Advertisement
ಮಹಾನಗರ: ಮೊನ್ನೆ ಸುರಿದ ಭಾರೀ ಮಳೆಗೆ ಮಂಗಳೂರು ನಗರ ತತ್ತರಗೊಳ್ಳುವುದರ ಜತೆಗೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶವೂ ನಲುಗಿ ಹೋಗಿವೆ. ಸುಮಾರು 10 ಕೋ.ರೂ. ಗೂ ಅಧಿಕ ನಷ್ಟ ಸಂಭವಿಸಿದೆ. ಇಂತಹ ಸಮಸ್ಯೆಗೆ ಮೂಲ ಕಾರಣ ಏನು ಎಂಬ ಪ್ರಶ್ನೆ ಎದುರಾದಾಗ ಸಿಕ್ಕ ಉತ್ತರವೇ ಚರಂಡಿ/ತೋಡು ಸಮಸ್ಯೆ!ಬೈಕಂಪಾಡಿ ಕೈಗಾರಿಕ ಪ್ರದೇಶವು ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿಕೊಡುವ ಜತೆಗೆ ಹಲವು ಉತ್ಪನ್ನಗಳ ರಫ್ತು ಮಾಡುವುದಕ್ಕೆ ಮೂಲ ಸ್ಥಳವಾಗಿದೆ. ಸರಿ ಸುಮಾರು 700ರಷ್ಟು ಕೈಗಾರಿಕೆಗಳು ಇಲ್ಲಿ ನಿತ್ಯ ಉದ್ಯಮ ನಡೆಸುತ್ತಿವೆ. ಆದರೆ, ಮೊನ್ನೆಯ ಮಳೆಗೆ ಮಂಗಳೂರು ಮುಳುಗುವುದರ ಜತೆಗೆ ಕೈಗಾರಿಕೆಗಳನ್ನೂ ಮುಳುಗಿಸಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೈಗಾರಿಕೆಗಳು ಸಂಕಷ್ಟ ಎದುರಿಸುವಂತಾಯಿತು. ಹಲವು ಜನರ ಬದುಕಿಗೆ ಬೆಳಕಾಗಬೇಕಾದ ಕೈಗಾರಿಕೆಗಳು ಇಂದು ಆರ್ಥಿಕ ನಷ್ಟಕ್ಕೆ ತುತ್ತಾಗಿ ಸಮಸ್ಯೆ ಅನುಭವಿಸುತ್ತಿವೆ.
ಬೈಕಂಪಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕೈಗಾರಿಕಾ ಪ್ರದೇಶದ ಅಕ್ಕ ಪಕ್ಕದಲ್ಲಿರುವ ದೊಡ್ಡ ತೋಡುಗಳು ಮಳೆ ನೀರು ಹರಿಯಲು ಸಾಧ್ಯವಾಗದೆ ತೋಡು ಬಿಟ್ಟು ರಸ್ತೆ- ಕೈಗಾರಿಕಾ ವಲಯಕ್ಕೆ ಬರು ವಂತಾಯಿತು. ತೋಡನ್ನು ಪ್ರತೀ ವರ್ಷ ಸ್ವಚ್ಛಗೊಳಿಸಬೇಕಾದ ಕೆಐಎಡಿಬಿ ಅವರು ಈ ಬಗ್ಗೆ ಕ್ಯಾರೇ ಅನ್ನದಿರುವುದರಿಂದ ಈ ಬಾರಿ ಸಮಸ್ಯೆ ಉಲ್ಬಣವಾಗಿದೆ. ಸ್ವಚ್ಛಗೊಳಿಸುವುದೇ ಇಲ್ಲ!
ಹೇಳುವುದಕ್ಕೆ ಇದು ಕೈಗಾರಿಕಾ ವಲಯ. ರಾಜ್ಯ- ದೇಶದ ವಿವಿಧ ಭಾಗದ ಕಾರ್ಮಿಕರು ಇಲ್ಲಿಗೆ ಕೆಲಸಕ್ಕೆಂದು ಬರುತ್ತಾರೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆ ಬದಿ ನಿಲ್ಲುವ ಬೃಹತ್ ವಾಹನಗಳಿಂದ ಜನರು ಪ್ಲಾಸ್ಟಿಕ್, ಬಾಟಲ್, ಕಸ ಕಡ್ಡಿ ಎಲ್ಲವನ್ನೂ ಎಸೆಯುವುದು ಇಲ್ಲಿನ ಮಳೆ ನೀರು ಹರಿಯುವ ಚರಂಡಿಗೆ.
Related Articles
Advertisement
ಕೈಗಾರಿಕಾ ವಲಯದಲ್ಲಿ ಒಳಚರಂಡಿ, ಮಳೆ ನೀರು ಚರಂಡಿ ಸಹಿತ ಸಾಕಷ್ಟು ಸಮಸ್ಯೆಗಳಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿಗಾಗಿ ಸಮಿತಿ ಕೂಡ ರಚಿಸಲಾಗಿದೆ. ಕೆನರಾ ಸಣ್ಣ ಕೈಗಾರಿಕಾ ಸಂಘದ ಪ್ರತಿನಿಧಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಕೆಐಎಡಿಬಿ, ಎನ್.ಐ.ಟಿ.ಕೆ. ಪ್ರತಿನಿಧಿಗಳು ಸಮಿತಿಯಲ್ಲಿದ್ದಾರೆ.
ತೋಡು – ಚರಂಡಿ ಕೇಳುವವರೇ ಇಲ್ಲ !ಕೆಐಎಡಿಬಿಯವರು ಬೈಕಂಪಾಡಿ ಕೈಗಾರಿಕಾ ವ್ಯಾಪ್ತಿಯ ತೋಡು-ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದ ಈ ಬಾರಿಯ ಮಳೆಗೆ ಸಮಸ್ಯೆ ಸೃಷ್ಟಿಯಾಗಿದೆ ಎಂಬ ಆರೋಪ ಕೈಗಾರಿಕೋದ್ಯಮಿಗಳದ್ದು. ಬೈಕಂಪಾಡಿಯ ಓವರ್ ಬ್ರಿಡ್ಜ್ ವರೆಗಿನ ತೋಡು-ಚರಂಡಿಯನ್ನು ಎನ್.ಎಂ.ಪಿ.ಟಿ.ಯವರೇ ನಿರ್ವಹಿಸುತ್ತಾರೆ. ಬೈಕಂಪಾಡಿಯ ಎಂ.ಆರ್.ಪಿ.ಎಲ್. ಪಂಪ್ ಹೌಸ್ ಬಳಿಕದಿಂದ ಮಂಗಳೂರು ಪಾಲಿಕೆ ನಿರ್ವಹಿಸುತ್ತದೆ. ಇದರ ಮಧ್ಯದ ಪ್ರದೇಶದಲ್ಲಿ ಕೆಐಎಡಿಬಿ ಹಾಗೂ ಎಪಿಎಂಸಿ ಅವರು ಚರಂಡಿ-ತೋಡು ನಿರ್ವಹಿಸಬೇಕು. ಆದರೆ, ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸದ ಕಾರಣದಿಂದ ಇಂದು ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದು ಕೈಗಾರಿಕೆಗಳ ವಾದ. ಮಳೆ ನೀರು ನುಗ್ಗಿದ ಪ್ರದೇಶಗಳಿಗೆ ಮೇಯರ್ ಭೇಟಿ
ಕಳೆದ ಮಂಗಳವಾರ ಸುರಿದ ಭಾರೀ ಮಳೆಗೆ ನೀರು ನುಗ್ಗಿದ ನಗರದ ಪ್ರದೇಶಗಳಿಗೆ ಪಾಲಿಕೆ ಮೇಯರ್ ಭಾಸ್ಕರ್ ಕೆ. ಭೇಟಿ ನೀಡಿ ಪರಿಶೀಲಿಸಿದರು. ನಗರದ ಲಾಲ್ ಬಾಗ್, ಕೊಟ್ಟಾರ ಚೌಕಿ, ಪಂಪ್ ವೆಲ್, ಜಪ್ಪಿನಮೊಗರು ಸಹಿತ ಮತ್ತಿತರ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಕಾರಣದಿಂದಾಗಿ ರಾಜಕಾಲುವೆ, ನೀರು ಹರಿಯುವ ತೋಡುಗಳು ಬ್ಲಾಕ್ ಆಗಿವೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುವುದಿಲ್ಲ. ಕೆಲವು ಕಡೆಗಳಲ್ಲಿ ರಾಜಕಾಲುವೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಕೂಡಲೇ ಒತ್ತುವರಿ ಪ್ರದೇಶಗಳನ್ನು ಬಿಟ್ಟುಕೊಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು. ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿ’ಸೋಜಾ, ಪ್ರವೀಣ್ ಚಂದ್ರ ಆಳ್ವ, ಆಶಾ ಡಿ’ಸಿಲ್ವ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು. ಮೊನ್ನೆಯ ಮಳೆಗೆ 10 ಕೋ.ರೂ. ನಷ್ಟ !
ಬೈಕಂಪಾಡಿ ಕೈಗಾರಿಕಾ ವಲಯಕ್ಕೆ ಇತ್ತೀಚೆಗೆ ಮಳೆ ನೀರು ನುಗ್ಗಿ ಸುಮಾರು 10 ಕೋ. ರೂ. ಗೂ ಅಧಿಕ ನಷ್ಟವಾಗಿದೆ. ಉತ್ಪಾದನೆ ಸ್ಥಗಿತಗೊಳಿಸಿರುವ ಹೆಚ್ಚಿನ ಕೈಗಾರಿಕೆಗಳು ಇನ್ನೂ ಪುನರಾರಂಭ ಆಗಿಲ್ಲ. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಸುಮಾರು 700ಕ್ಕೂ ಅಧಿಕ ಕೈಗಾರಿಕೆಗಳಿವೆ. ಅದರಲ್ಲಿ ಬಹುತೇಕ ಕೈಗಾರಿಕೆಗಳ ಒಳಗೆ ನೆರೆ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು.