Advertisement

ಪಕ್ಕದಲ್ಲೇ ಹಿನ್ನೀರು; ಆದ್ರೂ ತಪ್ಪಿಲ್ಲ ಪರದಾಟ!

01:39 PM Sep 10, 2022 | Team Udayavani |

ಬಾಗಲಕೋಟೆ: ಇದು ಪಕ್ಕಾ ವಿದ್ಯಾವಂತರ ನಗರ. ಸುಮಾರು 5ರಿಂದ 6 ಸಾವಿರ ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಅತ್ಯಂತ ಪ್ರತಿಷ್ಠಿತ ಜನರು, ಶಾಲೆ-ಕಾಲೇಜು ಇವೆ. ಇಲ್ಲಿ ವಾಸಿಸುವ ಬಹುತೇಕರೂ ಒಂದಲ್ಲ ಒಂದು ನೌಕರಿ, ಉದ್ಯಮ ನಡೆಸುತ್ತಾರೆ. ಬದುಕಿಗೆ ಯಾವುದೇ ಕೊರತೆ ಇಲ್ಲ. ಮಧ್ಯಮ ವರ್ಗ ಮತ್ತು ಶ್ರೀಮಂತರೇ. ಆದರೆ, ಕಳೆದ 20 ದಿನಗಳಿಂದ ನೀರಿಗಾಗಿ ತೀವ್ರವಾಗಿ ಪರದಾಡುತ್ತಿದ್ದಾರೆ ಎಂದರೆ ನಂಬಲೇಬೇಕು.!

Advertisement

ಹೌದು, ಇದು ಇಲ್ಲಿನ ವಿದ್ಯಾಗಿರಿಯ ಸಮಸ್ಯೆ. ರಸ್ತೆ ಸಂಖ್ಯೆ 3ರಿಂದ 23ರ ವರೆಗೆ ಬಡಾವಣೆ ವಿಸ್ತಾರ ಹೊಂದಿದೆ. ವಿದ್ಯಾಗಿರ-ನವನಗರಕ್ಕೆ ಹೊಂದಿಕೊಂಡಿರುವ ಹೊಸ ಪ್ರವಾಸಿ ಮಂದಿರದಿಂದ ರೂಪಲ್ಯಾಂಡ್‌ವರೆಗೂ ವಿದ್ಯಾಗಿರಿ ವಿಸ್ತರಿಸಿಕೊಂಡಿದೆ. ಇವು ಖಾಸಗಿ ಲೇಔಟ್‌ಗಳಾಗಿದ್ದು, ಅಭಿವೃದ್ಧಿಗೊಂಡು ನಗರಸಭೆಗೆ ಹಸ್ತಾಂತರಗೊಂಡು ಹಲವು ವರ್ಷಗಳೇ ಕಳೆದಿವೆ. ಇಲ್ಲಿನ ಸಂಪೂರ್ಣ ನಿರ್ವಹಣೆ, ಮೂಲಭೂತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನಗರಸಭೆಗಿದೆ.

ಇದೊಂದೇ ಬಡಾವಣೆಯಿಂದ ಓರ್ವ ನಗರಸಭೆ ಸದಸ್ಯರೂ ಇದ್ದಾರೆ. ಇನ್ನೊಂದು ಪ್ರಮುಖ ವಿಶೇಷವೆಂದರೆ, ವಿದ್ಯಾಗಿರಿಯ ಕೂದಲೆಳೆ (ಸುಮಾರು 300 ಮೀಟರ್‌ ದೂರ ಇರಬಹುದು) ದೂರದಲ್ಲೇ ಆಲಮಟ್ಟಿ ಜಲಾಶಯದ ಹಿನ್ನೀರು ಬೃಹದಾಕಾರವಾಗಿದೆ. ಆದರೆ, ವಿದ್ಯಾಗಿರಿಯ ಜನರಿಗೆ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರೆ ನಂಬಲೇಬೇಕು. ಕಾರಣ, ಕಳೆದ 20 ದಿನಗಳಿಂದ ನೀರು ಪೂರೈಕೆ ನಿಂತಿದೆ. ಕುಡಿಯುವ ನೀರಿಗಾಗಿ ನಗರದ ವಿವಿಧೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗಿ ಜನ ತರುತ್ತಿದ್ದಾರೆ.

ಆದರೆ, ದಿನ ಬಳಕೆಗೆ ಒಂದು ಹನಿ ನೀರೂ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ. ಒಂದೆಡೆರಡು ದಿನವಾದರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ, 20 ದಿನಗಳ ವರೆಗೆ ನೀರೇ ಬರದಿದ್ದರೆ ಏನು ಮಾಡೋದು ಎಂಬುದು ವಿದ್ಯಾಗಿರಿಯ ಜನರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಲು ಅಥವಾ ನೀರಿನ ಪರ್ಯಾಯ ವ್ಯವಸ್ಥೆ ಮಾಡಲು ಇಲ್ಲಿಂದ ಆಯ್ಕೆಯಾಗಿ ಹೋದ ಯಾವುದೇ ಜನಪ್ರತಿನಿಧಿಯೂ ಇತ್ತ ಕಾಲಿಟ್ಟಿಲ್ಲ ಎಂಬುದು ಜನರ ಆರೋಪ.

ಏನು ಕಾರಣ?: ಇಲ್ಲಿನ ನವನಗರದ ಯಮನೂರಪ್ಪ ದರ್ಗಾದಿಂದ ರಾಯಚೂರ-ಬಾಚಿ ಹೆದ್ದಾರಿಗೆ ಕೂಡುವ (ಮಹಾರಾಜ ಗಾರ್ಡನ್‌ ಬಳಿ ಹಾದು ಹೋಗುವ) ಮಧ್ಯದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಲಾಗುತ್ತಿದೆ. ಯಮನೂರಪ್ಪನ ದರ್ಗಾ ಹಿಂದುಗಡೆ ಗುಡ್ಡದ ಮೇಲೆ, ಇಡೀ ವಿದ್ಯಾಗಿರಿಗೆ ನೀರು ಪೂರೈಸುವ ಬೃಹತ್‌ ನೀರು ಸಂಗ್ರಹ ಟ್ಯಾಂಕ್‌ ಇದ್ದು, ಅಲ್ಲಿಂದ ಸುಮಾರು 450 ಎಂಎಂ ಗಾತ್ರದ ಪೈಪ್‌ಲೈನ್‌ ಅಳವಡಿಸಿ, ವಿದ್ಯಾಗಿರಿಗೆ ನೀರು ಪೂರೈಸುವ ವ್ಯವಸ್ಥೆ ಇದೆ. ಆದರೆ, ಈ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ನೀರಿನ ಟ್ಯಾಂಕ್‌ನಿಂದ ವಿದ್ಯಾಗಿರಿ ಬಡಾವಣೆಗೆ ಸಂಪರ್ಕಿಸುವ ಪೈಪ್‌ಲೈನ್‌, ಇದೇ ರಸ್ತೆಯ
ಪಕ್ಕದಲ್ಲಿದ್ದು, ಅವುಗಳನ್ನು ಹೊರ ತೆಗೆದು ರಸ್ತೆ ಅಗಲೀಕರಣ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ ಎಂಬುದು ನಗರಸಭೆ ಅಧಿಕಾರಿಗಳ ವಿವರಣೆ.

Advertisement

ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೈಪ್‌ಗ್ಳನ್ನು ಹೊರ ತೆಗೆಯಲಾಗಿದೆ. ಹೀಗಾಗಿ ವಿದ್ಯಾಗಿರಿ ಬಡಾವಣೆ ನೀರು ಪೂರೈಕೆ ಕೆಲ ದಿನಗಳಿಂದ ಸ್ಥಗಿತಗೊಂಡಿದೆ. ವಿದ್ಯಾಗಿರಿಯಲ್ಲಿ ಸುಮಾರು 28ಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು ಅವುಗಳಿಂದ ತಾತ್ಕಾಲಿವಾಗಿ ನೀರು ಕೊಡಲಾಗುತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಶುಕ್ರವಾರ ಪೈಪ್‌ಲೈನ್‌ ಪುನಃ ಅಳವಡಿಸುವ ಕೆಲಸ ನಡೆದಿದೆ. ಅದು ಶನಿವಾರ ಸಂಜೆಯ ಹೊತ್ತಿಗೆ ಮುಗಿಯಲಿದ್ದು, ರವಿವಾರದಿಂದ ಪುನಃ ಎಂದಿನಂತೆ ನೀರು ಪೂರೈಕೆ ಆರಂಭಗೊಳ್ಳಲಿದೆ.
ನವೀದ ಖಾಜಿ, ಎಂಜಿನಿಯರ್‌, ನಗರಸಭೆ

ಕಳೆದ 20 ದಿನಗಳಿಂದ ನೀರು ಬಂದಿಲ್ಲ. ಸ್ವತಃ ಕೊಳವೆ ಬಾವಿ ಹೊಂದಿರುವ ಮನೆಯವರ ಎದುರು ನೀರು ಕೊಡ್ರಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪಾತ್ರೆ -ಬಟ್ಟೆ ತೊಳೆಯಲು, ಶೌಚಾಲಯ ಬಳಕೆಗೂ ನೀರಿಲ್ಲ.
ವಿಜಯಲಕ್ಷ್ಮೀ,
ವಿದ್ಯಾಗಿರಿ ನಿವಾಸಿ

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next