ಅನ್ನಕ್ಕೆ ಬಳಸುವ ಅಕ್ಕಿಯಲ್ಲಿ ರುಚಿ ಇಲ್ಲ. ಮುಗ್ಗಲು ಅಕ್ಕಿಯನ್ನು ಬಳಸಲಾಗುತ್ತಿದೆ. ಮಧ್ಯಾಹ್ನದ ಅಡುಗೆಯನ್ನು ಬೆಳಗ್ಗೆಯೇ ತಯಾರಿಸುತ್ತಾರೆ. ಈ ಬಗ್ಗೆ ಪುರಸಭೆಯ ಪರಿಸರ ಅಭಿಯಂತರರಿಗೆ ಪತ್ರವನ್ನು ಸಹ ಬರೆದಿದ್ದೇನೆ.
-ಎಂ.ಬಿ.ಮಹೇಶ್‌, ಪುರಸಭಾ ಸದಸ್ಯರು

ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವತ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಸಾಂಬರ್‌ನಲ್ಲಿ ಜಿರಲೆ ಹಾಗೂ ಕ್ರೀಮಿ ಕೀಟಗಳು ಬಿದ್ದಿರುವುದು ಕಾಣುತ್ತಿದೆ. 10 ರೂ.,ಗೆ ಯಾವ ಅಹಾರ ನೀಡಿದ್ದರೂ ಜನರು ಸೇವಿಸುತ್ತಾರೆ ಎಂಬ ಕಾರಣದಿಂದ ಆಹಾರ ತಯಾರಿಕೆಯಲ್ಲಿ ಸ್ವತ್ಛತೆ ಕಾಪಾಡುತ್ತಿಲ್ಲ. ಆಹಾರ ತಯಾರಿಸಲು ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ.
-ಮುನಿಯಪ್ಪ, ಕಲ್ಯಾಗೇಟ್‌ ನಿವಾಸಿ

ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸುವ ಅನ್ನದಲ್ಲಿ ರುಚಿ ಇರುವುದಿಲ್ಲ. ಅಲ್ಲದೇ ಅನ್ನ ಮುದ್ದೆಯಾಗುತ್ತದೆ. ಸಾಮಗ್ರಿಗಳನ್ನು ಪಡೆಯುವವರು ಗುಣಮಟ್ಟ ಮತ್ತು ಅವಧಿಯನ್ನು ಪರಿಶೀಲಿಸಿದ ನಂತರ ಪಡೆದು ಬಳಸಬೇಕಿದೆ. ಅದರೆ, ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ ಇದನ್ನು ಪರಿಶೀಲಿಸಿಲ್ಲ.
-ಮನು, ಗಾಂಧಿನಗರ ನಿವಾಸಿ

* ತಿರುಮಲೆ ಶ್ರೀನಿವಾಸ್

Advertisement

Udayavani is now on Telegram. Click here to join our channel and stay updated with the latest news.

Next