Advertisement

ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರತಿಷ್ಠಿತ ಕ್ಷೇತ್ರ

11:38 AM Mar 24, 2018 | Team Udayavani |

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಾಜಿನಗರ ಕೂಡ ಒಂದು. ಕಾರಣ, ರಾಜ್ಯದ ಶಕ್ತಿ
ಕೇಂದ್ರ ವಿಧಾನಸೌಧ ಇರುವುದು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ. ಬಡ ಮತ್ತು ಮಧ್ಯಮ ವರ್ಗ ಹೆಚ್ಚಾಗಿ ವಾಸಿಸುವ ಬಡಾವಣೆಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಅಭಿವೃದ್ಧಿ “ಛಾಯೆ’ ಮಂಕಾಗಿದೆ. ಬೆಂಗಳೂರಿನ ಚೋಟಾ ಮುಂಬೈ ಅಂತಲೂ ಕರೆಸಿಕೊಳ್ಳುವ ಶಿವಾಜಿನಗರ ಉರ್ದು ಮತ್ತು ತಮಿಳು ಭಾಷಿಕರ ಪ್ರಾಬಲ್ಯ ಹೊಂದಿರುವ ಕ್ಷೇತ್ರ.

Advertisement

ಕ್ಷೇತ್ರದಲ್ಲಿ ಕೆಲವೆಡೆ ರಸ್ತೆ, ಕುಡಿಯುವ ನೀರು, ಬೀದಿ ದೀಪದಂತಹ ಮೂಲ ಸೌಕರ್ಯ ಕಲ್ಪಿಸಲಾಗಿದೆಯಾದರೂ ಕಸ ವಿಲೇವಾರಿ ಸಮಸ್ಯೆ ಬೆಟ್ಟದಷ್ಟಿದೆ. ರಸೆಲ್‌ ಮಾರ್ಕೆಟ್‌ ಹಾಗೂ ಸುತ್ತಲಿನ ಮಾರುಕಟ್ಟೆ ಪ್ರದೇಶ ಸೇರಿದಂತೆ ಅನೇಕ ಜನವಸತಿ ಪ್ರದೇಶಗಳಲ್ಲಿ ಕಸವಿಲೇವಾರಿ ದೈನಂದಿನ ಸಮಸ್ಯೆಯಾಗಿದೆ. 

ರಸೆಲ್‌ ಮಾರ್ಕೆಟ್‌ ಸುತ್ತಲ್ಲಿನ ವಾಣಿಜ್ಯ ಪ್ರದೇಶ ಹಾಗೂ ಇದಕ್ಕೆ ಹೊಂದಿಕೊಂಡ ಜನವಸತಿ ಪ್ರದೇಶಗಳಲ್ಲಿ ಕಸವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಭಾಗದಲ್ಲಿ ಸಣ್ಣ ವ್ಯಾಪಾರಿಗಳ ದೊಡ್ಡ ಮಾರುಕಟ್ಟೆ ಇದ್ದು ಅಲ್ಲಿ ಸೂಕ್ತ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕ್ಷೇತ್ರದಲ್ಲಿ ರಾಜಕಾಲುವೆ ಮಾರ್ಗವೂ ಹೆಚ್ಚಾಗಿದ್ದು ಮಳೆ ಬಂದಾಗ ಅಕ್ಕ-ಪಕ್ಕದ ಪ್ರದೇಶಗಳಿಗೆ ನೀರು ನುಗ್ಗುವುದು ಸಾಮಾನ್ಯ. ರಾಜಕಾಲುವೆಯಲ್ಲಿ ಹೂಳು ತೆಗೆದು ತಡೆಗೋಡೆ ನಿರ್ಮಿಸುವ ಕಾಮಗಾರಿ ನಿರಂತರವಾಗಿ ನಡೆಯುತ್ತಲೇ ಇದ್ದರೂ ಪರಿಹಾರ ಮಾತ್ರ ಕಂಡಿಲ್ಲ.

ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಆರ್‌.ರೋಷನ್‌ಬೇಗ್‌ ಪ್ರತಿನಿಧಿಸುತ್ತಿರುವ ಈ ಕ್ಷೇತ್ರ ರಾಜಕೀಯವಾಗಿ ಸಾಕಷ್ಟು ಮಹತ್ವ ಹೊಂದಿದೆ. ಇತ್ತೀಚೆಗೆ ಆರೆಸ್ಸೆಸ್‌ ಕಾರ್ಯಕರ್ತ ರುದ್ರೇಶ್‌ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ಪ್ರಕರಣದ ಬಳಿಕ ಇಲ್ಲಿನ ರಾಜಕೀಯ ಚಿತ್ರಣ ಸಂಘರ್ಷದಿಂದ ಕೂಡಿದಂತಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಹಲಸೂರು, ಭಾರತಿನಗರ, ಶಿವಾಜಿನಗರ, ವಸಂತನಗರ, ಸಂಪಂಗಿರಾಮನಗರ, ಜಯಮಹಲ್‌, ರಾಮಸ್ವಾಮಿಪಾಳ್ಯ ವಾರ್ಡ್‌ಗಳಿದ್ದು, ಇದರಲ್ಲಿ 5 ಕಾಂಗ್ರೆಸ್‌ ಹಾಗೂ ಎರಡು ಬಿಜೆಪಿ ಪಾಲಿಕೆ ಸದಸ್ಯರಿದ್ದಾರೆ

Advertisement

ಕ್ಷೇತ್ರದ ಬೆಸ್ಟ್‌ ಏನು?
250 ಕೋಟಿ ರೂ. ವೆಚ್ಚದಲ್ಲಿ 150 ಸೀಟುಗಳ ಬೌರಿಂಗ್‌ ಮೆಡಿಕಲ್‌ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿರುವುದು. 20 ಕೋಟಿ ರೂ. ವೆಚ್ಚದಲ್ಲಿ ಬ್ರಾಡ್‌ವೇ ರಸ್ತೆಯಲ್ಲಿ ಸೂಪರ್‌ ಸ್ಪೇಷಾಲಿಟಿ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ನಗರದಲ್ಲಿ ಟೆಂಡರ್‌ ಶ್ಯೂರ್‌ನಡಿ ಅಭಿವೃದ್ಧಿಪಡಿಸಿದ ಮೊದಲ ರಸ್ತೆ ಎಂಬ ಖ್ಯಾತಿ ಕೂಡ ಕನ್ನಿಂಗ್‌ ಹ್ಯಾಂ ರಸ್ತೆಯದು.  

ಕ್ಷೇತ್ರದ ದೊಡ್ಡ ಸಮಸ್ಯೆ? 
ಶಿವಾಜಿನಗರದ ಬಹುತೇಕ ರಸ್ತೆಗಳಲ್ಲಿ ಕಸದ ರಾಶಿ ಕಂಡೇ ಕಾಣುತ್ತದೆ. ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗದ ಕಾರಣ ಕ್ಷೇತ್ರದಾದ್ಯಂತ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಸದ ಕ್ಷೇತ್ರದ ಮಳೆಗಾಲದಲ್ಲಿ ರಾಜಕಾಲುವೆಯಿಂದ ಪ್ರವಾಹ ಉಂಟಾಗುವುದು. ಬೇಸಿಗೆಯಲ್ಲಿ ಕುಡಿಯುವ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವುದು, ಒಳಚರಂಡಿ ಮ್ಯಾನ್‌ಹೋಲ್‌ ಹಾಗೂ ರಾಜಕಾಲುವೆಗಳಿಗೆ ಪ್ರಾಣಿಜನ್ಯ ತ್ಯಾಜ್ಯ ಸುರಿಯುವುದರಿಂದ ನೈರ್ಮಲ್ಯ ಕಾಣದಾಗಿದೆ.

ಪೈಪೋಟಿ
ಸಚಿವ ರೋಷನ್‌ ಬೇಗ್‌ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಅವರ ಪುತ್ರ ರುಮಾನ್‌ ಬೇಗ್‌ ಸ್ಪರ್ಧಿಸುವ ವದಂತಿಯೂ ಇದೆ.
ಬಿಜೆಪಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡು, ನಿರ್ಮಲ್‌ಕುಮಾರ್‌ ಸುರಾನ, ಗೋಪಿ, ಸರವಣ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ರಾಜಣ್ಣ ಹಾಗೂ ಸ್ಟೀಫ‌ನ್‌ ಟಿಕೆಟ್‌ ಆಕಾಂಕ್ಷಿಗಳು. ಜತೆಗೆ ಆಪ್‌ನ ಆಯೂಬ್‌ ಖಾನ್‌ ಕೂಡ ಪ್ರಚಾರದಲ್ಲಿ ತೊಡಿಗಿಸಿಕೊಂಡಿದ್ದಾರೆ. 

ಕ್ಷೇತ್ರದ ಮಹಿಮೆ
ಸೇಂಟ್‌ ಬೆಸಿಲಿಕ ಚರ್ಚ್‌, ಸುಲ್ತಾನ್‌ ಷಾ ಮಸೀದಿ, ಸೋಮೇಶ್ವರ ದೇವಾಲಯ, ಗುರುದ್ವಾರ, ತಮಿಳು ಕವಿ ತಿರುವಳ್ಳುವರ್‌ ಪ್ರತಿಮೆ ಇಲ್ಲಿದೆ. ಸೇಂಟ್‌ ಬೆಸಿಲಿಕ ಚರ್ಚ್‌ನ ವಾರ್ಷಿಕ “ಸೇಂಟ್‌ ಮೇರಿ ಫೆಸ್ಟಿವಲ್‌’ ಖ್ಯಾತಿ ಪಡೆದಿದೆ. ವಿಧಾನಸೌಧ, ಕೆಪಿಸಿಸಿ ಕಚೇರಿ, ಬಿಬಿಎಂಪಿ ಕೇಂದ್ರ ಕಚೇರಿ, ರಸೆಲ್‌ ಮಾರ್ಕೆಟ್‌, ಕಮರ್ಷಿಯಲ್‌ ಸ್ಟ್ರೀಟ್‌, ಬಂಬೂಬಜಾರ್‌, ಜಯಮಹಲ್‌ ಪ್ಯಾಲೇಸ್‌, ಬೌರಿಂಗ್‌
ಆಸ್ಪತ್ರೆ, ಬ್ರಿಟೀಷರ ಶೈಲಿಯ ಕಟ್ಟಡಗಳಿರುವ ಕಂಟೋನ್ಮೆಂಟ್‌ ಪ್ರದೇಶ ಈ ಕ್ಷೇತ್ರದಲ್ಲಿವೆ. 

ಜನದನಿ
ಅನೇಕ ಕಡೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಆಗಿದೆ. ಕರೆಂಟ್‌ ಪ್ರಾಬ್ಲಿಂ ಇಲ್ಲ. ಕಸವಿಲೇವಾರಿಯದ್ದೇ ಇಲ್ಲಿ ದೊಡ್ಡ ಸಮಸ್ಯೆ. ಮಳೆ ಬಂದಾಗ ನಾಲೆಯ ನೀರು ವಸತಿ ಪ್ರದೇಶಗಳಿಗೆ ನುಗ್ಗುತ್ತಿತ್ತು. ಈಗಷ್ಟೇ ನಾಲೆಗೆ ತಡೆಗೋಡೆ ಕಟ್ಟಲಾಗಿದೆ.
ನದೀಮ್‌ ಶರೀಫ್ 

ಈ ಹಿಂದೆ ಓಟ್‌ ಕೇಳ್ಳೋಕೆ ಬಂದವರು, ಆಮೇಲೆ ನಾವು ಬದುಕಿದ್ದೆವೋ, ಸತ್ತಿದ್ದೆವೋ ಎಂದೂ ನೋಡಿಲ್ಲ. ಪ್ರಾಬ್ಲಿಂಗಳಲ್ಲೇ ದಿನ ಕಳೆಯುತ್ತಿದ್ದೇವೆ. ಈ ಬಾರಿ ಓಟು ಕೇಳ್ಳೋಕೆ ಬಂದವರಿಗೆ “ಪೊರಕೆ ಸೇವೆ’ ಗ್ಯಾರಂಟಿ.
ಅನಿತಾ 

ಚುನಾವಣೆ ಮೂರು ತಿಂಗಳು ಇರುವಾಗ ಅಭಿವೃದ್ಧಿ ಕೆಲಸಗಳು ಆರಂಭವಾಗಿವೆ. ಬಡವರನ್ನು ಭಿಕ್ಷುಕರಂತೆ ಸರತಿ ಸಾಲಿನಲ್ಲಿ ನಿಲ್ಲಿಸಿದ್ದು, ಕ್ಷೇತ್ರದ ಸರ್ಕಾರಿ ಶಾಲೆ, ಜಾಗಗಳನ್ನು ಖಾಸಗಿಯವರಿಗೆ ಕೊಟ್ಟಿದ್ದೇ ದೊಡ್ಡ ಸಾಧನೆ. 
ಸೈಯದ್‌ ಜಾಫ‌ರ್‌

ರಾಜೀವಗಾಂಧಿ ಕಾಲೋನಿಯಲ್ಲಿ ಸಾರ್ವಜನಿಕ ಶೌಚಾಲಯ ಇರಲಿಲ್ಲ. ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಈಗಷ್ಟೇ ಕಾಮಗಾರಿ ಆರಂಭಗೊಂಡಿದೆ. ಏರಿಯಾದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ಕಸದ ಸಮಸ್ಯೆ ವಿಪರೀತವಾಗಿದೆ. 
ಶಿವಕುಮಾರ್‌

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next