ವಾರಣಾಸಿ: ಉತ್ತರ ಭಾರತವನ್ನು ಅದರಲ್ಲೂ ಮುಖ್ಯವಾಗಿ ದೆಹಲಿ, ಗುರ್ಗಾಂವ್, ನೋಯ್ಡಾ ಪ್ರದೇಶಗಳ ಜನರನ್ನು ಕಳೆದ ಕೆಲವು ಸಮಯಗಳಿಂದ ಕಾಡುತ್ತಿರುವ ವಾಯುಮಾಲಿನ್ಯ ಸ್ಥಿತಿ ಇದೀಗ ಎಷ್ಟು ಗಂಭೀರ ಮಟ್ಟಕ್ಕೆ ಹೋಗಿದೆ ಎಂದರೆ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳೂ ಸಹ ಮಾಸ್ಕ್ ಧರಿಸುವಂತ ಸ್ಥಿತಿ ನಿರ್ಮಾಣವಾಗಿದೆ!
ಆಶ್ಚರ್ಯವಾಗುತ್ತಿದೆಯೇ?, ಅದರೂ ಈ ವಿಚಾರ ಸತ್ಯ. ದೀಪಾವಳಿ ಆಚರಣೆಯ ಬಳಿಕ ಈ ಭಾಗಗಳಲ್ಲಿ ಶುದ್ಧ ಗಾಳಿಯ ಪ್ರಮಾಣ ಗಂಭೀರ ಮಟ್ಟದಲ್ಲಿ ಇಳಿಮುಖಗೊಂಡಿದೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ವಾಯು ಗುಣಮಟ್ಟ ಮಾಪನ ಈ ವಾರ 500ಕ್ಕೆ ಮುಟ್ಟಿತ್ತು.
ಇದರ ಪರಿಣಾಮ ಇದೀಗ ದೇವಳಗಳ ನಗರಿ ಎಂದೇ ಹೆಸರುವಾಸಿಯಾಗಿರುವ ವಾರಣಾಸಿಯಲ್ಲಿರುವ ವಿವಿಧ ದೇವತಾ ಮಂದಿರಗಳಿಗೂ ತಟ್ಟಿದ್ದು ಇಲ್ಲಿನ ದೇವತೆಗಳ ವಿಗ್ರಹಗಳಿಗೆ ಮಾಸ್ಕ್ ತೊಡಿಸಲಾಗಿದೆ.
ಇಲ್ಲಿನ ದೇವತಾ ವಿಗ್ರಹಗಳಿಗೆ ಮಾಲಿನ್ಯ ನಿಯಂತ್ರಣ ಮುಖಗವಸುಗಳನ್ನು ತೊಡಿಸುವ ಮೂಲಕ ಭಕ್ತಾಧಿಗಳು ಇದೀಗ ತಾವು ನಂಬುವ ದೇವರ ಆರೋಗ್ಯ ಕಾಪಾಟಲು ಪಣತೊಟ್ಟಿದ್ದಾರೆ. ಇಲ್ಲಿನ ಸಿಗ್ರಾದಲ್ಲಿರುವ ಪ್ರಸಿದ್ಧ ಶಿವ-ಪಾರ್ವತಿ ದೇವಸ್ಥಾನದಲ್ಲಿ ಶಿವ, ದುರ್ಗೆ, ಕಾಳಿ ಮತ್ತು ಸಾಯಿ ಬಾಬಾ ವಿಗ್ರಹಗಳ ಮುಖಭಾಗಗಳಿಗೆ ಮಾಸ್ಕ್ ತೊಡಿಸಲಾಗಿದೆ.
‘ನಾವು ನಮ್ಮ ದೇವರನ್ನು ಜೀವಂತ ಶಕ್ತಿಗಳೆಂದೇ ನಂಬುತ್ತೇವೆ. ಕಡುಬೇಸಿಗೆಯ ದಿನಗಳಲ್ಲಿ ನಾವು ಈ ದೇವತಾ ವಿಗ್ರಹಗಳಿಗೆ ಗಂಧವನ್ನು ಲೇಪಿಸುವ ಮೂಲಕ ತಂಪಾಗಿರಿಸುತ್ತೇವೆ ಇನ್ನು ಚಳಿಗಾಲದಲ್ಲಿ ವಿಗ್ರಹಗಳಿಗೆ ಉಣ್ಣೆಯ ಬಟ್ಟೆಗಳನ್ನು ತೊಡಿಸುವ ಮೂಲಕ ನಮ್ಮ ದೇವರನ್ನು ಬೆಚ್ಚಗೆ ಇರಿಸುತ್ತೇವೆ ಹಾಗೆಯೇ ಇದೀಗ ಎಲ್ಲಾ ಕಡೆ ವಾತಾವರಣದಲ್ಲಿ ಗಾಳಿ ಕಲುಷಿತಗೊಂಡಿರುವುದರಿಂದ ದೇವರ ವಿಗ್ರಹಗಳಿಗೂ ಮುಖಗವಸನ್ನು ತೊಡಿಸಿದ್ದೇವೆ ಇದರಲ್ಲಿ ವಿಶೇಷವೇನೂ ಇಲ್ಲ’ ಎಂದು ದೇವಸ್ಥಾನದ ಅರ್ಚಕರು ಪ್ರತಿಕ್ರಿಯಿಸಿದ್ದಾರೆ.
ಇನ್ನು ದೇವರ ವಿಗ್ರಹಗಳಿಗೆ ಈ ರೀತಿ ಮುಖಗವಸನ್ನು ತೊಡಿಸಿರುವುದನ್ನು ನೋಡಿದ ಭಕ್ತಾದಿಗಳು ತಾವೂ ಮಾಸ್ಕ್ ತೊಟ್ಟುಕೊಳ್ಳಲು ಪ್ರಾರಂಭಿಸಿದ್ದಾರಂತೆ. ಒಟ್ಟಿನಲ್ಲಿ ವಾಯುಮಾಲಿನ್ಯದ ಪ್ರಭಾವ ಜನರು, ಪ್ರಾಣಿ ಪಕ್ಷಿಗಳನ್ನು ಮಾತ್ರವಲ್ಲದೇ ದೇವಾನುದೇವತೆಗಳ ವಿಗ್ರಹಗಳಿಗೂ ತಟ್ಟಿರುವುದು ಯೋಚಿಸಬೇಕಾದ ವಿಷಯವೇ ಸರಿ.